ಬೆಳಗಾವಿ: ನಗರದ (Belagavi Crime news) ಕೆಎಂಎಫ್ ಡೈರಿ ಬಳಿ ಬುಧವಾರ ರಾತ್ರಿ ಯುವಕನೊಬ್ಬನ ಮೇಲೆ ಗುಂಡಿನ ದಾಳಿ (firing) ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಮಾಜಿ ಪ್ರೇಯಸಿ (girlfriend) ಸೇರಿದಂತೆ ಮೂವರು ಆರೋಪಿಗಳನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಟಿಳಕವಾಡಿಯ ದ್ವಾರಕಾನಗರದ ಪ್ರವೀಣ ಕುಮಾರ (31) ಗುಂಡಿನ ದಾಳಿಗೆ ಒಳಗಾಗಿ ಬಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿಧಾ ಕಿತ್ತೂರು, ನಾಜಿಯಾ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನಿಧಾ ಕಿತ್ತೂರು ಎಂಬಾಕೆ ಈ ಯುವಕನ ಮಾಜಿ ಪ್ರೇಯಸಿಯಾಗಿದ್ದು, ಲವ್ ಬ್ರೇಕಪ್ ಮಾಡಿಕೊಂಡದ್ದರಿಂದ ರೊಚ್ಚಿಗೆದ್ದು ಈ ಗುಂಡಿನ ದಾಳಿ ನಡೆಸಿದ್ದಾಳೆ ಎಂದು ತಿಳಿದುಬಂದಿದೆ.
ಪ್ರಣೀತಕುಮಾರ ಮತ್ತು ನಿಧಾ ಕಿತ್ತೂರು ಈ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು. ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ನಡುವೆ ಮನಸ್ತಾಪ ಬಂದು ಕಳೆದ ನಾಲ್ಕು ವರ್ಷಗಳ ಹಿಂದೆ ಬ್ರೇಕ್ ಅಪ್ ಆಗಿತ್ತು. ನಿಧಾ ಜೊತೆಗೆ ಪ್ರೀತಿ ಮುರಿದುಕೊಂಡ ಬಳಿಕ ಮಹಾಂತೇಶ ನಗರದ ಸ್ಮಿತಾ ಜತೆಗೆ ಪ್ರವೀಣಕುಮಾರ ಸಲಿಗೆ ಬೆಳೆಸಿಕೊಂಡಿದ್ದ. ಪ್ರತಿನಿತ್ಯ ಸ್ಮಿತಾ ಮನೆಗೆ ಹೋಗಿ ಬರುತ್ತಿದ್ದ. ನಿನ್ನ ಜೊತೆ ಬ್ರೇಕಪ್ ಆದ ನಂತರ ನನಗೆ ಸ್ಮಿತಾ ಸಿಕ್ಕಿದ್ದಾಳೆಂದು ಫೋನ್ ಮಾಡಿ ಮಾಜಿ ಪ್ರೇಯಸಿ ನಿಧಾಗೆ ಹೇಳಿದ್ದ.
ಇದರಿಂದ ಕೆರಳಿದ ನಿಧಾ ತನ್ನ ಪರಿಚಯಸ್ಥರೊಂದಿಗೆ ಸ್ಮಿತಾ ಮನೆಗೆ ಅಗಮಿಸಿ ರಿವಾಲ್ವರ್ ಮೂಲಕ ಪ್ರಣೀತಕುಮಾರನ ಮೇಲೆ ಎರಡು ಸಲ ಗುಂಡಿನ ದಾಳಿ ನಡೆಸಿದ್ದಾಳೆ. ಘಟನೆಯಲ್ಲಿ ಆತನ ಕಾಲು, ಮುಖದ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಆತನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸ್ಥಿತಾಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಕೂದಳೆಲೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಿಮ್ಸ್ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಭೇಟಿ ನೀಡಿ ಪರಿಶೀಲಿಸಿದರು. ಈ ಪ್ರಕರಣ ಸಂಬಂಧ ನಿಧಾ ಕಿತ್ತೂರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ಕುಖ್ಯಾತ ರೌಡಿ ಸುನೀಲ್ ಕೊಲೆ