Tuesday, 5th November 2024

ರಾಜೀನಾಮೆ ಪ್ರಸ್ತಾಪದ ಹಿಂದಿನ ಭದ್ರ ಕಾರಣ

ಜಾರಕಿಹೊಳಿ ನಿವೃತ್ತಿ ಮಾತಿನ ಹಿಂದೆ ಸಿಡಿ ಖುಲಾಸೆ, ಬಾಲಚಂದ್ರಗೆ ಸಚಿವ ಸ್ಥಾನ ತಂತ್ರ?

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ರಾಜ್ಯದಲ್ಲಿ ಮಧ್ಯಂತರ ಬಿಜೆಪಿ ಸರಕಾರದ ಸಂಸ್ಥಾಪಕ ಎಂದೇ ಬಿಂಬಿತವಾಗಿದ್ದ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಮತ್ತು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ರಮೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಯ್ತು. ಪ್ರಕರಣ ತನಿಖೆಯಲ್ಲಿದ್ದು, ಅದು ಖುಲಾಸೆಯಾದರೆ ಮತ್ತೆ ಮಂತ್ರಿಯಾಗುವ ಅವಕಾಶವನ್ನೂ ತಳ್ಳಿ ಹಾಕುವಂತಿಲ್ಲ. ಹೀಗಿರುವಾಗ ರಮೇಶ್ ಅವರು ಸಚಿವ ಸ್ಥಾನ ಹೋದ ನಂತರ ಉಳಿದಿರುವ ಶಾಸಕ ಸ್ಥಾನವನ್ನೂ ತ್ಯಾಗ ಮಾಡುವುದೇಕೆ? ರಾಜಕೀಯ ನಿವೃತ್ತಿ ಮಾತೇಕೆ ಬಂತು? ಇದನ್ನು ಪ್ರಕಟಿಸಲು ಮೈಸೂರಿನ ಸುತ್ತೂರು ಮಠಕ್ಕೆ ಹೋಗಿzದರೂ ಏಕೆ? ಎನ್ನುವ ಅನೇಕ
ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿವೆ.

ರಮೇಶ್ ಅವರು ಮೈಸೂರಿನಲ್ಲಿ ಮಾತನಾಡಿ, ‘ರಾಜೀನಾಮೆ ಮತ್ತು ರಾಜಕೀಯ ನಿವೃತ್ತಿ ಮಾತನಾಡುತ್ತಿರುವುದು ಬರೀ ಸಚಿವ ಸ್ಥಾನ ಸಿಗಲಿ ಎನ್ನುವ ಕಾರಣಕ್ಕೆ ಅಲ್ಲ. ಅದೇನೆಂದರೆ’ ಎಂದು ಮುಂದಿನ ವಿಚಾರ ಮುಚ್ಚಿಟ್ಟರು. ಹಾಗಾದರೆ ರಮೇಶ್ ಹೇಳುವುದಕ್ಕೆ ಸಾಧ್ಯವಾಗದೆ ನುಂಗಿಕೊಂಡಿರುವ ವಿಚಾರ ವೆಂದರೆ, ‘ಭದ್ರಾ ಮೇಲ್ದಂಡೆ ಯೋಜನೆ’ ಇರಬೇಕು ಎನ್ನುವುದು ಅವರ ಆಪ್ತರ ಮಾತು. ಇದಲ್ಲದೆ ಇನ್ನೂ ಅನೇಕ ವಿಚಾರಗಳಿದ್ದು, ಅವುಗಳನ್ನು ರಮೇಶ್ ಅವರು ಹೇಳುವುದಕ್ಕೂ ಸಾಧ್ಯವಿಲ್ಲ ಎನ್ನುತ್ತಿವೆ ಬೆಳಗಾವಿ ಬಿಜೆಪಿ ಮೂಲಗಳು ತಿಳಿಸಿವೆ.

ರಮೇಶ್ ನೋವಿನ ಹಿಂದೇನಿದೆ?: ಬೆಳಗಾವಿಯ ಮೂಲಗಳ ಪ್ರಕಾರ ರಮೇಶ್ ಅವರ ಬೇಸರಕ್ಕೆ ನೈಜ ಕಾರಣ, ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದ್ದ ಭದ್ರಾ ಮೇಲ್ದಂಡೆ ಯೋಜನೆ. ಅಂದರೆ ಭದ್ರಾ ಮೇಲ್ದಂಡೆ ಯೋಜನೆ ಮತ್ತು ಕಾವೇರಿ ನೀರಾವರಿ ಯೋಜನೆಯ 21,472 ಸಾವಿರ ಕೋಟಿ ರು. ಮೊತ್ತದ  ಕಾಮಗಾರಿ ಟೆಂಡರ್‌ನಲ್ಲಿ ಕಿಕ್‌ಬ್ಯಾಕ್ ತೆಗೆದುಕೊಂಡು ಅಕ್ರಮ ನಡೆಸಲು ಯತ್ನಿಸಲಾಗಿದೆ ಎಂದಿದ್ದರು. ಮೂಲಗಳ ಪ್ರಕಾರ
ಈ ಯೋಜನೆ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಿದ್ದಾಗಲೇ ಸಿದ್ಧವಾಗಿತ್ತು. ಇದರ ಫಲಾಫಲ ರಮೇಶ್ ಅವರಿಗೆ ಸಿಗುವ ವೇಳೆಗೆ ಸಿಡಿ ಪ್ರಕರಣ ಎಲ್ಲವನ್ನೂ ನುಂಗಿತ್ತು. ನಂತರದಲ್ಲಿ ಬೆಳಗಾವಿ ಉಪ ಚುನಾವಣೆಯಲ್ಲಿ ತಟಸ್ಥವಾಗಿದ್ದ ರಮೇಶ್ ಅವರಿಗೆ ಬಹುಬೇಗ ಸಿಡಿ ಮುಕ್ತ ಹಾಗೂ ಮತ್ತೆ ಸಚಿವ ಸ್ಥಾನ ಸಿಗುವ ಭರವಸೆ ಸಿಕ್ಕಿತ್ತು.

ಜತೆಗೆ ಪರೋಕ್ಷವಾಗಿ ಜಲಸಂಪನ್ಮೂಲ ಇಲಾಖೆಗೆ ಸಲಹೆ ರೂಪದ ನಿರ್ವಹಣೆಯ ಆಶ್ವಾಸನೆಯೂ ಸಿಕ್ಕಿತ್ತು ಎನ್ನಲಾಗಿದೆ. ಆಗ ಆಸೆಗಣ್ಣಿನಿಂದ ದುಡಿದ ರಮೇಶ್, ಕೊನೆ ಕ್ಷಣದ ತಂತ್ರಗಳ ಮೂಲಕ ಬಿಜೆಪಿ ಗೆಲ್ಲುವಂತೆ ಮಾಡಿದ್ದರು. ಆದರೆ ಚುನಾವಣೆ ನಂತರ ಸಿಡಿ ತಣ್ಣಗಾಗಲಿಲ್ಲ. ಸಚಿವ ಸ್ಥಾನವೂ ಸಿಗುವ ಲಕ್ಷಣ ಕಾಣಲಿಲ್ಲ. ಅಷ್ಟೇ ಏಕೆ? ರಮೇಶ್ ಅವರೇ ರೂಪಿಸಿದ್ದ ಭದ್ರಾ ಮೇಲ್ದಂಡೆ ಕಾಮಗಾರಿ ಫಲಾಫಲ ಕಣ್ಣೆದುರೇ ಕೈ ಜಾರಿ ಹೋಗುತ್ತಿತ್ತು. ಇದನ್ನು ಪ್ರಶ್ನಿಸಿದಾಗ ಅಂದು
ಭರವಸೆ ನೀಡಿದ್ದವರು ಅಂತರ ಕಾಯ್ದುಕೊಂಡರು.

ಅಷ್ಟೇ ಏಕೆ, ಮುಖ್ಯಮಂತ್ರಿ ಮತ್ತು ಆಪ್ತ ವಲಯದ ಸಂಪರ್ಕ ಕೂಡ ಕಷ್ಟವಾಗಿತ್ತು. ಇದರಿಂದ ಸಿಟ್ಟಾದ ರಮೇಶ್ ಅವರಿಗೆ ಸಚಿವ ಯೋಗೇಶ್ವರ, ಶಾಸಕರಾದ ವಿಶ್ವನಾಥ್, ಯತ್ನಾಳ್ ಸೇರಿದಂತೆ ಅನೇಕ ಶಾಸಕರು ರಮೇಶ್ ಬೆನ್ನಿಗೆ ನಿಂತರು. ಆಗಲೇ ಮುಂಬೈ ಪ್ರವಾಸ ಹಾಗೂ ರಾಜೀನಾಮೆ ಮತ್ತು ರಾಜಕೀಯ ನಿವೃತ್ತಿ
ಘೋಷಣೆ ರಾಜಕಾರಣ ಶುರುವಾಗಿತ್ತು.

ಸಿಡಿ ಸುತ್ತಿಕೊಳ್ಳುವ ಭೀತಿಯೂ ಕಾರಣ: ಈ ಮಧ್ಯೆ, ಸಿಡಿ ಪ್ರಕರಣವು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ಹೋಗಿದ್ದು, ಸದ್ಯಕ್ಕೆ ರಮೇಶ್ ಕೇಸಿನಿಂದ ಮುಕ್ತವಾಗುವುದೂ ಕಷ್ಟ ಎನಿಸಿದೆ. ವಿಚಾರಣೆ ವೇಳೆ ರಮೇಶ್, ಇದು ಸಮ್ಮತಿ ಸೆP ಎಂದಿದ್ದು, ಯುವತಿ ಮಾತ್ರ ಇದನ್ನು ನಿರಾಕರಿಸಿದ್ದಾರೆ. ಹೀಗಾಗಿ ಇದೊಂದು ಪ್ರeಪೂರ್ವಕ ಅಪರಾಧ ಕೃತ್ಯ ಎಂದು ಪರಿಗಣಿಸಿರುವ ಕಾರಣ ಇದಕ್ಕೆ 10 ವರ್ಷಗಳ ಜೈಲು ಶಿಕ್ಷೆ ಇದೆ.

ಇಂದಿರಾ ಜೈಸಿಂಗ್ ಎಂಟ್ರಿ ತಂದ ತಲೆನೋವು: ಸಿಡಿ ಪ್ರಕರಣದಲ್ಲಿ ಯುವತಿ ಪರ ವಕೀಲರಾಗಿ ಖ್ಯಾತ ಮಹಿಳಾ ಪರ ಹೋರಾಟಗಾರ್ತಿ, ಸುಪ್ರೀಂಕೋರ್ಟ್ ನ್ಯಾಯವಾದಿ ಇಂದಿರಾ ಜೈಸಿಂಗ್ ಹೋರಾಟಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್ ಸರಕಾರದಲ್ಲಿ ಕೇಂದ್ರದ ಸಾಲಿಸಿಟರ್ ಜನರಲ್ ಆಗುವ ಮೂಲಕ ದೇಶದ ಪ್ರಥಮ ಮಹಿಳಾ ಸಾಲಿಸಿಟರ್ ಜನರಲ್ ಆಗಿದ್ದವರು ಇಂದಿರಾ ಜೈಸಿಂಗ್. ರಾಷ್ಟ್ರೀಯ ಮಹಿಳಾ ವಿವಾದಗಳಲ್ಲಿ ಕೆಲವೇ ಗಂಟೆಗಳು ಕೋರ್ಟ್‌ನಲ್ಲಿ ಕಾಣಿಸಿಕೊಳ್ಳುವ ಇವರನ್ನು ರಮೇಶ್ ವಿರುದ್ಧ ನೇಮಿಸಿರುವುದು ದೊಡ್ಡ ತಲೆನೋವಾಗಿದೆ.

ಇದರ ಹಿಂದೆ ಕೆಪಿಸಿಸಿ ಕೆಲವು ವಿಭಾಗಗಳೂ ಇರುವ ಶಂಕೆ ಇದೆ. ಈ ಎಲ್ಲ ವಿಚಾರಗಳಿಂದ ರಮೇಶ್ ಬಂಧನ ಭೀತಿಯಲ್ಲಿzರೆ ಎನ್ನಲಾಗಿದೆ. ಪುತ್ರನ ರಾಜಕೀಯ ಪ್ರವೇಶಕ್ಕೆ ದಾರಿ: ಸಿಡಿ ಕೇಸಿನಲ್ಲಿ ಬಂಧನವಾದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರೆ, ಅಷ್ಟು ಬೆಲೆ ಸಿಗದು. ಆದ್ದರಿಂದ ಈಗಲೇ ರಾಜೀನಾಮೆ ಪ್ರಸ್ತಾಪಿಸಿದರೆ, ಪುತ್ರ ಅಮರ್‌ನಾಥ್ ರಾಜಕೀಯ ಪ್ರವೇಶಕ್ಕೆ ದಾರಿಯಾಗುತ್ತದೆ. ಸರಕಾರದ ಒತ್ತಡಕ್ಕೆ ಮಣಿದು ಸಹೋದರ ಬಾಲಚಂದ್ರ ಜಾರಕಿಹೂಳಿ ಅವರಿಗೆ ಜಲಸಂಪನ್ಮೂಲ ಸಚಿವ ಸ್ಥಾನ ಕೊಡಿಸಬಹುದು ಎನ್ನುವ ಲೆಕ್ಕಾಚಾರ ರಮೇಶ್ ಅವರದು ಎಂದು ಮೂಲಗಳು ಹೇಳಿವೆ. ಅಲ್ಲದೆ, ತಮ್ಮ ಬೇಡಿಕೆಗಳನ್ನು ಸುತ್ತೂರು ಶ್ರೀಗಳ ಮೂಲಕ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಅವರಿಗೆ ಮುಟ್ಟಿಸುವ ತಂತ್ರವಾಗಿ ಮೈಸೂರಿನ ಮಠಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.

ಸುತ್ತೂರು ಶ್ರೀ ಹಾಗೂ ಮುಖ್ಯಮಂತ್ರಿ ಭೇಟಿ ಚರ್ಚೆ
ಬೆಂಗಳೂರು: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿಯಾಗಿ ವಾಪಸಾದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಇದಾದ ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ ಗೌಪ್ಯ ಮಾತುಕತೆ ನಡೆಸಿದ್ದಾರೆ. ಯಡಿಯೂರಪ್ಪ ಅವರನ್ನು ಭೇಟಿಯಾದ ಜಾರಕಿಹೊಳಿ ಅವರು, ತಮ್ಮ ವಿರುದ್ಧ ಇರುವ ಸಿಡಿ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿಸಿ, ಆರೋಪ ಮುಕ್ತ ಮಾಡಿ ಹಾಗೂ ಸಂಪುಟಕ್ಕೆ ವಾಪಾಸು ತಗೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ.

***

ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಮಾಡಿದ್ದು ಸತ್ಯ. ಆದರೆ, ಕೆಲವು ಹಿರಿಯರ ಸಲಹೆ ಮೇರೆಗೆ ಈಗ ಅದನ್ನು ಕೈಬಿಟ್ಟಿದ್ದೇನೆ. ಮನಸ್ಸು ನೊಂದು
ರಾಜೀನಾಮೆ ನಿರ್ಧಾರ ಮಾಡಿದ್ದು ನಿಜ. ರಾಜೀನಾಮೆ ಕೊಟ್ಟರೂ ನಾನೊಬ್ಬನೇ ಕೊಡುತ್ತೇನೆ. ಕಾಂಗ್ರೆಸ್ ಮುಳುಗುವ ಹಡಗು, ನಾನೇಕೆ ಆ ಪಕ್ಷಕ್ಕೆ ಹೋಗಲಿ.
– ರಮೇಶ್ ಜಾರಕಿಹೊಳಿ ಮಾಜಿ ಸಚಿವ