Saturday, 30th November 2024

ಸಿಎಂ ಸುತ್ತ ವಲಸಿಗರ ವಜ್ರಕೋಟೆ

ಆರೋಪ, ಟೀಕೆಗೆ ಥಟ್ಟನೆ ಪ್ರತಿಕ್ರಿಯೆ ನೀಡುವ ಮೂಲಕ ಸಮರ್ಥನೆ
ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಕ್ಕೆ ನಿಲ್ಲುವ ವಲಸಿಗರು

ಸಚಿವರು: ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಡಾ.ಕೆ.ಸುಧಾಕರ್, ನಾರಾಯಣ ಗೌಡ, ಕೆ.ಗೋಪಾಲಯ್ಯ,
ಶಿವರಾಮ್ ಹೆಬ್ಬಾರ್.

ವಿಶೇಷ ವರದಿ: ವೆಂಕಟೇಶ ಆರ್.ದಾಸ್

ಬೆಂಗಳೂರು: ಸಿಎಂ ಮೇಲಿನ ಆರೋಪ ಮತ್ತು ಟೀಕೆಗಳಿಗೆ ಥಟ್ಟನೆ ಪ್ರತಿಕ್ರಿಯೆ ನೀಡುವ ಮೂಲಕ ಬೆಂಬಲಕ್ಕೆ ನಿಲ್ಲುವ ವಲಸಿಗ ಸಚಿವರು, ತಮ್ಮನ್ನು ಮಂತ್ರಿಗಳನ್ನಾಗಿ ಮಾಡಿದ ಯಡಿಯೂರಪ್ಪ ಅವರ ಸುತ್ತಲೂ ವಜ್ರಕೋಟೆ ನಿರ್ಮಿಸುವ ಪ್ರಯತ್ನ ನಡೆಸಿದ್ದಾರೆ.

ಕೆಲ ನಿರ್ಧಾರಗಳು ಮತ್ತು ಸಂಪುಟ ವಿಸ್ತರಣೆ ಸಂಬಂಧ ಸ್ವಪಕ್ಷೀಯರೇ ಸಿಎಂ ವಿರುದ್ಧ ಕೆಲವೊಂದು ಟೀಕೆ ಮಾಡಿದ್ದರು. ಈಗಲೂ ಪ್ರತಿಪಕ್ಷ ಮತ್ತು ಸ್ವಪಕ್ಷೀಯರಿಂದ ಸಮಾನಾಂತರವಾಗಿ ಸಿಎಂ ಬಿಎಸ್ ಯಡಿಯೂರಪ್ಪ ಟೀಕೆಗಳನ್ನು ಎದುರಿಸು ತ್ತಿದ್ದಾರೆ. ಆದರೆ, ಈ ಎಲ್ಲ ಸಂದರ್ಭಗಳಲ್ಲಿ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ವಲಸಿಗ ಸಚಿವರು ತಮ್ಮ ನಿಷ್ಠೆ ಪ್ರದರ್ಶನದ ಪ್ರಯತ್ನ ನಡೆಸುತ್ತಿದ್ದಾರೆ.

ವಲಸಿಗರ ಪೈಕಿ ಒಬ್ಬರಾದ ಎಚ್.ವಿಶ್ವನಾಥ್ ಅವರು, ಸಿಎಂ ವಿರುದ್ಧ ಗುಡುಗಲು ಆರಂಭಿಸಿದ್ದರು. ತಮಗೆ ಸಚಿವ ಸ್ಥಾನ ನೀಡಲಿಲ್ಲ ಎಂಬುದು ಅವರ ಆಕ್ರೋಶವಾಗಿತ್ತು. ಆಗ ಸರಕಾರ ರಚನೆಯ ವೇಳೆ ಜತೆಯಲ್ಲಿಯೇ ಇದ್ದ ವಲಸಿಗ ನಾಯಕರು ವಿಶ್ವನಾಥ್ ಅವರ ಮಾತುಗಳನ್ನೇ ಟೀಕಿಸುವ ಮೂಲಕ ಸಿಎಂ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದ್ದರು. ಇದರಿಂದ
ಮಿತ್ರಮಂಡಳಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆದರೂ, ವಲಸಿಗರು ಸಿಎಂಗೆ ನಿಯತ್ತು ಪ್ರದರ್ಶನ ಮಾಡುವುದನ್ನು
ಮುಂದುವರಿಸಿದರು.

ಬಿಜೆಪಿಯ ಮತ್ತೊಬ್ಬ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಗಾಗ ಸರಕಾರದ ವಿರುದ್ಧ ಮತ್ತು ಸಿಎಂ
ಯಡಿಯೂರಪ್ಪ ಕುಟುಂಬದ ವಿರುದ್ಧ ಗುಡುಗುತ್ತಲೇ ಇರುತ್ತಾರೆ. ಅವರ ಹೇಳಿಕೆಗೆ ಅನೇಕ ಸಂದರ್ಭದಲ್ಲಿ ಬಿಜೆಪಿ
ನಾಯಕರೇ ಮೌನವಾಗಿ ಬಿಡುತ್ತಾರೆ. ಅವರ ಹೇಳಿಕೆ ಹಿಂದೆ ಯಾರಿದ್ದಾರೆ ಎಂಬ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ
ವಲಸಿಗರ ಪೈಕಿ ಅನೇಕ ಸಚಿವರು ಸಿಎಂ ಬೆಂಬಲಕ್ಕೆ ನಿಲ್ಲುತ್ತಾರೆ.

ಯತ್ನಾಳ್ ಅವರ ಹೇಳಿಕೆ ಖಂಡಿಸಿ ಖಾರವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಕೆಲವರು ಸಚಿವರು ಬೆಂಬಲ ನೀಡಿದ್ದರು.
ಈ ನಿಟ್ಟಿನಲ್ಲಿ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಡಾ. ಕೆ. ಸುಧಾಕರ್, ನಾರಾಯಣ ಗೌಡ, ಕೆ.ಗೋಪಾಲಯ್ಯ ಅವರು ಮುಂಚೂಣಿಯಲ್ಲಿ ನಿಂತು ಸಿಎಂಗೆ ಬೆಂಬಲ ವ್ಯಕ್ತಪಡಿಸುತ್ತಾರೆ. ಸಿಎಂ ವಿರುದ್ಧ ತಮ್ಮದೇ ಸಂಪುಟ ಸಹೊದ್ಯೋಗಿ ಕೆ.ಎಸ್. ಈಶ್ವರಪ್ಪ ಅವರು ಪತ್ರ ಬರೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದ ಸಂದರ್ಭದಲ್ಲಿಯೂ ಈ ಸಚಿವರು, ಸಿಎಂ ಬೆಂಬಲಕ್ಕೆ ನಿಂತು ಅವರನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದರು.

ತಮಗೆ ಸ್ಥಾನಮಾನ ನೀಡಿದ ಸಿಎಂ ಪರ ಇಂತಹದ್ದೊಂದು ವಜ್ರಕೋಟೆ ನಿರ್ಮಿಸಿ ಅವರಿಗೆ ಬೆಂಬಲ ನೀಡಬೇಕೆಂಬ ನಿರ್ಣಯಕ್ಕೆ ಈ ಎಲ್ಲ ಸಚಿವರು ಬಂದಿದ್ದು, ಅದರಂತೆ ನಡೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ವಿರುದ್ಧ ಸಿಡಿದ ಸಚಿವರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಎಸ್‌ಐ ವಿರುದ್ಧ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿ, ಅವರಪ್ಪನ ಮನೆಯಿಂದ ತಂದು ಕೊಡುತ್ತಾರಾ ಎಂದು ಪ್ರಶ್ನೆ ಮಾಡಿದ್ದರು.

ಸಿದ್ದರಾಮಯ್ಯ ಹೇಳಿಕೆ ನೀಡಿದ ಅರ್ಧ ಗಂಟೆಯಲ್ಲಿ ವಲಸಿಗರ ಪೈಕಿ ಬಹುತೇಕ ಎಲ್ಲ ಸಚಿವರು, ಸಿದ್ದು ಅವರ ಹೇಳಿಕೆಯನ್ನು ಖಂಡಿಸಿ ಪತ್ರಿಕಾ ಪ್ರಕರಣೆ ನೀಡಿದರು. ಕೆಲವು ಸಚಿವರು ಅವರ ವಿರುದ್ಧ ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಮೂಲಕ ಸಿದ್ದ ರಾಮಯ್ಯ ಅವರ ನಡೆಯನ್ನು ಖಂಡಿಸಿದರು. ಕೆಲವರು, ನಯವಾಗಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರೆ, ಎಸ್.ಟಿ ಸೋಮ ಶೇಖರ್, ಬೈರತಿ ಬಸವರಾಜು ಅವರು ಸಿದ್ದರಾಮಯ್ಯ ಅವರು ತಮ್ಮ ಹಳೆಯ ಗುರುಗಳು ಎಂಬುದನ್ನು ಮರೆತು ಕಟುವಾಗಿ ಅವರನ್ನು ಟೀಕಿಸಿ, ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತುಕೊಂಡರು.

ಸದನದಲ್ಲೂ ಬೆಂಬಲ
ರಮೇಶ್ ಜಾರಕಿಹೊಳಿ ಮೊದಮೊದಲು ಸಿಎಂ ಪರವಾಗಿ ಬ್ಯಾಟಿಂಗ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದರು. ಸಿಡಿ ಪ್ರಕರಣಕ್ಕೆ ಸಿಲುಕಿ ಅವರು ತಣ್ಣಗಾಗುತ್ತಿದ್ದಂತೆ ಉಳಿದ ಸಚಿವರು, ಹೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದು, ಸೇರಿ ವಲಸಿಗರ
ವಿಚಾರಗಳೇ ಸದನದಲ್ಲಿ ಹೈಲೈಟ್ ಆಗಿದ್ದವು. ಆಗ ಸಿಎಂ ವಲಸಿಗ ಸಚಿವರ ಪರ ನಿಂತಿದ್ದರು. ಇದಕ್ಕೆ ಕೃತಜ್ಞರೆಂಬಂತೆ ಎಲ್ಲ ಸಚಿವರು, ಸದನದಲ್ಲಿ ಕಾಂಗ್ರೆಸ್‌ನ ವಿವಿಧ ಆರೋಪಗಳಿಗೆ ಸಿಎಂ ಪರವಾಗಿ ನಿಲ್ಲುವ ಪ್ರಯತ್ನ ನಡೆಸುತ್ತಿದ್ದರು. ಪಕ್ಷದ ಶಾಸಕರು ಮತ್ತು ಸಚಿವರು ಮೌನವಾಗಿದ್ದರೂ, ವಲಸಿಗರು ಮಾತ್ರ ಯಡಿಯೂರಪ್ಪ ಅವರ ಪರವಾಗಿ ನಿಲ್ಲುವುದನ್ನು ರೂಢಿಸಿಕೊಂಡರು. ಇದನ್ನೇ ಮುಂದುವರಿಸುತ್ತಿದ್ದು, ಈಗ ಅವರ ಸುತ್ತ ವಜ್ರಕೋಟೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ.