Saturday, 26th October 2024

ಮುಸ್ತಾಕನ ಬದುಕಿಗೂ ಮುಸುಕು ಹಾಕಿದ ಸಾರಿಗೆ ಮುಷ್ಕರ

ಕರೋನಾ ಚಿಂತೆಗೀಡು ಮಾಡಿತು

ಕುಟುಂಬದ ಅನ್ನಕ್ಕೆ ಬರೆ ಹಾಕಿತು

ಹಬ್ಬದ ಖುಷಿಯೂ ನುಂಗಿತು

ವಿಶೇಷ ವರದಿ: ರವಿ ಮಲ್ಲೇದ

ಸಿಂದಗಿ: ಕೂಲಿ ನಂಬಿ ಬದುಕೋ ನಮ್ಮಂತಹ ಬಡವರ ಪಾಲಿಗೆ ದೇವರೂ ಇಲ್ಲ. ಸರಕಾರವೂ ಇಲ್ಲ. ಬಸ್ ನಿಲ್ದಾಣದಲ್ಲಿ ಸಾರಿಗೆ ಸರಕನ್ನು ಇಳಿಸಿ ಅದರಿಂದ ಸಿಗುವ ಐದೋ, ಹತ್ತೋ ರುಪಾಯಿ ಪುಡಿಕಾಸು ನೆಚ್ಚಿಕೊಂಡು ಹೊಂಟೇವಿ. ಆಗಾಗ ಬಂದ್, ಮುಷ್ಕರ ಸೇರಿದಂತೆ ಎರಡು ವರ್ಷದಿಂದ ಕರೋನಾನೂ ನಮ್ಮ ಬದುಕಿನ ಜತೆ ಹಠ ಮಾಡಕೋತ ಇದಿಯಾಗಿ ಕಾಡಕೋತ ಹೊಂಟಾದ..

ಇದು ಪಟ್ಟಣದ ಬಸ್ ನಿಲ್ದಾಣದಲ್ಲಿ ಎರಡು ದಶಕದಿಂದಲೂ ಕೂಲಿ ಕೆಲಸ ಮಾಡುತ್ತಿರುವ ಮುಸ್ತಾಕ್ ನಾಟೀಕಾರ ಎಂಬ ವ್ಯಕ್ತಿಯ ನೋವಿನ ಮಾತುಗಳು. ಕಳೆದ ಎರಡು ದಶಕದಿಂದಲೂ ಸಾರಿಗೆ ಬಸ್‌ನಲ್ಲಿ ಬರುವ ಸರಕುಗಳನ್ನು ಇಳಿಸುವ ಭಾರವಾದ
ಪ್ರಯಾಣಿಕರ ಸಾಮಾನುಗಳನ್ನು ಬಸ್‌ಗೆ ಹಾಕುವ ಕೆಲಸ ಮಾಡುವ ಈತನಿಗೆ ಹೆಂಡತಿ ಮತ್ತು ಮೂವರು ಮಕ್ಕಳಿದ್ದಾರೆ. ಈ ನಿಲ್ದಾಣದ ಕೂಲಿಯಿಂದ ಕೈಗೆ ಸಿಗುವ ಆದಾಯವೂ ಅಷ್ಟಕಷ್ಟೇ. ಒಮ್ಮೊಮ್ಮೆ ತಿಂಗಳ ಆದಾಯ ಮೂರರಿಂದ ನಾಲ್ಕು ಸಾವಿರ ದವರೆಗೆ ಬಂದರೇ ಅದೇ ದೊಡ್ಡ ದುಡಿಮೆ.

ಕಳೆದ ವರ್ಷ ಕರೋನಾ ಹಿನ್ನೆಲೆ ರಾಜ್ಯ ಸರಕಾರ ಲಾಕ್‌ಡೌನ್ ಘೋಷಿಸಿ, ಈತನ ದುಡಿಮೆಯ ಜತೆಗೆ ಹಬ್ಬದ ಖುಷಿಯನ್ನೂ ಕಸಿದುಕೊಂಡಿದ್ದಲ್ಲದೇ, ಈತನನ್ನೇ ನಂಬಿದ್ದ ಕುಟುಂಬದವರ ಅನ್ನಕ್ಕೂ ಬರೆಹಾಕಿತ್ತು. ಕಳೆದ ವರ್ಷದ ಸಂಕಷ್ಟ ಮರೆತು ಈ ವರ್ಷವಾದರೂ ಕೈತುಂಬ ದುಡಿಮೆ ಸಿಕ್ಕೀತು ಎಂದು ಕಾದು ಕುಳಿತಿದ್ದಾನೆ.

ಈ ಬಾರಿ ರಮಜಾನ್ ಹಬ್ಬದ ಸಂಭ್ರಮಕ್ಕೆ ಕುಟುಂಬವನ್ನು ಸಜ್ಜುಗೊಳಿಸುವ ಕನಸು ಕಂಡಿದ್ದ. ಆದರೆ ಈಗ ಮತ್ತೆ ಕರೋನಾ ಹಾವಳಿ ಅಷ್ಟಿಲ್ಲವಾದರೂ ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿರುವ ಸಾರಿಗೆ ಮುಷ್ಕರ, ಈತನ ದುಡಿಮೆಗೆ ಬ್ರೆಕ್ ಹಾಕುವು ದರೊಂದಿಗೆ ಮುಸ್ತಾಕನ ಹಬ್ಬದ ಕನಸಿಗೂ ಮುಷ್ಕರದ ಮುಸುಕು ಬಿದ್ದಿದೆ.

ಯಾವಾಗ ಈ ಮುಷ್ಕರ ಮುಗಿಯುತ್ತೋ, ಕರೋನಾ ಹಾವಳಿ ಹೆಚ್ಚಾದರೆ, ಮತ್ತೆ ಲಾಕ್‌ಡೌನ್ ಬೀಳುತ್ತೋ, ಇವೆರೆಡರ ಮಧ್ಯ ಮತ್ತೆ ತನ್ನ ಬದುಕು ಯಾವರೀತಿ ಕುಂಟುತ್ತೋ ಎಂಬ ಆತಂಕದಲ್ಲಿಯೇ ಮುಸ್ತಾಕ್ ಕಾಲ ಕಳೆಯುತ್ತಿದ್ದಾನೆ.

***

ಬಂದ್, ಮುಷ್ಕರ ಸೇರಿದಂತೆ ಕರೋನಾ ಹಾವಳಿಗೆ ನಾನು ನನ್ನ ಕುಟುಂಬ ಕಷ್ಟಕ್ಕೆ ಬಿದ್ದೇವಿ. ಹಮಾಲಿಯೇ ನನ್ನ ಜೀವನ ವಾಗಿದ್ದು, ಇದರಿಂದ ಬರುವ ಆದಾಯದಿಂದಲೇ ಕುಟುಂಬ ಸಲಹುವ ಜವಾಬ್ದಾರಿಯಿದೆ. ಆದರೆ ಕಳೆದ ವರ್ಷ ಬಂದ ಕರೋನಾ ದಿಂದ ಹೇಗೋ ಬಚಾವ್ ಆಗಿದ್ದೇವೆ. ಇದೀಗ ಸಾರಿಗೆ ಮುಷ್ಕರದ ಹೊಡೆತ ತಾಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರಕಾರವೇ ನಮ್ಮಂತಹ ಬಡ ಕೂಲಿಕಾರರಿಗೆ ನೆರವು ನೀಡಬೇಕು.
-ಮುಸ್ತಾಕ್ ನಾಟೀಕಾರ, ಬಸ್ ನಿಲ್ದಾಣದ ಕೂಲಿ