Thursday, 28th November 2024

Karnataka High Court: ನಾಯಿ ಮಾಲಿಕರೇ ಗಮನಿಸಿ, ಪಾರ್ಕ್‌ನಲ್ಲಿ ನಾಯಿ ಕಕ್ಕ ಮಾಡಿಸಿದ್ರೆ ಭಾರಿ ದಂಡ ಖಚಿತ!

ಬೆಂಗಳೂರು: ಸಾರ್ವಜನಿಕ ಉದ್ಯಾನವನಗಳಲ್ಲಿ (Public park) ತಮ್ಮ ಸಾಕುಪ್ರಾಣಿಗಳ ಮಲವಿಸರ್ಜನೆ ಮಾಡಿಸಿ ಅದನ್ನು ಶುಚಿಗೊಳಿಸದ ನಾಯಿ ಮಾಲಿಕರಿಗೆ (Dog owners) ಭಾರಿ ದಂಡವನ್ನು ವಿಧಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗೆ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶಿಸಿದೆ.

ಶುಚಿತ್ವದ ನಿಯಮಗಳನ್ನು ಉಲ್ಲಂಘಿಸುವ ಮತ್ತು ಶುಚಿಗೊಳಿಸುವಲ್ಲಿ ಬೇಜವಾಬ್ದಾರಿಯಿಂದ ವರ್ತಿಸುವ ನಾಯಿ ಮಾಲೀಕರಿಗೆ ಹೆಚ್ಚಿನ ದಂಡವನ್ನು ವಿಧಿಸುವಂತೆ ಬೈಲಾವನ್ನು ತಿದ್ದುಪಡಿ ಮಾಡುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶಿಸಿದೆ. “ಸಾಕುಪ್ರಾಣಿ ಮಾಲೀಕರಿಗೆ ತಮ್ಮ ನಾಯಿಗಳನ್ನು ಉದ್ಯಾನವನಗಳಿಗೆ ಕರೆದೊಯ್ಯುವ ಸ್ವಾತಂತ್ರ್ಯವಿದ್ದರೆ, ಉದ್ಯಾನವನಗಳಿಗೆ ಭೇಟಿ ನೀಡುವ ಸಮಾಜದ ಇತರ ವರ್ಗದವರು ಸ್ವಚ್ಛ ಪರಿಸರವನ್ನು ಆನಂದಿಸುವ ಹಕ್ಕನ್ನು ಹೊಂದಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

ಘನತ್ಯಾಜ್ಯ ನಿರ್ವಹಣಾ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ, ಮತ್ತು ಉದ್ಯಾನವನಗಳಿಗೆ ನಾಯಿ ಕೊಡೊಯ್ಯುವಾಗ ಅವುಗಳ ವಿಸರ್ಜನೆಯನ್ನು ಅಲ್ಲಿಂದ ಕೊಂಡೊಯ್ಯುವ ಜೈವಿಕ ʼಪೂಪ್ ಬ್ಯಾಗ್‌ʼಗಳನ್ನು ಕೊಂಡೊಯ್ಯುವುದು ಕಡ್ಡಾಯಗೊಳಿಸುವಂತೆ ಕೋರಿ 2021ರಲ್ಲಿ ಕಂಪಾಷನ್ ಅನ್ಲಿಮಿಟೆಡ್ ಪ್ಲಸ್ ಆಕ್ಷನ್ ಎಂಬ ಎನ್‌ಜಿಒ ಪಿಐಎಲ್‌ ಸಲ್ಲಿಸಿತ್ತು. ಇದರ ವಿಲೇವಾರಿ ಮಾಡುವಾಗ ಈ ನಿರ್ದೇಶನಗಳನ್ನು ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಉದ್ಯಾನವನಗಳ ಪ್ರದೇಶದೊಳಗೆ ಬೀದಿ ನಾಯಿಗಳ ಕಾಟವನ್ನು ನಿಭಾಯಿಸಬೇಕು. ಏಕೆಂದರೆ ಅವು ಪ್ರಯಾಣಿಕರ ಮುಕ್ತ ಮತ್ತು ಸುರಕ್ಷಿತ ಸಂಚಾರಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂದು ನ್ಯಾಯಾಲಯ ಹೇಳಿದೆ. ಸಾರ್ವಜನಿಕ ಉದ್ಯಾನವನಗಳ ನಿರ್ವಹಣೆ ಕುರಿತು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಹೊರಡಿಸಿದ ಮಾರ್ಗಸೂಚಿಗಳ ಜೊತೆಗೆ, ಉದ್ಯಾನವನಗಳ ಒಳಗೆ ಮತ್ತು ಸುತ್ತಮುತ್ತಲಿನ ನಾಯಿ ಮಾಲೀಕರಿಗೆ ನೀಡಬೇಕಾದ ನಿರ್ದೇಶನಗಳನ್ನು ನೀಡುವಾಗ ಈ ಆದೇಶವನ್ನು ಹೊರಡಿಸಲಾಗಿದೆ.

ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಈಗಾಗಲೇ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಆದರೆ ಸಮಸ್ಯೆಯು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿರುವ ಕಾರಣ ನಿರ್ದೇಶನಗಳನ್ನು ನೀಡುವುದು ಅಗತ್ಯವೆಂದು ಪೀಠವು ಭಾವಿಸಿತು. ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಸೇರಿದಂತೆ ಉದ್ಯಾನವನಗಳಲ್ಲಿ ಸಾಕು ನಾಯಿಗಳ ಮಾಲಿಕರು ಮಾರ್ಗಸೂಚಿಗಳನ್ನು ಅನುಸರಿಸದ ಕಾರಣ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ.

“ನಾಗರಿಕರನ್ನು ಸಾಕುಪ್ರಾಣಿಗಳ ಕಾಟದಿಂದ ರಕ್ಷಿಸುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದು ನಾಯಿಗಳ ಮಾಲೀಕರ ಮತ್ತು ನಾಗರಿಕ ಅಧಿಕಾರಿಗಳ ಹೊಣೆ. ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಶಾಸನಬದ್ಧವಾಗಿ ಒದಗಿಸಲಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮಾತ್ರ ನಾಯಿಗಳನ್ನು ಹೊಂದುವ ಐಷಾರಾಮವನ್ನು ಆನಂದಿಸಬಹುದು”ಎಂದು ಪೀಠ ಗಮನಿಸಿದೆ.

“ಅಚ್ಚುಕಟ್ಟಾಗಿ ಮತ್ತು ಸ್ವಚ್ಛತೆ ನಿರ್ವಹಣೆ ಇಲ್ಲದ ಉದ್ಯಾನವನವು ಉದ್ಯಾನವನವಲ್ಲ. ಇದು ಎಲ್ಲಾ ಬಳಕೆದಾರರಿಂದ ಎಲ್ಲಾ ರೀತಿಯಲ್ಲೂ ಸ್ವಚ್ಛತೆ ಬಯಸುತ್ತದೆ. ಎಲ್ಲಾ ಉದ್ಯಾನವನಗಳಲ್ಲಿ ಉಗುಳುವುದು, ಕಸದ ಶೇಖರಣೆ, ಪ್ಲಾಸ್ಟಿಕ್ ಚೀಲಗಳನ್ನು ಎಸೆಯುವುದು, ಸಾಕುಪ್ರಾಣಿಗಳ ವಿಸರ್ಜನೆಗೆ ಅವಕಾಶ ನಿರ್ಬಂಧಿಸಬೇಕು. ಇದನ್ನು ಉಲ್ಲಂಘಿಸುವವರು ಕಠಿಣ ಶಿಕ್ಷೆಗೆ ಅರ್ಹರು” ಎಂದು ಪೀಠ ಹೇಳಿದೆ.

ಇದನ್ನೂ ಓದಿ: Viral News: ಬೀದಿ ನಾಯಿಯ ಮೇಲೇ ಅತ್ಯಾಚಾರ ಎಸಗಲು ಯತ್ನಿಸಿದ ವಿಕೃತ!