ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಜಗತ್ತಿನಲ್ಲಿಯೇ ಜಪಾನಿನ ಬುಲೆಟ್ ಟ್ರೇನ್ ಸರ್ವೋತ್ಕೃಷ್ಟ ಎಂದು ಹೆಸರುವಾಸಿಯಾಗಿದೆ. ಬುಲೆಟ್ ಟ್ರೇನ್ ಆರಂಭವಾಗಿ 60 ವರ್ಷ
(ಅಕ್ಟೋಬರ್ 1, 1964) ಗಳಾದರೂ ಇಲ್ಲಿ ತನಕ, ಯಾವ ದುರಂತ ಸಂಭವಿಸದೇ ಇರುವುದರಿಂದ, ಅದು ಅತ್ಯಂತ ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಾರಿಗೆ ವ್ಯವಸ್ಥೆ ಎಂದು ಕರೆಯಿಸಿಕೊಂಡಿದೆ.
ಇಡೀ ವ್ಯವಸ್ಥೆಯಲ್ಲಿ ಯಾವ ದೋಷವೂ ಇಲ್ಲದಿರುವುದು ಅದರ ದಕ್ಷತೆ ಮತ್ತು ಕಾರ್ಯಕ್ಷಮತೆ ಬಗ್ಗೆ ಸಂಪೂರ್ಣ ವಿಶ್ವಾಸ ನೆಲೆಸುವಂತೆ ಮಾಡಿದೆ. ಇಂಥ ಬುಲೆಟ್ ಟ್ರೇನಿನಲ್ಲಿ ಪ್ರಯಾಣ ಮಾಡುವಾಗ ಕೆಲವು ಶಿಷ್ಟಾಚಾರ ಮತ್ತು ಸಾಮಾಜಿಕ ಅಭ್ಯಾಸಗಳನ್ನು ಪಾಲಿಸಬೇಕೆಂದು ಅಪೇಕ್ಷಿಸಲಾಗಿದೆ. ಬುಲೆಟ್ ಟ್ರೇನಿನಲ್ಲಿ ಒಂದು ಹ್ಯಾಂಡ್ ಬ್ಯಾಗ್ ಅಥವಾ ಕ್ಯಾಬಿನ್ ಬ್ಯಾಗ್ ಹೊರತಾಗಿ ಮತ್ತೇನನ್ನೂ ಒಯ್ಯುವಂತಿಲ್ಲ. ಪ್ರಯಾ ಣಿಕರ ಸರಾಗ ಓಡಾಟಕ್ಕೆ ತೊಂದರೆಯಾಗುವುದರಿಂದ ಮತ್ತು ಬ್ಯಾಗನ್ನು ಮೇಲೆ ಎತ್ತಿ ಇಡುವುದು, ಇಳಿಸುವುದು ಕಷ್ಟವಾಗುವುದರಿಂದ ದೊಡ್ಡ ಗಾತ್ರದ ಸೂಟ್ಕೇಸನ್ನು ಒಳಗೆ ಬಿಡುವುದಿಲ್ಲ.
ಪ್ರಯಾಣಿಕರು ಓಡಾಡುವ ಮಾರ್ಗದಲ್ಲಿ ಯಾವ ಬ್ಯಾಗುಗಳನ್ನೂ ಇಡುವಂತಿಲ್ಲ. ರಿಸರ್ವೇಶನ್ ಹೊಂದಿದವರು ಬೋಗಿಯ ಹಿಂಭಾಗದಲ್ಲಿ ದೊಡ್ಡ ಸೂಟ್ ಕೇಸುಗಳನ್ನು ಇಡಬಹುದು. ಅರ್ಬನ್ ಮತ್ತು ಲೋಕಲ್ ಟ್ರೇನುಗಳಲ್ಲಿ ಆಹಾರ ಪದಾರ್ಥಗಳನ್ನು ಸೇವಿಸುವುದು ಒರಟು ವರ್ತನೆ ಎಂದು ಕರೆಯಿಸಿಕೊಳ್ಳುತ್ತದೆ. ಟ್ರೇನು ಚಲಿಸುವಾಗ, ಆಹಾರವನ್ನು ಸೇವಿಸಿದರೆ ಅದು ಕೆಳಗೆ ಅಥವಾ ಅಕ್ಕ-ಪಕ್ಕದಲ್ಲಿದ್ದವರ ಮೇಲೆ ಬೀಳಬಹುದು ಮತ್ತು ಆಹಾರದ ವಾಸನೆ ಪಕ್ಕದವರಿಗೆ ಕಿರಿಕಿರಿಯಾಗಬಹುದು ಎಂಬ ಕಾರಣಕ್ಕೆ ಸಾಮಾನ್ಯವಾಗಿ ಯಾರೂ ಆಹಾರ ಸೇವಿಸುವುದಿಲ್ಲ. ಆದರೆ ನೀರು ಕುಡಿಯಬಹುದು.
ಆದರೆ ಬುಲೆಟ್ ಟ್ರೇನ್ನಲ್ಲಿ ಸ್ನ್ಯಾಕ್ ಸೇವಿಸಬಹುದು. ಪ್ರಯಾಣಿಕರಿಗೆಂದೇ, ಕೆಲವು ಸ್ಟೇಷನ್ಗಳಲ್ಲಿ ಲಘು ತಿಂಡಿಗಳನ್ನು ಮಾರಾಟ ಮಾಡಲಾ ಗುತ್ತದೆ. ಅಲ್ಲಿ ಹೋಗಿ ಖರೀದಿಸಿ ಬರಬಹುದು. ಬುಲೆಟ್ ಟ್ರೇನಿನಲ್ಲಿ ಕಾಫಿ, ಟೀ ಕುಡಿಯುವುದು ಸಹ ಒಳ್ಳೆಯ ವರ್ತನೆಯಲ್ಲ. ಕೋಕ್ ಮತ್ತು ಸೋಡಾ ಬಾಟಲಿ ಓಪನ್ ಮಾಡುವಾಗ ಅದು ಹೊರಗೆ ಚೆಲ್ಲದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಪಕ್ಕದಲ್ಲಿದ್ದವರ ಜತೆ ಮಾತಾಡಬಹುದು, ಆದರೆ ಮೆಲುದನಿಯಲ್ಲಿ. ಜೋರಾಗಿ ಮಾತಾಡುವುದು, ಕೇಕೆ ಹಾಕುವುದು, ಹಾಡುವುದು ಇವೆಲ್ಲ ನಿಷಿದ್ಧ.
ಮೊಬೈಲ್ ಫೋನಿನಲ್ಲಿ ಜೋರಾಗಿ ಮಾತಾಡುವಂತಿಲ್ಲ. ಮೊಬೈಲ್ನಲ್ಲಿ ಮಾತಾಡುವಾಗಲೂ ಒಳದನಿಯಲ್ಲಿದ್ದರೆ ಯಾರೂ ದುರುಗುಟ್ಟಿ ನೋಡುವುದಿಲ್ಲ. ಬುಲೆಟ್ ಟ್ರೇನಿನಲ್ಲಿ ಫೋಟೋ ತೆಗೆಯುವುದು ಮತ್ತು ವಿಡಿಯೋ ಮಾಡುವುದು ಒಳ್ಳೆಯ ನಡತೆಯಲ್ಲ, ಅಲ್ಲಿ ಸಿಗರೇಟು ಸೇದುವಂತಿಲ್ಲ. ಆದರೆ ಸ್ಮೋಕಿಂಗ್ ಕಾರ್ ವ್ಯವಸ್ಥೆ ಇರುವ ಬುಲೆಟ್ ಟ್ರೇನುಗಳಲ್ಲಿ ಸಿಗರೇಟು ಸೇದಬಹುದು. ಬಾಗಿಲ ಹತ್ತಿರದಲ್ಲಿರುವ
ಆಸನಗಳು ವಯಸ್ಸಾದವರಿಗೆ, ವಿಕಲಚೇತನರಿಗೆ, ಗರ್ಭಿಣಿಯರಿಗೆ ಮತ್ತು ಮಕ್ಕಳನ್ನು ಎತ್ತಿಕೊಂಡವರಿಗೆ ಮೀಸಲು. ಈ ಆಸನಗಳ ಬಣ್ಣವೇ ಬೇರೆ.
ಆಸನಗಳನ್ನು ಹಿಂದಕ್ಕೆ ಬಾಗಿಸುವಾಗ, ಹಿಂದಿನವರನ್ನು ಗಮನಿಸುವುದು ಲೇಸು. ಬುಲೆಟ್ ಟ್ರೇನಿನಲ್ಲಿ ಪತ್ರಿಕೆಗಳನ್ನು ಓದಬಹುದು, ಆದರೆ ಎದ್ದು
ಹೋಗುವಾಗ ಅದನ್ನು ತೆಗೆದುಕೊಂಡು ಹೋಗಬೇಕು. ಪತ್ರಿಕೆಗಳನ್ನು ಬೇರೆಯವರ ಮುಖದ ತನಕ ತೆಗೆದುಕೊಂಡು ಹೋಗುವುದು ಸಭ್ಯ ನಡತೆ
ಅಲ್ಲ. ಓದಿದ ಪತ್ರಿಕೆಗಳನ್ನು ಬಿಟ್ಟು ಹೋಗುವುದು ರದ್ದಿ ಅಥವಾ ಕಸ ಎಂದೇ ಕರೆಯಿಸಿಕೊಳ್ಳುತ್ತದೆ. ಬುಲೆಟ್ ಟ್ರೇನಿನಲ್ಲಿ ಚಾಕಲೇಟ್ ಹೊದಿಕೆ ಯನ್ನೂ ಚೆಲ್ಲಿ ಹೋಗುವುದನ್ನು ಜಪಾನಿಯರು ಇಷ್ಟಪಡುವುದಿಲ್ಲ. ಕೆಲವರು ಖಾಲಿಯಾದ ನೀರಿನ ಬಾಟಲಿ, ಕೋಕ್ ಬಾಟಲಿ ಮತ್ತು ಚಿ ಪ್ಯಾಕೆಟ್ ಗಳನ್ನು ಅಲ್ಲಿಯೇ ಬಿಟ್ಟು ಹೋಗುವುದನ್ನು ಸಹಿಸುವುದಿಲ್ಲ.
ಬುಲೆಟ್ ಟ್ರೇನ್ ಆಗಮಿಸುತ್ತಿದ್ದಂತೆ ಬೇರೆಯವರನ್ನು ನೂಕುವಂತಿಲ್ಲ. ಮತ್ತೊಬ್ಬರಿಂದ ಕನಿಷ್ಠ ಎರಡು ಅಡಿ ಅಂತರವನ್ನಾದರೂ ಕಾಪಾಡಬೇಕು. ಯಾವ ಕಾರಣಕ್ಕೂ ತಳ್ಳಾಟ, ನೂಕುನುಗ್ಗಲಿಗೆ ಆಸ್ಪದವಿಲ್ಲ. ಟ್ರೇನ್ ಏರುತ್ತಿದ್ದಂತೆ, ಮುಂದಕ್ಕೆ ಚಲಿಸಬೇಕು. ಯಾವ ಕಾರಣಕ್ಕೂ ಬಾಗಿಲ ಹತ್ತಿರ ನಿಲ್ಲುವಂತಿಲ್ಲ. ನಿಲ್ದಾಣದಲ್ಲಿ ನಡೆಯುತ್ತಾ ಆಹಾರ ಸೇವಿಸುವುದು ಒಳ್ಳೆಯ ನಡೆಯಲ್ಲ. ನಿಲ್ದಾಣದಲ್ಲಿ ಕಾಲಿಟ್ಟು, ರೈಲು ಪ್ರಯಾಣ ಮುಗಿಸಿ, ಹೊರಬೀಳುವ ತನಕ ಎಲ್ಲೂ ಗೊಂದಲ, ಗಲಿಬಿಲಿ ಆಗುವುದಿಲ್ಲ. ಅದೇ ಸ್ವಾರಸ್ಯ.
ಇದನ್ನೂ ಓದಿ: @vishweshwarbhat