Wednesday, 13th November 2024

Paddy procurement centres: ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲು ಸಿಎಂ ಸೂಚನೆ

Paddy procurement centres

ಬೆಂಗಳೂರು: ಬಳ್ಳಾರಿ, ಹೊಸಪೇಟೆ, ರಾಯಚೂರು, ಯಾದಗಿರಿ ಭಾಗದಲ್ಲಿ ಭತ್ತದ ಕೊಯ್ಲು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಅಲ್ಲದೆ ಭತ್ತದ ಬೆಲೆ ಕುಸಿದಿರುವುದರಿಂದ ಭತ್ತದ ಖರೀದಿ ಕೇಂದ್ರಗಳನ್ನು (Paddy procurement centres) ಆರಂಭಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಭತ್ತದ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್‌ ಹಾಗೂ ರೈತ ಮುಖಂಡರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಅಧಿಕಾರಿಯೊಬ್ಬರೊಂದಿಗೆ ಫೋನ್‌ನಲ್ಲಿ ಸಂಪರ್ಕಿಸಿದ ಸಿಎಂ ಸಿದ್ದರಾಮಯ್ಯ ಅವರು, ಈ ಕೂಡಲೇ ಭತ್ತದ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಸೂಚಿಸಿದ್ದಾರೆ.

ಭತ್ತ ಕಟಾವು ಶುರುವಾಗಿದೆ, ಬೆಲೆ ಕುಸಿದು ರೈತರಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ತಕ್ಷಣವೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಜನವರಿವರೆಗೆ ಕಾಯಬೇಡಿ ಎಂದು ಸೂಚನೆ ನೀಡಿದ್ದಾರೆ.

ರೈತರಿಗೆ ಗುಡ್‌ನ್ಯೂಸ್‌ ಕೊಟ್ಟ ಸರ್ಕಾರ; ವಕ್ಫ್‌ ನೋಟಿಸ್‌ ವಾಪಸ್‌!

ಬೆಂಗಳೂರು: ಇಡೀ ದೇಶದ ಗಮನ ಸೆಳೆದಿರುವ ವಕ್ಫ್‌ ಆಸ್ತಿ ವಿವಾದ(Waqf Board)ಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವ ನಿರ್ಧಾರ ತೆಗೆದುಕೊಂಡಿದ್ದು, ರೈತರಿಗೆ ನೀಡಿದ್ದ ನೋಟಿಸ್ ಅನ್ನು ಅಧಿಕೃತವಾಗಿ ವಾಪಾಸ್ ಪಡೆದುಕೊಂಡಿದೆ. ಆರಂಭದಲ್ಲಿ ರೈತರ ಜಮೀನಿನಿಂದ ಆರಂಭವಾದ ಈ ವಕ್ಫ್ ಆಸ್ತಿ ವಿವಾದ ಬಳಿಕ ಮಠಕ್ಕೆ ಹಾಗೂ ಹಿಂದೂ ದೇವಾಲಯಗಳಿಗೂ ನೋಟಿಸ್ ನೀಡುವ ಮೂಲಕ ಆತಂಕ ಹೆಚ್ಚಿಸಿತ್ತು. ಸದ್ಯ ಇದಾದ ಬಳಿಕ ರಾಜ್ಯದಲ್ಲಿ ರೈತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಎಚ್ಚೆತ್ತುಕೊಂಡಿರುವ ಸರ್ಕಾರ ರೈತರಿಗೆ ನೀಡಿದ್ದ ನೋಟಿಸ್ ಅನ್ನು ಅಧಿಕೃತವಾಗಿ ವಾಪಾಸ್ ಪಡೆದುಕೊಂಡಿದೆ.

ಸರ್ಕಾರದ ಆದೇಶದಲ್ಲೇನಿದೆ?

ವಕ್ಫ್ ಸಂಬಂಧ ರೈತರಿಗೆ ನೀಡಿರುವ ಎಲ್ಲಾ ನೋಟಿಸುಗಳನ್ನು ಹಿಂಪಡೆಯಬೇಕು. ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರ ವಿರುದ್ಧ ಯಾವುದೇ ಕ್ರಮವನ್ನು ಜರುಗಿಸಬಾರದು ಅಂತ ರಾಜ್ಯದ ಎಲ್ಲಾ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಆದೇಶ ಹೊರಡಿಸಿದೆ. ಕೆಲ ರೈತರ ಹಾಗೂ ಇತರ ಆಸ್ತಿಗಳನ್ನು ವಕ್ಸ್ ಹೆಸರಿಗೆ ಖಾತೆ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆ ಸೂಚನೆ ನೀಡಲಾಗಿದೆ. ಮ್ಯುಟೇಷನ್ ಮಾಡಲು ಯಾವುದೇ ಕಛೇರಿ ಅಥವಾ ಯಾವುದೇ ಪ್ರಾಧಿಕಾರ ನೀಡಿದ ನಿರ್ದೇಶನಗಳನ್ನು ತಕ್ಷಣ ಹಿಂಪಡೆಯಬೇಕು. ಜೊತೆಗೆ ಮ್ಯುಟೇಷನ್ ಪ್ರಕ್ರಿಯೆ ಕೂಡಲೇ ಸ್ಥಗಿತಗೊಳಿಸಬೇಕು. ಮುಖ್ಯಮಂತ್ರಿಗಳ ಆದೇಶವಿದ್ದಾಗಲೂ ಮೇಲಧಿಕಾರಿಗಳ ಅನುಮತಿ ಇಲ್ಲದೆ ಸುತ್ತೋಲೆ ಹೊರಡಿಸಿದ ಅಧಿಕಾರಿ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ಇನ್ನು ನಿನ್ನೆ ನಡೆದ ಸಭೆಯಲ್ಲಿ ರೈತರಿಗೆ ನೀಡಿರುವ ನೋಟೀಸ್ ತಕ್ಷಣ ವಾಪಸ್ ಪಡೆಯಬೇಕು. ಇನ್ನು ಮುಂದೆ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡಬೇಡಿ. ವಕ್ಫ್‌ ಜಮೀನು ವಿಚಾರದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳ ಬಗ್ಗೆ ನನಗೆ ತೀವ್ರ ಅಸಮಾಧಾನವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು

  1. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಮ್ಯುಟೇಷನ್ ಮಾಡಲು ಯಾವುದೇ ಕಛೇರಿ ಅಥವಾ ಯಾವುದೇ ಪ್ರಾಧಿಕಾರದಿಂದ ನೀಡಲಾದ ನಿರ್ದೇಶನಗಳನ್ನು ತಕ್ಷಣದಿಂದಲೇ ಹಿಂಪಡೆಯುವುದು ಹಾಗೂ ಮುಟೇಷನ್ ಪುಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸುವುದು.
  2. ಈ ಕುರಿತು ನೀಡಲಾದ ಎಲ್ಲಾ ನೋಟೀಸುಗಳನ್ನು ಹಿಂಪಡೆಯುವುದು.
  3. ಸದರಿ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರುಗಳ ವಿರುದ್ಧ ಯಾವುದೇ ಕ್ರಮವನ್ನು ಜರುಗಿಸತಕ್ಕದಲ್ಲ.

ಈ ಸುದ್ದಿಯನ್ನೂ ಓದಿ: Waqf Board: ವಕ್ಫ್‌ ಸಂತ್ರಸ್ತರನ್ನು ಭೇಟಿ ಮಾಡಿದ ಕೇಂದ್ರ ಜಂಟಿ ಸಂಸದೀಯ ಸಮಿತಿ; ʼವ್ಯವಸ್ಥಿತ ಹುನ್ನಾರʼ ಎಂದ ಪಾಲ್