Thursday, 19th September 2024

ತೈಲ ದರ ಏರಿಕೆ, ಇ ವಾಹನಗಳತ್ತ ಜನತೆ

*ಬಳಕೆ, ನಿರ್ವಹಣಾ ವೆಚ್ಚ
*ಕಡಿಮೆ ದುಬಾರಿ ತೆರಿಗೆಯಿಂದಲೂ ಬಚಾವ್

ವಿಶೇಷ ವರದಿ: ಅಪರ್ಣಾ ಎ.ಎಸ್.

ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೆ ಏರಿಕೆಯಾಗುತ್ತಿರುವ ಹೊಸ್ತಿಲಿನಲ್ಲಿಯೇ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.

ಎಲೆಕ್ಟ್ರಿಕ್ ವಾಹನಗಳು ನಿರೀಕ್ಷಿತ ಮಟ್ಟದಲ್ಲಿ ಮೈಲೇಜ್ ನೀಡುವುದಿಲ್ಲ, ವೇಗವಾಗಿ ಹೋಗುವುದಿಲ್ಲ ಎಂದು ವಾಹನ ಖರೀದಿ
ಸಲು ಅನೇಕರು ಹಿಂದೇಟು ಹಾಕುತ್ತಿದ್ದರು. ಆದರೀಗ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದಂತೆ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದ್ದಾರೆ. ಅದರಲ್ಲಿಯೂ ಬೆಂಗಳೂರು ಮಂದಿ ಹೆಚ್ಚು ಖರೀದಿಗೆ ಮುಗಿಬಿದಿದ್ದಾರೆ ಎನ್ನುವುದು ಅಂಕಿ- ಅಂಶದಿಂದ ತಿಳಿದುಬಂದಿದೆ.

ಪೆಟ್ರೋಲ್, ಡೀಸೆಲ್ ವಾಹನಗಳಿಗೆ ದುಬಾರಿ ರಸ್ತೆ ತೆರಿಗೆ ಇರುವುದರಿಂದ ಪರ್ಯಾಯವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಮನೆಯಿಂದ ಕಚೇರಿ, ಮಾರುಕಟ್ಟೆಗೆ ಓಡಾಡುವವರು ಇ-ವಾಹನಗಳತ್ತ ಹೆಚ್ಚು ಆಕರ್ಷಿತರಾಗಿದ್ದು, 100 ರು.ಗೆ ಒಂದು ಲೀಟರ್ ಪೆಟ್ರೋಲ್ ಹಾಕಿಸುವ ಬದಲು 20-25ರು.ನಲ್ಲಿ 80-100 ಕಿ.ಮೀ. ದೂರ ಕ್ರಮಿಸಬಹುದಾದ, ನಿರ್ವಹಣೆ ದೃಷ್ಟಿಯಿಂದ ಪೆಟ್ರೋಲ್ ವಾಹನಗಳಿಗಿಂತ ಅತ್ಯಂತ ಸರಳವಾದ ಇ- ಸ್ಕೂಟರ್‌ಗಳಿಗೆ ಮನ ಸೋಲುತ್ತಿದ್ದಾರೆ.

ನೋಂದಣಿ, ಹೆಲ್ಮೆಟ್ ಕಿರಿಕಿರಿ ಇಲ್ಲ: ಮಹಾನಗರ ವ್ಯಾಪ್ತಿಯಲ್ಲಿ ಈಗಾಗಲೇ ಕನಿಷ್ಠ 8-12 ವಿವಿಧ ಮಾದರಿಯ ಸ್ಕೂಟರ್ ಲಭ್ಯವಿದ್ದು, 43 ಸಾವಿರದಿಂದ 1.40 ಲಕ್ಷ ವರೆಗೂ ಬೆಲೆ ಇದೆ. ಈ ಸ್ಕೂಟರ್‌ಗಳ ವೇಗವು 25 ಕಿ.ಮೀಗಿಂತ ಕಡಿಮೆಯಿರುವುದರಿಂದ ಆರ್ ಟಿಓ ನೋಂದಣಿ ಅಗತ್ಯವಿಲ್ಲ. ಹೆಲ್ಮೆೆಟ್ ಧಾರಣೆ ಕಡ್ಡಾಯವಲ್ಲ. 14 ವರ್ಷ ಮೇಲ್ಪಟ್ಟವರು ಚಾಲನೆ ಮಾಡಬಹುದಾಗಿದೆ. ಹೀಗಾಗಿ ಈ ಸ್ಕೂಟರ್‌ಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆಯಲ್ಲದೇ ಹೆಚ್ಚು ಖರೀದಿಯಾಗುತ್ತಿವೆ. ಅನುಕೂಲಗಳಂತೆ ಸಮಸ್ಯೆಗಳೂ ಇವೆ ಬೇಕಾದ ಕಡೆಗೆ ಚಾರ್ಜಿಂಗ್ ಕೇಂದ್ರಗಳಿಲ್ಲ. ದೂರದ ಪ್ರಯಾಣಕ್ಕೆ ಅಷ್ಟೊಂದು ಸೂಕ್ತವಲ್ಲ, ಚಾರ್ಜಿಂಗ್ ಮಾಡಲು ಸಾಕಷ್ಟು ಸಮಯ ಬೇಕು.

ಇತರ ಇಂಧನ ವಾಹನಗಳಿಗೆ ಹೋಲಿಸಿದರೆ ಇದರ ವೇಗ ಅತಿ ಕಡಿಮೆ. ಎಲೆಕ್ಟ್ರಿಕ್ ವಾಹನಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಬೆಸ್ಕಾಂ 126 ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಮುಂದಾಗಿದ್ದು,  ಹೆದ್ದಾರಿಗಳಲ್ಲಿ ಹಾಗೂ ಕೆಲವು ನಿಗದಿತ ಸ್ಥಳಗಳಲ್ಲಿ ಚಾರ್ಜಿಂಗ್ ಕೇಂದ್ರ ತೆರೆಯಲಿದೆ. ಮಾತ್ರವಲ್ಲದೆ, ಕೆಲವು ಪೆಟ್ರೋಲ್ ಬಂಕ್‌ಗಳಲ್ಲೂ ಚಾರ್ಜಿಂಗ್
ಕೇಂದ್ರಗಳನ್ನು ಆರಂಭಿಸಲು ಬಂಕ್ ಮಾಲೀಕರು ಮುಂದೆ ಬಂದಿದ್ದಾರೆ.

ಪೂರ್ವ ಬೆಂಗಳೂರಲ್ಲೇ ಹೆಚ್ಚು ಬಳಕೆ
ಪೆಟ್ರೋಲ್, ಡೀಸೆಲ್ ಬಳಕೆ ಮೂಲಕ ಚಲಿಸುವ ವಾಹನಗಳ ಬಳಕೆ ಕಡಿಮೆ ಮಾಡಲು, ಬೆಂಗಳೂರು ಪೂರ್ವ ಭಾಗದಲ್ಲಿ
ಹೆಚ್ಚು ಮಂದಿ ಎಲೆಕ್ಟ್ರಿಕ್ ವಾಹನ ನೋಂದಣಿ ಮಾಡಿಸಿಕೊಂಡಿರುವುದು ಸಾರಿಗೆ ಇಲಾಖೆ ಮಾಹಿತಿಯಿಂದ ತಿಳಿದಿದ್ದು, ಈ
ಭಾಗದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ 4,882 ಎಲೆಕ್ಟ್ರಿಕ್ ವಾಹನಗಳ ನೋಂದಣಿಯಾಗಿದೆ. ಎಲೆಕ್ಟಾನಿಕ್ ಸಿಟಿಯಲ್ಲಿ
3,812, ಕೋರಮಂಗಲದಲ್ಲಿ 1,869, ಕೆ.ಆರ್.ಪುರದಲ್ಲಿ 1,213, ರಾಜಾಜಿನಗರದಲ್ಲಿ 1,060, ಬೆಂಗಳೂರು ಉತ್ತರದ ಯಶವಂತ ಪುರದಲ್ಲಿ 966, ಜ್ಞಾನಭಾರತಿಯಲ್ಲಿ 297, ಯಲಹಂಕದಲ್ಲಿ 214 ಎಲೆಕ್ಟ್ರಿಕ್ ವಾಹನಗಳ ನೋಂದಣಿಯಾಗಿವೆ.

ಅನುಕೂಲಗಳು
*ಮೊಬೈಲ್‌ನಂತೆ ಸುಲಭವಾಗಿ ಚಾರ್ಜ್ ಮಾಡಬಹುದು
*ಬಾಕಿ ಇಂಧನಗಳ ವಾಹನಕ್ಕಿಂತ ಇ- ವಾಹನದ ಖರ್ಚು ಕಡಿಮೆ
*ಅಪಾಯಕಾರಿ ಹೊಗೆ ಹೊರಸೂಸುವುದಿಲ್ಲ. ರಸ್ತೆ ತೆರಿಗೆ ಭಾರವೂ ಇಲ್ಲ
*ಅತ್ಯಂತ ಕಡಿಮೆ ವೆಚ್ಚದಲ್ಲಿ ಸಂಚಾರ ಮಾಡಬಹುದು.

ಕೋಟ್‌

ಸ್ವಚ್ಛ, ಸ್ವಸ್ಥ ಹಾಗೂ ಪರಿಸರ ಸ್ನೇಹಿ ಮಹಾನಗರದ ರಚನೆಗೆ ವಾಯು ಮಾಲಿನ್ಯ ತಡೆಗಟ್ಟುವ ಇ-ವಾಹನ ಗಳ ಖರೀದಿಗೆ
ಜನರಿಗೆ ಉತ್ತೇಜನ ನೀಡುವುದು ಬಹು ಮುಖ್ಯ. ಪೆಟ್ರೋಲ್ ದರ ಏರಿಕೆ, ರಸ್ತೆ ತೆರಿಗೆ ವಿನಾಯಿತಿ, ಪರಿಸರ ರಕ್ಷಣೆ ದೃಷ್ಟಿಯಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ. ಜನರು ಕೂಡ ವಾಹನಗಳ ಬಗ್ಗೆ ಹೆಚ್ಚೆಚ್ಚು ವಿಚಾರಿಸುತ್ತಿದ್ದಾರೆ. ನಮ್ಮಲ್ಲಿ 43 ಸಾವಿರ ರು.ದಿಂದ ದರ ಆರಂಭವಾಗುತ್ತದೆ. ನಗರವಾಸಿಗಳಿಗೆ ಹೇಳಿ ಮಾಡಿಸಿದ ವಾಹನಗಳಾಗಿವೆ.
– ಸುಖದೇವಸಿಂಗ್ ಛೆಡ್ಡಾ ಎಂಡಿ, ಛೆಡ್ಡಾ ಆಟೋ ಎಲೆಕ್ಟ್ರಿಕ್

Leave a Reply

Your email address will not be published. Required fields are marked *