ಲೇಖನ – ಸುಮಾ ಸತೀಶ್
ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು ರಾಮ ಎಂಬಂತೆ ಎಲ್ಲೆಲ್ಲಿ ನೋಡಿದರೂ ರಾಮ ಜಪವೇ. ಇಂದು (ಜನವರಿ 22 ಕ್ಕೆ) ಪ್ರತಿಯೊಬ್ಬರ ಕನಸು ಅಯೋಧ್ಯಾ ದರ್ಶನ. ಆದರೆ ದೂರದ ಅಯೋಧ್ಯೆಗೆ ಎಲ್ಲರಿಗೂ ಹೋಗಲಾಗದು. ಅದಕ್ಕಾಗಿ ಬೆಂಗಳೂರಿನ ಗಿರಿನಗರದ ವಾಸವಿ ದೇವಸ್ಥಾನದಲ್ಲಿ ಅಯೋಧ್ಯೆಯ ರಾಮಮಂದಿರದ ಸುಂದರ ಕಲಾಕೃತಿಯಂತಿರುವ ಪ್ರತಿಕೃತಿಯನ್ನು ಅನಾವರಣ ಮಾಡಲಾಗುತ್ತಿದೆ.
ರಾಮಭಕ್ತರು ಇಲ್ಲಿಯೇ ರಾಮಮಂದಿರದ ಭವ್ಯತೆ ದರ್ಶಿಸಿ, ರಾಮನನ್ನು ಕಣ್ತುಂಬಿಸಿಕೊಂಡು ಧನ್ಯರಾಗಬಹುದು .
ಜ. 22ರಂದು ( ಇಂದು ) ರಾಮನಿಗೆ ಅಭಿಷೇಕ, ಪೂಜೆ, ಭಜನೆಗಳು ಇಡೀ ದಿನ ನಡೆಯಲಿದ್ದು, ಇದರ ನೇರ ಪ್ರಸಾರದ ಆಯೋಜನೆಯಾಗಿದೆ.
ಸಾರ್ವಜನಿಕರು ಈ ದಿವ್ಯ ಸಂದರ್ಭದಲ್ಲಿ ದರ್ಶನಕ್ಕೆ ಆಗಮಿಸಬಹುದು.
ಈ ಅಯೋಧ್ಯ ರಾಮಮಂದಿರದ ಪ್ರತಿಕೃತಿಯನ್ನು ವಾಸವಿ ದೇಗುಲದ ಅಳತೆಗೆ ತಕ್ಕಂತೆ ರೂಪಿಸಲಾಗಿದೆ. 24 ಅಡಿ ಉದ್ದ, 18 ಅಡಿ ಅಗಲದ ರಾಮಮಂದಿರದ ಗೋಪುರ 16 ಅಡಿಯಿದೆ.
ಬಸವನಗುಡಿಯ ಶಾಸಕ ರವಿ ಸುಬ್ರಹ್ಮಣ್ಯ ಅವರು ಉದ್ಘಾಟನೆ ಮಾಡಲಿದ್ದಾರೆ. ಜ. 22 ರಂದು ಈ ನೂತನ ಅಯೋಧ್ಯೆ ರಾಮಮಂದಿರದ ಪ್ರತಿರೂಪವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದನ್ನು ಜ. 22 ರಿಂದ 30ರವರೆಗೆ, ಬೆಳಗ್ಗಿನಿಂದ ರಾತ್ರಿವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಗಿರಿನಗರದ ವಾಸವಿ ದೇವಸ್ಥಾನದ ವೈಶಿಷ್ಟ್ಯಗಳು : 22 ವರ್ಷ ಪೂರೈಸಿ 23 ನೆ ವಾರ್ಷಿಕೋತ್ಸವಕ್ಕೆ ಸಜ್ಜಾಗುತ್ತಿದೆ.
ಈ ದೇವಾಲಯ ಹತ್ತಾರು ವರ್ಷಗಳಿಂದಲೂ ಶಕ್ತಿ ಸ್ವರೂಪಿಣಿ ವಾಸವಿ ತಾಯಿಯ ವೈವಿಧ್ಯಮಯ ಅಲಂಕಾರಕ್ಕಾಗಿ, ವಿಶೇಷ ವಾಸವಿ ಮೂರ್ತಿಗಳಿಂದಾಗಿ ಜನಜನಿತವಾಗಿದೆ. ಜಾತಿ, ಮತ ಮೀರಿ ಸಾರ್ವಜನಿಕರು ಭಕ್ತಿಯಿಂದ ತಾಯಿಗೆ ನಡೆದುಕೊಳ್ಳುತ್ತಾರೆ. ನಿತ್ಯವೂ ಎರಡೂ ಹೊತ್ತು ಪ್ರಸಾದ ನೀಡಲಾಗುತ್ತದೆ.
ಸದಾ ಹೊಸತನ್ನೇ ನೀಡುವ ಈ ದೇವಾಲಯದ ಟ್ರಸ್ಟ್ ವಿಶಿಷ್ಟ ಪರಿಕಲ್ಪನೆ ರೂಪಿಸುತ್ತಲೇ ಜನಜನಿತವಾಗಿದೆ.
ಈ ವಾಸವಿ ದೇವಾಲಯದ ಟ್ರಸ್ಟ್ ಹಲವು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದೆ.
ಕ್ರಿಯಾಶೀಲ ಟ್ರಸ್ಟ್
ಡಾ. ಎ. ಸತೀಶ್ ( ಅಧ್ಯಕ್ಷರು), ವೆಂಕಟೇಶ ಬಾಬು (ಕಾರ್ಯದರ್ಶಿ) ಎಲ್. ಕೆ. ಮಣಿ ( ಖಜಾಂಚಿ) ಗೋಪಿನಾಥ್ ಮತ್ತು ಪ್ರಹ್ಲಾದ್ ( ಜಂಟಿ ಕಾರ್ಯದರ್ಶಿಗಳು ) ಶೋಭಾ ಸತೀಶ್, ನಿರಂಜನ್ ಮತ್ತು ಎನ್. ಎ. ನಾಗರಾಜ್ ( ಉಪಾಧ್ಯಕ್ಷರು ) ಎಲ್. ಎ. ಬದರಿನಾಥ್ ( ನಿರ್ದೇಶಕರು) ಅವರನ್ನು ಒಳಗೊಂಡಿರುವ ಈ ಟ್ರಸ್ಟ್ ಈ ದೇವಾಲಯದ ಅಭಿವೃದ್ಧಿಗೆ ಶ್ರಮಿಸುತ್ತಿದೆಯಲ್ಲದೇ, ಅನೇಕ ಸಾಮಾಜಿಕ ಶೈಕ್ಷಣಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿರುವುದು ವಿಶೇಷ.
ಈ ವಾಸವಿ ದೇವಾಲಯದಲ್ಲಿ 501 ಕೆ ಜಿ ಅರಿಶಿನದಿಂದ ಮಾಡಿದ 15 ಅಡಿ ಎತ್ತರದ ದೇವಿ ವಾಸವಿಯ ಪ್ರತಿಮೆ, ರೇಶಿಮೆ ದಾರದಿಂದ ನಿರ್ಮಿಸಿದ 12 ಅಡಿಯ ವಿಗ್ರಹ, 21 ಅಡಿಯ ವಾಸವಿ ವಿಶ್ವರೂಪ ದರ್ಶನದ ಬೃಹತ್ ವಿಗ್ರಹ, ಸಿಲಿಕಾನ್ ನಿಂದ ಮಾಡಲ್ಪಟ್ಟ ಐದೂವರೆ ಅಡಿಯ ಚತುರ್ಭುಜೆಯಾದ, ಸುಂದರ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ಬಾಲೆಯ ಜೀವಂತ ಕಳೆಯ ವಿಗ್ರಹ, ಇದು ಈಗಲೂ ಸಾರ್ವಜನಿಕ ದರ್ಶನಕ್ಕೆ ಲಭ್ಯವಿದೆ.