Saturday, 30th November 2024

ಹೊರಗುತ್ತಿಗೆ ಜೀತದಿಂದ ಕೋಟ್ಯಂತರ ರೂಪಾಯಿ ಲೂಟಿ !

ಐದಾರು ತಿಂಗಳು ವೇತನ ನೀಡದೇ ದುಡಿಸಿಕೊಳ್ಳುತ್ತಿರುವ ಏಜೆನ್ಸಿಗಳು

ಸೇವಾ ಶುಲ್ಕ ಷರತ್ತುಗಳ ಉಲ್ಲಂಘನೆ

ಬೆಂಗಳೂರು: ರಾಜ್ಯ ಸರಕಾರದ ನಾನಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ಗೋಳು ಕೇಳುವ ವರೇ ಇಲ್ಲ. ಕರೋನಾ ಸಮಯದಲ್ಲಂತೂ ಐದಾರು ತಿಂಗಳ ವೇತನ ನೀಡದೆ ದುಡಿಸಿಕೊಳ್ಳುತ್ತಿರುವ ಏಜೆನ್ಸಿಗಳ ಹೆಸರಿನಲ್ಲಿ ಕೋಟ್ಯಂತರ ರು. ಹಣ ಲೂಟಿಯಾಗುತ್ತಿದ್ದು, ನೌಕರರ ಶೋಷಣೆ ಮಿತಿ ಮೀರಿದೆ.

ಸಾವಿರಾರು ಸಂಖ್ಯೆಯಲ್ಲಿ ಖಾಲಿ ಬಿದ್ದಿರುವ ಸಿ ಮತ್ತು ಡಿ ಹುದ್ದೆಗಳಿಗೆ ಏಜೆನ್ಸಿ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ನೇಮಕ
ಮಾಡಲಾಗುತ್ತಿದೆ. ಈ ನೌಕರರನ್ನು ಇಲಾಖೆಗಳಲ್ಲಿ ಅಗ್ಗದ ಆಳುಗಳಾಗಿ ದುಡಿಸಿಕೊಳ್ಳಲಾಗುತ್ತಿದೆ. ಜತೆಗೆ, ಏಜೆನ್ಸಿಗಳು ಸರಿಯಾಗಿ
ವೇತನ ನೀಡದೆ ಶೋಷಿಸುತ್ತಿವೆ. ಸೇವಾ ಶುಲ್ಕ ಷರತ್ತಿನಡಿ ಸಿಬ್ಬಂದಿ ಪೂರೈಸುವ ಏಜೆನ್ಸಿಗಳು ಟೆಂಡರ್ ಷರತ್ತು ಉಲ್ಲಂಸುತ್ತಿವೆ.

ಕೆಲಸ ಸಿಕ್ಕರೆ ಸಾಕು ಎಂಬ ಅಸೆಯನ್ನೇ ಬಂಡವಾಳ ಮಾಡಿಕೊಳ್ಳುವ ಏಜೆನ್ಸಿಗಳು ನೌಕರರ ವೇತನದ ದೊಡ್ಡ ಮೊತ್ತವನ್ನು ಕಮಿಷನ್ ರೂಪದಲ್ಲಿ ಕಿತ್ತುಕೊಳ್ಳುತ್ತಿವೆ. ಪಿಎಫ್, ಇಎಸ್‌ಐ ಹೆಸರಿನಲ್ಲಿ ಕಡಿತ ಮಾಡುವ ಮೊತ್ತವನ್ನೂ ಕದಿಯುತ್ತಿವೆ. ಈ ಅಕ್ರಮದಲ್ಲಿ ಅಧಿಕಾರಿಗಳೂ ಪಾಲು ಪಡೆಯುತ್ತಿದ್ದಾರೆ.

ಐದಾರು ತಿಂಗಳಾದರೂ ವೇತನ ಪಾವತಿ ಯಾಗದಿರುವುದರಿಂದ ಈ ಸಿಬ್ಬಂದಿ ಪ್ರತಿಭಟಿಸಿದ್ದಾರೆ, ಆತ್ಮಹತ್ಯೆಗೂ ಯತ್ನಿಸಿ
ದ್ದಾರೆ. ಆದರೂ, ಹಣ ನುಂಗುವ ಚಾಳಿಯನ್ನು ಏಜೆನ್ಸಿಗಳು ಬಿಟ್ಟಿಲ್ಲ. ಹೊರಗುತ್ತಿಗೆ ನೌಕರರ ಮೇಲಿನ ದೌರ್ಜನ್ಯದ ಮಾಹಿತಿ
ಇದ್ದರೂ ಸರಕಾರ ಕ್ರಮಕ್ಕೆ ಮುಂದಾಗದೆ ಹೊರಗುತ್ತಿಗೆ ವ್ಯವಸ್ಥೆ ಮುಂದುವರಿಸಿದೆ.

‘ಡಿ’ ದರ್ಜೆಯ ನೌಕರರು ಈ ಗುತ್ತಿಗೆ ವ್ಯವಸ್ಥೆಯಲ್ಲಿದ್ದಾರೆ. ಗಂಟೆಗಳ ಪರಿವಿಲ್ಲದೆ ದುಡಿಯುವ ಈ ಸಿಬ್ಬಂದಿಯನ್ನು ಹೊರ ಗುತ್ತಿಗೆಯ ಅಡಕತ್ತರಿಯಲ್ಲಿ ಸಿಲುಕಿಸಿ ಅವರ ಭವಿಷ್ಯವನ್ನು ತ್ರಿಶಂಕು ಸ್ಥಿತಿಯಲ್ಲಿ ಇರಿಸಲಾಗಿದೆ. ವಿಧಾನಸೌಧ, ವಿಕಾಸಸೌಧ,
ಬಹುಮಹಡಿ ಕಟ್ಟಡ, ವಿಶ್ವೇಶ್ವರಯ್ಯ ಟವರ್ ನಲ್ಲಿ ಸ್ವಚ್ಛತೆ, ಕಾವಲುಗಾರ ಕೆಲಸಕ್ಕೆ ನೇಮಕಗೊಂಡವರಿಂದ ಏಜೆನ್ಸಿಗಳು ಭದ್ರತಾ ಠೇವಣಿ ವಸೂಲಿ ಮಾಡಿರುವ ಆರೋಪವಿದೆ.

ಇದೇ ಕೆಸಲಕ್ಕೆ ಪಾಲಿಕೆ, ಸ್ಥಳೀಯ ಸಂಸ್ಥೆಗಳಲ್ಲಿ 10 ಸಾವಿರದಿಂದ 20 ಸಾವಿರ ರು. ಸಂಗ್ರಹಿಸಲಾಗುತ್ತದೆ. ಮಾಸಿಕ ವೇತನವೇ 8 ಸಾವಿರ ದಿಂದ 10 ಸಾವಿರ ರು. ಇದ್ದು, ಹೀಗೆ ಸಂಗ್ರಹಿಸುವ ಮೂಲಕ 2-3 ತಿಂಗಳ ವೇತನವನ್ನು ನೌಕರರಿಂದ ಮುಂಚಿತವಾಗಿ
ಏಜೆನ್ಸಿಗಳು ಕಿತ್ತು ಕೊಳ್ಳುತ್ತವೆ.

ಹಣ ಲಪಟಾಯಿಸುತ್ತಿರುವ ಏಜೆನ್ಸಿಗಳು
ನಿಗದಿತ ಸಂಖ್ಯೆಗಿಂತ ಶೇ.30ರಿಂದ 40ರಷ್ಟು ಕಡಿಮೆ ನೌಕರರನ್ನು ನೇಮಿಸುವ ಏಜೆನ್ಸಿಗಳು, ನಿಗದಿತ ಸಂಖ್ಯೆಯ ನೌಕರರ ವೇತನದ ಹಣ ಪಡೆಯುತ್ತಿವೆ. ಇದಕ್ಕೆ ಪರೋಕ್ಷ ನೆರವು ನೀಡುವ ಅಧಿಕಾರಿಗಳ ಕಿಸೆ ತುಂಬುತ್ತದೆ. ಮೂರು ಪಾಳಿಯಲ್ಲಿ ಕಾವಲು ಗಾರರ ಕೆಲಸ ನಡೆಯುತ್ತದೆ. ಮೂರು ಪಾಳಿಯ ಕೆಲಸವನ್ನು ಒಂದೂವರೆ ಪಾಳಿಯಂತೆ ಇಬ್ಬರಿಂದ ಮಾಡಿಸಿ, ಮೂವರ ವೇತನ ಲಪಟಾಯಿಸುತ್ತವೆ. ಅಂದರೆ, 60 ಮಂದಿಯನ್ನು ನೇಮಿಸಿಕೊಂಡ ಲೆಕ್ಕ ತೋರಿಸುತ್ತದೆ. ಆದರೆ, 40 ಮಂದಿಯನ್ನು ನಿಯೋಜಿಸು ತ್ತವೆ. ವಾಸ್ತವವಾಗಿ ಅಷ್ಟು ನೌಕರರು ಕೆಲಸ ಮಾಡುತ್ತಿದ್ದಾರೆಯೇ? ಅವರಿಗೆ ಗುತ್ತಿಗೆದಾರರು ಸರಿಯಾಗಿ ವೇತನ ನೀಡುತ್ತಿದ್ದಾರಾ? ಪಿಎಫ್, ಇಎಸ್‌ಐ ಪಾವತಿ ಮಾಡಿದ್ದಾರಾ ಎಂದು ಪರಿಶೀಲಿಸುವ ವ್ಯವಸ್ಥೆ ಇಲ್ಲ. ಇದು ಸರಕಾರ ಮತ್ತು ಏಜೆನ್ಸಿ ನಡುವಿನ ಒಪ್ಪಂದ ಆಗಿರುವುದರಿಂದ ನೇಮಕಗೊಂಡವರ ಮೇಲೆ ಸರಕಾರದ ಅಧಿಕಾರಿಗಳಿಗೆ ಹಿಡಿತ ಇಲ್ಲ. ಕೆಲಸ ಮಾಡಿಸಿಕೊಂಡು ಏಜೆನ್ಸಿಗಳಿಗೆ ಹಣ ಬಿಡುಗಡೆ ಹೊರತು ಈ ನೌಕರರ ಯಾವ ವಿಷಯದಲ್ಲೂ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ.

***

ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಹೊರ ಗುತ್ತಿಗೆ ನೌಕರರಿಗೆ ತಿಂಗಳಿಗೆ 18 ಸಾವಿರದಿಂದ 20 ಸಾವಿರ ರು. ಸಂಬಳ ವಿದೆ. ಪಿಎಫ್, ಇಎಸ್‌ಐ ಕಡಿತವಾಗಿ 12,300 ಖಾತೆಗೆ ಬರುತ್ತದೆ. ಆ ಸಂಬಳದಲ್ಲಿ ಏಜೆನ್ಸಿಯವರು ಕ್ಲಿನಿಕ್ ವಿಭಾಗದವ ರಿಂದ 2 ಸಾವಿರ, ನಾನ್ ಕ್ಲಿನಿಕ್ ನೌಕರರಿಂದ 3 ಸಾವಿರ ರು. ಕಮಿಷನ್ ಪಡೆಯುತ್ತಾರೆ. ಇದನ್ನು ಬಹಿರಂಗಪಡಿಸಿದರೆ ಕಿತ್ತು ಹಾಕುವುದಾಗಿ ಬೆದರಿಸುತ್ತಾರೆ.
– ಹೆಸರು ಹೇಳಲಿಚ್ಚಿಸಿದ ನೌಕರ