Thursday, 19th September 2024

ವಾಹನಗಳ ಬಳಕೆಗೆ ಕಡಿವಾಣ ಅಗತ್ಯ

ಜನರ ಜೀವನ ಕ್ರಮ ಬದಲಾದಂತೆ ಜೀವನ ಶೈಲಿಯಲ್ಲಿ ವೇಗವೂ ಹೆಚ್ಚಿದೆ. ಇಂಥದೊಂದು ಬೆಳವಣಿಗೆಯಿಂದಾಗಿ ಸಂಚಾರ ವ್ಯವಸ್ಥೆಯೂ ವೇಗ ಪಡೆದು ಕೊಂಡಿದೆ. ದಿನೇ ದಿನೇ ವಾಹನಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬಂದಿದೆ. ವಾಹನಗಳ ಬಳಕೆಯ ಏರಿಕೆಯನ್ನು ತಂತ್ರಜ್ಞಾನದ ಬಳಕೆ ಹಾಗೂ ಅಭಿವೃದ್ಧಿಯ ಸೂಚಕವಾಗಿ ಗಮನಿಸುವುದರ ಜತೆಗೆ ಮಾರಕ ಅಂಶಗಳನ್ನು ಗಮನಿಸಬೇಕಿರುವುದು ಇಂದಿನ ಅಗತ್ಯ.

ಏಕೆಂದರೆ ಇದೀಗ ಹೆಚ್ಚು ಜನಸಂಖ್ಯೆ ಹೊಂದಿರುವ ಎಂಟು ರಾಜ್ಯಗಳ ರಾಜಧಾನಿಗಳಲ್ಲಿ ಮಾಲಿನ್ಯದಲ್ಲಿನ ನೈಟ್ರೋಜನ್ ಡೈಆಕ್ಸೆಡ್ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಇತ್ತೀಚೆಗೆ ಗ್ರೀನ್ ಪೀಸ್ ಇಂಡಿಯಾ ನಡೆಸಿದ ಸರ್ವೆಯಿಂದ ತಿಳಿದುಬಂದಿದೆ. ಬೆಂಗಳೂರಿನಲ್ಲಿ ನೈಟ್ರೋಜನ್ ಡೈಆಕ್ಸೆಡ್ (ಸಾರಜನಕ ಡೈಕ್ಸೆಡ್) ಪ್ರಮಾಣ ಶೇ.90ರಷ್ಟು ಏರಿಕೆಯಾಗಿದ್ದರೆ, ದೆಹಲಿಯಲ್ಲಿ ಶೇ.125, ಮುಂಬೈ ಶೇ.52, ಹೈದರಾಬಾದ್ ಶೇ.69, ಚೆನ್ನೈ ಶೇ.94, ಕೋಲ್ಕತಾ ಶೇ.11, ಜೈಪುರ ಶೇ.47 ಮತ್ತು ಲಖನೌನಲ್ಲಿ ಶೇ.32ರಷ್ಟು ಹೆಚ್ಚಾಗಿದೆ ಎಂದು ವರದಿ ಮೂಲಕ ಪ್ರಕಟಗೊಂಡಿದೆ.

2020ರ ಏಪ್ರಿಲ್‌ನಿಂದ 2021ರ ಏಪ್ರಿಲ್ ಮಧ್ಯ ಭಾಗದ ದತ್ತಾಂಶವನ್ನು ಸಮೀಕ್ಷೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ವರದಿಯ ಮತ್ತೊಂದು ಮುಖ್ಯಾಂಶವೆಂದರೆ, ಹೆಚ್ಚು ಪರಿಸರ ಮಾಲಿನ್ಯಕ್ಕೆ ಒಳಗಾದ ನಗರಗಳ ಜಾಸ್ತಿ ಕರೋನಾ ಪ್ರಕರಣಗಳು ಕಂಡು ಬಂದಿವೆ. ಸಂಚಾರ ವ್ಯವಸ್ಥೆಯಲ್ಲಿ ವಾಹನಗಳ ಏರಿಕೆ ಜತೆಗೆ ಅವುಗಳಿಂದಾಗಿ ಮಾಲಿನ್ಯವೂ ಹೆಚ್ಚುತ್ತಿರುವುದು ಇಂದಿನ ಗಂಭೀರ ಸಮಸ್ಯೆ. ಆದ್ದರಿಂದ ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಇಂದು ಅನೇಕ
ಕ್ರಮಗಳನ್ನು ಕೈಗೊಳ್ಳಬೇಕಿರುವುದು ಬಹುಮುಖ್ಯ ಅವಶ್ಯಕತೆ.