Saturday, 23rd November 2024

ಭಾವನೆ ಕೆರಳಿಸಬೇಡಿ, ಅರಳಿಸಿ

ಬಿಜೆಪಿಯೇತರ ವಿಪಕ್ಷಗಳ ‘ಇಂಡಿಯ’ ಮೈತ್ರಿಕೂಟವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ೩೭೦ನೇ ವಿಧಿಯನ್ನು ಮರು ಸ್ಥಾಪನೆ ಮಾಡಲಾಗುವುದಂತೆ. ಹಾಗೆಂದು ಭರವಸೆ ನೀಡಿರುವುದು ‘ಇಂಡಿಯ’ ಮೈತ್ರಿಕೂಟದ ಪರವಾಗಿ ಚೆನ್ನೈನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿರುವು ದಾಗಿ ಹೇಳಿಕೊಂಡಿರುವ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ. ಇಂಥ ಆಶ್ವಾಸನೆಗಳನ್ನು ಕೇಳಿದಾಗೆಲ್ಲ, ‘ಇದೇನು ಹುಚ್ಚೋ, ಬೆಪ್ಪೋ, ಶಿವಲೀಲೆಯೋ?’ ಎಂಬ ಮಾತು ಅಪ್ರಯತ್ನವಾಗಿ ನೆನಪಾಗುತ್ತದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಮಾಡಿದ್ದರ ಹಿಂದಿನ ಉದ್ದೇಶ ಹಾಗೂ ಅದು ರದ್ದಾದ ನಂತರ ಕಣಿವೆ ರಾಜ್ಯದಲ್ಲಿ ಆಗಿರುವ ಸಕಾರಾತ್ಮಕ ಮತ್ತು ಸ್ವಾಗತಾರ್ಹ ಬದಲಾವಣೆಗಳ ಕುರಿತು ಒಂದಿಡೀ ದೇಶದ ಜನರೇ ಶ್ಲಾಘಿಸುತ್ತಿದ್ದಾರೆ. ಹೀಗಿರುವಾಗ, ಡಿಎಂಕೆಯ ಪ್ರಭೃತಿಗಳು ಹೀಗೊಂದು ಆಶ್ವಾಸನೆ ನೀಡಿರುವುದು ನಗೆಪಾಟಲಿನ ನಡೆಯಷ್ಟೇ. ಚುನಾವಣೆಯ ಕಾಲಘಟ್ಟದಲ್ಲಿ ಮತದಾರ ರನ್ನು ಸೆಳೆಯಲೆಂದು ಪ್ರಣಾಳಿಕೆಗಳಲ್ಲಿ ಚಿತ್ತಾಕರ್ಷಕ ಭರವಸೆಗಳನ್ನು ನೀಡಲಾಗುತ್ತದೆ; ಯಾವ ರಾಜಕೀಯ ಪಕ್ಷವೂ ಇದಕ್ಕೆ ಹೊರತಲ್ಲ.

ಆದರೆ ನಿರ್ದಿಷ್ಟ ಸಮುದಾಯದವರನ್ನು ಓಲೈಸಲೆಂದು, ‘ತುಷ್ಟೀಕರಣ ಕಾರ್ಯನೀತಿ’ಯ ಅಂಗವಾಗಿ ಇಂಥ ವ್ಯರ್ಥ ಕಸರತ್ತುಗಳನ್ನು ಮಾಡಿದರೆ, ಪ್ರಜ್ಞಾವಂತರೂ ರಾಷ್ಟ್ರಪ್ರೇಮಿಗಳೂ ಆಗಿರುವ ನಮ್ಮ ಜನರು ಅದನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ ಎನ್ನದೆ ವಿಧಿಯಿಲ್ಲ. ಸಾರ್ವತ್ರಿಕ  ಚುನಾವಣೆ ಯ ಆಸುಪಾಸಿನ ಕಾಲಘಟ್ಟವು ನಿಜಕ್ಕೂ ಸೂಕ್ಷ್ಮವಾಗಿದ್ದು, ರಾಜಕೀಯ ಪಕ್ಷಗಳಿಂದ/ನಾಯಕರಿಂದ ಹೊಮ್ಮುವ ಅವಿವೇಕದ ಮಾತು-ವರ್ತನೆಗಳು ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆ ತರುವಂಥ ಸಾಧ್ಯತೆ ಇರುತ್ತದೆ. ಅದು ಕ್ರಮೇಣ ವರ್ಗಸಂಘರ್ಷಕ್ಕೆ ತಿರುಗಿ ತ್ವೇಷಮಯ ವಾತಾವರಣವನ್ನು ಹುಟ್ಟುಹಾಕ ಬಹುದು. ಆದ್ದರಿಂದ ಜನ ನಾಯಕರೆನಿಸಿಕೊಂಡವರ ಮಾತು ಜನರ ಭಾವನೆ ಕೆರಳಿಸುವುದಕ್ಕಿಂತ ಅರಳಿಸುವ ರೀತಿಯಲ್ಲಿರಬೇಕು. ಅಂಥ ಮಾತುಗಳ ನ್ನಷ್ಟೇ ಜನರು ಸ್ವೀಕರಿಸುವುದು, ಅರಗಿಸಿಕೊಂಡು ಕಾಯರೂಪಕ್ಕೆ ತರುವುದು.

ಇಂಥ ಸರಳಸತ್ಯವನ್ನು ಅರಿಯದ ತಥಾಕಥಿತ ನಾಯಕರು ಭಾವನೆಗಳ ಕೆರಳಿಕೆಯನ್ನೇ ಮುಂದುವರಿಸಿದರೆ, ಅದು ಅವರ ಅಪ್ರಬುದ್ಧ ಚಿತ್ತಸ್ಥಿತಿಗೆ ಕನ್ನಡಿ ಹಿಡಿಯುತ್ತದೆ, ಅಷ್ಟೇ!