Thursday, 19th September 2024

ಪ್ರಾಧಿಕಾರಕ್ಕೆ ಬೇಕು ಮತ್ತಷ್ಟು ವಿಶೇಷ ಅಧಿಕಾರ

ರಾಜ್ಯದ ಆಡಳಿತ, ಶಿಕ್ಷಣ, ವ್ಯವಹಾರ ಸೇರಿದಂತೆ ನಾಡಿನ ಎಲ್ಲ ಕಾರ್ಯಚಟುವಟಿಕೆಯಲ್ಲಿ ಕನ್ನಡವನ್ನು ಸಮಗ್ರಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿನ ಕನ್ನಡದ ಸ್ಥಿತಿಯನ್ನು ಗಮನಿಸಿದರೆ ಪ್ರಾಧಿಕಾರಕ್ಕೆ ಮತ್ತಷ್ಟು ಅಧಿಕಾರ ದೊರೆಯ ಬೇಕಿರುವ ಅವಶ್ಯಕತೆಯೂ ಕಂಡುಬರುತ್ತದೆ. ಬ್ಯಾಂಕ್, ಅಂಚೆಕಚೇರಿ, ರೈಲ್ವೆ, ಆದಾಯ ತೆರಿಗೆ, ವಿಮಾ ಸಂಸ್ಥೆಗಳು ಸೇರಿದಂತೆ ರಾಜ್ಯದ ಹಲವು ಆಡಳಿತ ಸಂಸ್ಥೆಗಳಲ್ಲಿ ಕನ್ನಡದಲ್ಲಿಯೇ ಅರ್ಜಿ ನಮೂನೆಗಳನ್ನು ಬಳಸಬೇಕು. ಇದಕ್ಕಾಗಿ ಜಾಗೃತಿ ಮೂಡಿಸುವ
ಪ್ರಯತ್ನಗಳಾಗಬೇಕೆಂಬುದು ಪ್ರಾಽಕಾರದ ಅಧ್ಯಕ್ಷರ ಆಶಯ. ಈ ನಿಟ್ಟಿನಲ್ಲಿ ಪ್ರಾಧಿಕಾರದಿಂದ ಪ್ರಯತ್ನಗಳು ಸಹ ಮುಂದು ವರಿದಿದೆ.

ಆದರೆ ಈ ಆಶಯಗಳು ಜಾಗೃತಿಯ ಭಾಗವಾಗದೆ ಕಟ್ಟುನಿಟ್ಟಿನ ಅನುಷ್ಠಾನವಾಗಬೇಕು. ಇದಕ್ಕಾಗಿ ಮತ್ತಷ್ಟು ವಿಶೇಷ ಅಧಿಕಾರದ ಅವಶ್ಯಕತೆ ಕಂಡುಬರುತ್ತಿದೆ. ಅನರ್ಥ, ತಪ್ಪು ಪದಗಳನ್ನು ಹೊಂದಿದ ನಾಮ ಫಲಕಗಳನ್ನು ತೆರವುಗೊಳಿಸಲು ಹಾಗೂ ಕನ್ನಡದ ಅರ್ಜಿ ನಮೂನೆಗಳನ್ನು ಬಳಸದಿರುವ ಕಚೇರಿಗಳಿಗೆ ದಂಡ ವಿಧಿಸುವ ಪ್ರಯತ್ನಗಳಾಗಬೇಕಿದೆ. ಕನ್ನಡ ಅಭಿವೃದ್ಧಿ
ಪ್ರಾಧಿಕಾರವೆಂಬುದು ಕನ್ನಡದ ಅನುಷ್ಠಾನದ ನಿಟ್ಟಿನಲ್ಲಿ ವಿಶೇಷ ಅಧಿಕಾರ ಪಡೆಯುವ ಮೂಲಕ ಲೋಕಾಯುಕ್ತದ ಮಾದರಿಯಲ್ಲಿ ಸಂಸ್ಥೆಯಾಗಿ ರೂಪಿಸಬೇಕಿರುವ ಅನಿವಾರ್ಯತೆ ಕಂಡುಬರುತ್ತಿದೆ.

೧೯೮೩ರಲ್ಲಿ ರಚಿತವಾದ ಕನ್ನಡ ಕಾವಲು ಸಮಿತಿ ೧೯೮೫ರಲ್ಲಿ ಕನ್ನಡ ಕಾವಲು ಮತ್ತು ಗಡಿ ಸಲಹೆ ಸಮಿತಿಯಾಗಿ ಮರು ನಾಮಕರಣಗೊಂಡಿತು. ೧೯೯೦ರಲ್ಲಿ ರೂಪುಗೊಂಡ ಕನ್ನಡ ಅಭಿವೃದ್ಧಿ ಮಂಡಳಿಯು ಎರಡು ವರ್ಷಗಳ ತರುವಾಯ ಕನ್ನಡ
ಅಭಿವೃದ್ಧಿ ಪ್ರಾಧಿಕಾರವಾಗಿ ಆಸ್ತಿತ್ವಕ್ಕೆ ಬಂದಿತು. ಸಂಸ್ಥೆಯ ಆಡಳಿತದಲ್ಲಿ ಹೀಗೆ ಬದಲಾವಣೆಯನ್ನು ಕಾಣುತ್ತಾ ಬಂದಿರುವ ಅಭಿವೃದ್ಧಿ ಪ್ರಾಧಿಕಾರ ಅಧಿಕಾರದ ವಿಷಯದಲ್ಲಿಯೂ ಮತ್ತಷ್ಟು ಬದಲಾಗಬೇಕಿರುವುದು ಇಂದಿನ ಅನಿವಾರ್ಯತೆ.