ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 56
ದೈತ್ಯ ಆನೆಯ ಸೂಕ್ಷ್ಮ ಸಂಗತಿ ತಿಳಿಸಿದ ಗಜಪಾಲಕ ಮನೋಜ್ ಕುಮಾರ್
ಬೆಂಗಳೂರು: ಆನೆಗಳು ಕೂಡ ಮನುಷ್ಯರಂತೆಯೇ ಕುಟುಂಬ ಜೀವಿಗಳು. ಇವುಗಳಲ್ಲೂ ಕುಟುಂಬ ಅಥವಾ ಗುಂಪಿಗೊಂದು ಯಜಮಾನ ಇರುತ್ತದೆ. ಅದರ ಸೂಚನೆ ಅನುಸಾರವೇ ಪ್ರತಿಯೊಂದು ಸದಸ್ಯ ಆನೆಯೂ ನಡೆದುಕೊಳ್ಳುತ್ತದೆ. ಆನೆಗಳು ಬೆಂಗಾಲಿ ಭಾಷೆಯನ್ನು ಅರ್ಥ ಮಾಡಿಕೊಳ್ಳತ್ತವೆ.
ಆನೆಗಳ ಸಹವಾಸ ಜೇನಿನಂತಿರಬಹುದು, ಮಿತಿ ಮೀರಿ ವರ್ತಿಸಿದರೆ ಹೆಜ್ಜೇನು ದಾಳಿಯಂತೆ ಎಂದು ಮುಖ್ಯ ಅರಣ್ಯಸಂರಕ್ಷಣಾಧಿಕಾರಿ, ಗಜಪಾಲಕ ಮನೋಜ್ ಕುಮಾರ್ ಹೇಳಿದರು. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ಆನೆಗಳ ದಂತ, ಸೊಂಡಿಲು, ದೇಹ ರಚನೆ ಸೇರಿ ಆನೆಗಳ ಕೌತುಕ ಕುರಿತು ಮಾತನಾಡಿದರು.
ಆನೆಯಿಂದ ಮನುಷ್ಯರಿಗೆ, ಮನುಷ್ಯರಿಂದ ಆನೆಗೆ ಬಹಳಷ್ಟು ತೊಂದರೆ ಆಗುತ್ತಿರಬಹುದು. ಆದರೆ ಇವರಿಬ್ಬರ ನಡುವೆ ಅವಿನಾಭಾವ ಸಂಬಂಧವಿದೆ. ನಿತ್ಯ ಬೆಳೆ ತಿಂದು ನಾಶ ಮಾಡುತ್ತಿದ್ದ ಆನೆ ಆಕಸ್ಮಿಕವಾಗಿ ಮೃತಪಟ್ಟರೆ ಕಣ್ಣಿರಿಡದ ಜನರಿಲ್ಲ. ಅದೇ ರೀತಿ ಪ್ರೀತಿಯ ಮಾವುತ, ಮಾಲೀಕ ಅಗಲಿದರೆ ಆನೆಯು ಅನ್ನಾಹಾರ ಬಿಟ್ಟು ಕೊರಗುತ್ತದೆ ಎಂದರು. ಆನೆ ಒಂದು ಮರಿ ಹಾಕಿ ಯಾವುದೋ ಕಾರಣಕ್ಕೆ ತಾಯಿ ಸಾವನ್ನಪ್ಪಿರುತ್ತದೆ ಎಂದು ಭಾವಿಸೋಣ. ಇನ್ನೊಂದು ತಾಯಿ ತನ್ನ ಮರಿ ಜತೆಯೇ ಪೋಷಿಸುತ್ತದೆ. ಇದು ಸಂಘ ಜೀವಿ ಎಂದರು.
ವಿಶ್ವ ಆನೆಗಳ ದಿನದಂದು ಆನೆಗಳ ಕುತೂಹಲಕಾರಿ ಗುಣಗಳ ಕುರಿತು ಅರಣ್ಯಾಧಿಕಾರಿ ಮನೋಜ್ ಕುಮಾರ್ ಮನೋಜ್ಞವಾಗಿ ವಿವರಿಸಿದ್ದು, ಅದರಲ್ಲಿ ಆಯ್ದ ಪ್ರಮುಖ ಅಂಗಳು ಇಂತಿವೆ. ಆನೆಗಳು ಸಂಘಜೀವಿಗಳು, ಅವು ಗಳಿಗೂ ಮನಸಿದೆ. ತನ್ನವರು ಮರಣ ಹೊಂದಿದಾಗ ಕಂಬನಿ ಮಿಡಿಯುತ್ತವೆ. ತನ್ನ ಇರುವಿಕೆಯ ಜಾಡನ್ನು ಎಷ್ಟೇ ದೂರಕ್ಕೆ ಕೊಂಡೊಯ್ದು ಬಿಟ್ಟರೂ ಕಂಡುಹಿಡಿದುಕೊಳ್ಳುತ್ತವೆ. ಮನುಷ್ಯರನ್ನು ಪ್ರೀತಿಸುತ್ತವೆ.
ತೊಂದರೆ ಕೊಟ್ಟರೆ ದ್ವೇಷಿಸುತ್ತವೆ. ಆನೆ ನಡೆದಿದ್ದೆ ದಾರಿ ಎಂಬ ಗಾದೆ ಮಾತಿನಂತೆಯೇ ತಮ್ಮ ದಾರಿಯಲ್ಲಿ ಅಡ್ಡ ಬರುವ ವಸ್ತುಗಳ ಮೇಲೆ ತಮ್ಮ ಪ್ರತಾಪ ತೋರಿಸುತ್ತವೆ. ಅಡೆತಡೆಗಳನ್ನು ಅಗತ್ಯಗಳಿಗನುಗುಣವಾಗಿ ಅರಿತುಕೊಂಡು ಜತೆಗೂಡಿ ಬಗೆಹರಿಸಿಕೊಳ್ಳುತ್ತವೆ ಎಂದು ವಿಶ್ಲೇಷಿಸಿದರು. ಯಾವುದೋ ಗುಂಪು ನಲ್ಲಿ ಆನೆ ಸತ್ತರೆ, ಶೋಕಾಚರಣೆ ಮಾಡುವ ಪ್ರವೃತ್ತಿ ಆನೆಯ ಕುಟುಂಬದಲ್ಲಿದೆ. ಚಾಮರಾಜನಗರದಲ್ಲಿ ಒಂದು ಆನೆ ಮರಿ ರಸ್ತೆಯಲ್ಲಿ ಸತ್ತಿತ್ತು. ಸತ್ತ ಮರಿ ಸುತ್ತ ಆನೆಗಳು ಶೋಕಾಚರಣೆ ಮಾಡಿದವು. ಆಗ ನಾವು ಜೆಸಿಬಿ ಮೂಲಕ ರಸ್ತೆಯಲ್ಲಿದ್ದ ಆನೆಗಳನ್ನು ಚದುರಿಸಲು ಅಸಾಧ್ಯವಾಯಿತು. ಆಗ ನಾವು ಪರ್ಯಾಯ ರಸ್ತೆ ಮಾರ್ಗ ಕಂಡುಕೊಂಡೆವು. ಆನೆಗಳ ಸಂಪ್ರದಾಯ ಅರ್ಥವಾಗದ ಪರಿಸ್ಥಿತಿ ಇದೆ. ಆನೆಮರಿ ಸತ್ತರೆ ಅದರ ತಾಯಿ ಹೂಳಲು ಬಿಡಲ್ಲ. ಮೀರಿ ನಾವು ಶವ ಸಂಸ್ಕಾರ ಮಾಡಿದರೆ ಪುನಃ ಬಂದು ಅಲ್ಲೇ ನಿಲ್ಲುತ್ತದೆ ಎಂದು ಹೇಳಿದರು.
ಆನೆಗಳ ಬುದ್ಧಿಶಕಿಯೂ ಹೆಚ್ಚು: ಆನೆಗಳ ಕುಟುಂಬ ಒಂದೆಡೆ ಸೇರಿ ಯೋಗಕ್ಷೇಮ ವಿಚಾರಣೆ ಮಾಡುವ ಸಂಪ್ರದಾಯ ಇದೆ. ಸಕಲೇಶಪುರದ ಆನೆ ಎಂಎಂ ಹಿಲ್ಸ್
ನಲ್ಲಿ ತಂದು ಬಿಟ್ಟರೆ ಹತ್ತು ದಿನ ಅಲ್ಲಿ ಉಳಿಯಲಿಲ್ಲ. ಅದು ಪುನಃ ಸಕಲೇಶಪುರದ ಕಡೆಗೆ ಹೋಯಿತು. ಬುದ್ಧಿಶಕ್ತಿಗೆ ಉದಾಹರಣೆ ಎಂದರೆ, ಆನೆ ಕಂದಕ ಮೂರು ಮೀಟರ್ ಆಳ ಮಾಡುತ್ತೇವೆ. ಒಂದು ಆನೆ ಕೆಳಗೆ ಇಳಿಯುತ್ತದೆ.
ಇನ್ನೊಂದು ಆನೆ ಬೆನ್ನು ಕೊಟ್ಟು ಮೇಲೇಳಲು ಸಹಾಯ ಮಾಡುತ್ತದೆ. ಸೋಲಾರ್ ಫೆನ್ಸ್ ಅನ್ನು ನಾವು ಬೇಲಿ ದಾಟಿದ ಹಾಗೆ ಹೋಗುತ್ತದೆ. ಪಟಾಕಿ ಸಿಡಿಯಲು ಎರಡು ಕಲ್ಲಿನ ಮಧ್ಯೆ ಇಡುತ್ತೇವೆ. ಕೆಳಗಿನ ಕಲ್ಲು ಒದೆಯುತ್ತದೆ. ರೈಲು ಬ್ಯಾರಿಕೇಡ್ ಹಾಕುತ್ತಿದ್ದೇವೆ. ಆದರೆ ಮಣ್ಣಿನ ದಿಣ್ಣೆಗಳ ಮೂಲಕ ರೈಲ್ ಬ್ಯಾರಿಕೇಡ್ ದಾಟಿ ಹೋಗುತ್ತವೆ. ಕೆಲವು ಆನೆಗಳು ನುಸುಳಿ ಹೋಗುತ್ತವೆ ದಾಂಡೇಲಿಯಿಂದ ಮಹಾರಾಷ್ಟ್ರಕ್ಕೆ ಆನೆಗಳು ಹೋಗುವ ದಾರಿಯಲ್ಲಿ ಅಲ್ಲೊಬ್ಬ ಆನೆಗೆ ಕಲ್ಲು ಒಡೆದ. ಕಲ್ಲು ಹೊಡೆದ ಹುಡುಗನನ್ನೇ ಹುಡುಕಿ ಸಾಯಿಸಿತು ಎಂದು ಅವರು ಮಾಹಿತಿ ನೀಡಿದರು.
ಅರಣ್ಯಾಧಿಕಾರಿ ಸಾವಿನಗುಟ್ಟು: ನಾಗರಹೊಳೆಯಲ್ಲಿ ಅರಣ್ಯಾಧಿಕಾರಿ ಮಣಿಕಂಠನನ್ನು ಆನೆ ಸಾಯಿಸಿದಾಗ ಆ ಘಟನಾ ಸ್ಥಳಕ್ಕೆ ಹೋಗಿ ಎಲ್ಲವನ್ನೂ ಪರಿಶೀಲಿಸಿ ದ್ದಾರೆ. ಅಧಿಕಾರಿ ಅರಣ್ಯ ಪ್ರದೇಶದಲ್ಲಿ ಕಿಂಚಿತ್ತೂ ಸುಡಬಾರದು ಎಂಬ ಬಯಕೆ ಅಧಿಕಾರಿಯದ್ದಾಗಿತ್ತು. ಒಂದು ದಿನ ನಾಗರಹೊಳೆಯಲ್ಲಿ ನಾಲ್ಕು ಹೆಕ್ಟೇರ್ ಗೆ ಬೆಂಕಿ ಬಿತ್ತು. ಆಗ ನೋಡಲು ಹೊರಟ. ಕೆರೆಯ ಪಕ್ಕದಲ್ಲಿ ಮಣ್ಣಿನ ದಿಣ್ಣೆ ಇತ್ತು. ಅದರ ಮೇಲೆ ಕಾರು ಹೋಗಬೇಕಿತ್ತು. ಆದರೆ ಅಲ್ಲಿ ಮೂಲಕವೇ ನೀರನ್ನು ಬೆಂಕಿ ನಂದಿಸಲು ತೆಗೆದುಕೊಂಡು ಹೋಗುತ್ತಿದ್ದರು ಸಂರಕ್ಷಕರು. ಅದೇ ಕೆರೆಯಲ್ಲಿ ಆನೆ ನೀರು ಕುಡಿಯಲು ಹೋಗಿತ್ತು. ಬಳಿಕ ಆನೆ ವಾಪಸ್ ಹೋಗುವಾಗ ಮಣಿಕಂಠ ಅದೇ ಸಮಯಕ್ಕೆ ಬಂದ. ಏರಿ ಏರುವಾಗ ಆನೆ ಬಂದಾಗ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮಣಿಕಂಠನನ್ನು ಓಡಿಸಿಕೊಂಡು ಹೋಗಿತ್ತು. ಬಳಿಕ ಆನೆ ತುಳಿದು ಸಾಯಿಸಿತು ಎಂದು ಅವರು ಹೇಳಿದರು.
ಮಾನವ-ಆನೆ ಸಂಘರ್ಷ ಕಡಿಮೆ ಮಾಡಲು ಸಹಕರಿಸಿ
ಮಾನವ-ಆನೆ ಸಂಘರ್ಷ ಹೆಚ್ಚಾಗುತ್ತಿದೆ. ಮಡಿಕೇರಿನಲ್ಲಿ ಮೂರು ವರ್ಷದ ಅವಧಿಯಲ್ಲಿ 23 ಮಂದಿ ಪ್ರಾಣ ಹೋಗಿರುವುದು ಗಮನಿಸಿದ್ದೇನೆ. ಹಾಸನದಲ್ಲೂ ಇಂತಹ ಸಮಸ್ಯೆ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆಯಿಂದ ಮಾತ್ರ ಸಂಘರ್ಷ ತಡೆಯಲು ಸಾಧ್ಯವಿಲ್ಲ. ಎಲ್ಲರ ಸಹಕಾರವೂ ಮುಖ್ಯ. ಆನೆ ಇರುವ ಕಡೆ ಜನ ಬರುತ್ತಾರೆ. ಆನೆಗಳನ್ನು ನರಹಂತಕ, ಕ್ರೂರಪ್ರಾಣಿ ಎಂಬ ಪಟ್ಟ ಕಟ್ಟುತ್ತೇವೆ. ಆನೆ ಮತ್ತು ಮಾನವ ಜತೆ ಸಹಬಾಳ್ವೆ ಸಾಧ್ಯವೆ ಎಂಬ ಅಧ್ಯಯನ ಮಾಡಿದ್ದೇವೆ. ರೈತರ ಪರವಾಗಿ ನಾವು ಕೆಲಸ ಮಾಡಿದರೆ ಸಂಘರ್ಷ ಕಡಿಮೆ ಮಾಡಬಹುದು. ಈಗಿರುವ ಯೋಜನೆಗಳಿಂದ ಶೇ.90 ರಷ್ಟು ಆನೆ ಸಂಘರ್ಷ ತಡೆಯಬಹುದು ಎಂದು ಅರಣ್ಯಾಧಿಕಾರಿ ಮನೋಜ್ ಕುಮಾರ್ ತಿಳಿಸಿದರು.
ಆನೆ ಕುರಿತು ಕೌತುಕದ ಸಂಗತಿಗಳು
? ಆನೆಗಳು ಆಹಾರಕ್ಕೆ 112 ವಿವಿಧ ಜಾತಿಯ ಸಸ್ಯಗಳ ಮೇಲೆ ಅವಲಂಬಿಸಿರುತ್ತವೆ.
? ಆನೆ ಲದ್ದಿ ತುಂಬಾ ಒರಟು, ಅವುಗಳ ಅಹಾರ ದಲ್ಲಿ ಶೇ.10 ರಷ್ಟು ಫೈಬರ್ಸ್ ಇರಬೇಕು.
? ಗಂಡಾನೆ ಮರದ ತೊಗಟೆ ತಿಂದು ಬದುಕುತ್ತದೆ. ಹೆಣ್ಣಾನೆ ತಿನ್ನುವುದಿಲ್ಲ.
? ಆನೆಗಳು 10 ಸಾವಿರ ಚದರ ಕಿ.ಮೀ.ನಲ್ಲಿ ಬೀಜವನ್ನು ಪಸರಿಸುತ್ತವೆ.
? ಕಷ್ಟ ಬಂದಾಗ ಆನೆಗಳಲ್ಲಿ ಸಹಾಯ ಮಾಡುವ ಗುಣವಿದೆ.
? ಆನೆಯ ಸೊಂಡಿಲಿನಲ್ಲಿ ಕೆಳಗಡೆ ಬಿದ್ದಿರುವ ಗುಂಡುಸೂಚಿಯನ್ನೂ ಎತ್ತುವ ಸಾಮರ್ಥ್ಯವಿದೆ.
? ಸೊಂಡಿಲಿನಲ್ಲಿ ಅರವತ್ತು ಸಾವಿರಕ್ಕೂ ಹೆಚ್ಚು ಸ್ನಾಯುಗಳು ಇವೆ.
? ಆನೆ-ಮಾವುತರದು ಗಂಡ ಹೆಂಡತಿ ಸಂಬಂಧವಿದ್ದಂತೆ.
ಆನೆಯ ಮೈ ಬಿಸಿಯಾಗಿರುತ್ತೆ ಏಕೆ ಗೊತ್ತಾ!
ಒಂದು ಆನೆ ವಯಸ್ಸಿಗೆ ಬಂದಾಗ ಹಾರ್ಮೋನ್ ಬದಲಾಗುತ್ತದೆ. ಟ್ರೆಸ್ಟಸ್ಟಿರಾನ್ ಎಂಬ ಹಾರ್ಮೋನ್. ಆನೆಯ ಕಿವಿಯ ಪಕ್ಕದಲ್ಲಿ ಗುಂಡಾಕಾರದ ಲೋಳೆಗಳಿರು ತ್ತದೆ. ಆಗ ಆನೆ ಬಲಿಷ್ಠವಾಗಿದೆ ಎಂದರ್ಥ. ಒಳ್ಳೆಯ ಆನೆಗೆ ಮಾತ್ರ ಈ ತರ ಆಗುತ್ತದೆ. ಅದಕ್ಕೆ ಆಗ ಏನಾದರೂ ಕೆಲಸ ಮಾಡಬೇಕು ಅನಿಸಿದಾಗ ಕಾಡಲ್ಲಿ ಮರಗಳನ್ನು ನಾಶ ಮಾಡಲು ಮುಂದಾಗುತ್ತದೆ. ನಾವು ಸಾಕಿದ ಇಂತಹ ಆನೆಗಳಿಗೆ ಮೊಸರು ತಿನ್ನಿಸುತ್ತೇವೆ.
***
ಅರಣ್ಯ ಇಲಾಖೆಯ ದಕ್ಷ ಅಧಿಕಾರಿ ಮನೋಜ್ ಕುಮಾರ್ ಅವರು ಅನೇಕ ಹೊಸ ಯೋಜನೆಗಳನ್ನು ರೂಪಿಸಿದವರು. ಮೀಸಲು ಅರಣ್ಯ ಪ್ರದೇಶದಲ್ಲಿ ಹಾರ್ನ್ ಬಿಲ್ ಸಂರಕ್ಷಣಾ ತಾಣ ಘೋಷಿಸಿದವರು. ಮೈಸೂರು ಮೃಗಾಲಯಕ್ಕೆ ಹೊಸ ರೂಪ ಕೊಟ್ಟ ಧೀಮಂತ ಅಧಿಕಾರಿ. ಆನೆ ದಾಳಿ ತಡೆಯಲು ತೆಗೆದುಕೊಂಡ ಕ್ರಮ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆನೆ ಮಾವುತರನ್ನು ಇಂಡೋನೇಷ್ಯಾಗೆ ಕಳುಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
-ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು.
***
ಆನೆಯ ವಿಶೇಷ ಗೊತ್ತಾ?
? ಆನೆಗಳದ್ದು ಬೆಂಗಾಲಿ ಭಾಷಾ ಸಂವಹನ. ಉರ್ದು ಮತ್ತು ಬೆಂಗಾಲಿ ಭಾಷೆ ಮಿಶ್ರಿತವೂ ಹೌದು. ಅದನ್ನು ಕೋಡ್ ಗಳ ಮೂಲಕ
ತಿಳಿಯಬಹುದಾಗಿದೆ.
? ಆನೆಗಳು ನೀರಿನ ಹೊಂಡಗಳನ್ನು ತಾವೇ ತೋಡಿಕೊಂಡು ನೀರು ಕುಡಿಯುವ ಜೀವಿ.
? ಆನೆಗಳು ಸಂತಾನೋತ್ಪತ್ತಿ ವಿಭಿನ್ನ. ತನ್ನ ಸುತ್ತಲಿನಲ್ಲಿ ಸಂಗಾತಿಯನ್ನು ಹುಡುಕಿಕೊಳ್ಳುತ್ತದೆ. ಹೊರಪ್ರದೇಶದಿಂದ ಬಂದ ಆನೆಗಳಿಂದ ದೂರವಿರುತ್ತದೆ.
? ಆನೆಗಳು ಆವಾಸ ಸ್ಥಾನಗಳನ್ನು ಹೊರತುಪಡಿಸಿ, ಸಾವಿರಾರು ಕಿ.ಮೀ ಸಾಗುತ್ತವೆ.
? ಮಖನಾ ಎಂಬ ಆನೆ ಗಾತ್ರದಲ್ಲಿ ದೊಡ್ಡದು. ಇದು ಹೆಣ್ಣು ಆನೆಗಳನ್ನು ಹತ್ತಿರ ಸೇರಿಸುವುದಿಲ್ಲ. ಎಲ್ಲಾ ಆನೆಗಳಿಗಿಂತಲೂ ವಿಭಿನ್ನ.