ಬೆಳಗಾವಿಯಯಲ್ಲಿ ಡಿ.೪ರಿಂದ ೧೫ರ ವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಭರದ ಸಿದ್ಧತೆ ಆರಂಭವಾಗಿದ್ದು, ಈ ಸಂದರ್ಭದಲ್ಲೇ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಿಎಂ ಸಿದ್ದರಾಮಯ್ಯ ಮತ್ತು ಸಚಿವರಿಗೆ ಪತ್ರ ಬರೆದು, ‘ಸದನದ ಒಳಗಡೆ ಮತ್ತು ಹೊರಗಡೆ ಅನಗತ್ಯ ಪ್ರತಿಭಟನೆ, ಧರಣಿ ಗಳ ಸಂಖ್ಯೆ ತಗ್ಗಿದಾಗ ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆ ಸಾಧ್ಯ.
ಹಾಗಾಗಿ ಅಧಿವೇಶನ ಆರಂಭಗೊಳ್ಳುವ ಮುಂಚೆಯೇ ಸಂಬಂಧಪಟ್ಟ ಸಂಘಟನೆಗಳ ಪ್ರಮುಖರ ಸಭೆ ಕರೆದು ಅವರ ಬೇಡಿಕೆ ಕುರಿತು ಸವಿಸ್ತಾರವಾಗಿ ಚರ್ಚಿಸಿ, ಪರಿಹಾರಕ್ಕೆ ಪ್ರಯತ್ನಿಸುವ ಮೂಲಕ ಧರಣಿ ನಡೆಸದಂತೆ ಮನವಿ ಮಾಡಬೇಕು’ ಎಂದು ಮನವಿ ಮಾಡಿದ್ದಾರೆ. ಹೊರಟ್ಟಿ ಅವರ ಮನವಿ ಅರ್ಥಪೂರ್ಣವಾಗಿದ್ದು, ಅಽವೇಶನದ ಯಶಸ್ಸಿಗೆ ಈ ಪ್ರಯತ್ನ ಪೂರಕವಾಗಿ ಕೆಲಸ ಮಾಡಬಹುದು. ಆದರೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ಇಷ್ಟು ಪ್ರಮಾಣದಲ್ಲಿ ಯಾಕೆ ಪ್ರತಿಭಟನೆಗಳು ನಡೆಯುತ್ತಿವೆ ಎನ್ನುವುದನ್ನು ಮೊದಲು ಸರಕಾರ ಅರ್ಥ ಮಾಡಿಕೊಳ್ಳಬೇಕು.
ಬೆಳಗಾವಿ ಅಧಿವೇಶನದ ವೇಳೆ ರಾಜ್ಯದ ರಾಜಧಾನಿ ೧೦ ದಿನಗಳ ಮಟ್ಟಿಗಾದರೂ ಉತ್ತರ ಕರ್ನಾಟಕಕ್ಕೆ ವರ್ಗಾವಣೆಯಾಗುತ್ತದೆ. ಉತ್ತರ ಕರ್ನಾಟಕದ
ಜನರಿಗೆ ತಮ್ಮ ಬೇಡಿಕೆಗಳನ್ನು ಮುಂದಿಡಲು ಯಾವಾಗೆಂದಾಗ ಬೆಂಗಳೂರಿಗೆ ಬರುವುದಕ್ಕೆ ಸಾಧ್ಯವಿಲ್ಲ. ಕರ್ನಾಟಕದ ರಾಜಧಾನಿ ಬೆಂಗಳೂರು ಇಡೀ
ಕರ್ನಾಟಕವನ್ನು ಪ್ರತಿನಿಧಿಸುವುದಕ್ಕೆ ವಿಫಲವಾಗಿದೆ ಎನ್ನುವ ಆರೋಪವನ್ನು ಉತ್ತರ ಕರ್ನಾಟಕದ ಜನರು ಹಿಂದಿನಿಂದ ಮಾಡುತ್ತಾ ಬಂದಿದ್ದಾರೆ. ಈ
ಕಾರಣದಿಂದಲೇ, ಉತ್ತರ ಕರ್ನಾಟಕಕ್ಕಾಗಿ ಇನ್ನೊಂದು ಉಪ ರಾಜಧಾನಿಯನ್ನು ಘೋಷಿಸಬೇಕು ಎನ್ನುವ ಬೇಡಿಕೆಯನ್ನು ಈಗಾಗಲೇ ಇಟ್ಟಿದ್ದಾರೆ.
ದಕ್ಷಿಣ ಕರ್ನಾಟಕದ ಜನರಿಗೆ ಯಾವಾಗ ಬೇಕಾದರೂ ಬೆಂಗಳೂರಿಗೆ ತೆರಳಿ, ಅಲ್ಲಿರುವ ರಾಜಕೀಯ ನಾಯಕರ ಕಿವಿಗೆ ಅಪ್ಪಳಿಸುವಂತೆ ಪ್ರತಿಭಟನೆ
ಕೂಗುವ ಅವಕಾಶಗಳಿವೆ. ಆದರೆ ಉತ್ತರ ಕರ್ನಾಟಕದ ಮಂದಿಗೆ ಇದು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಸಿಗುತ್ತದೆ. ಬೆಂಗಳೂರಿನಲ್ಲಿ
ಇಡೀ ವರ್ಷ ನಡೆಯುವ ಪ್ರತಿಭಟನೆಗಳು, ಬೆಳಗಾವಿಯ ಅಧಿವೇಶನದ ಸಂದರ್ಭ ಹತ್ತು ದಿನಗಳಲ್ಲಿ ನಡೆಯುವುದು ಇದೇ ಕಾರಣಕ್ಕೆ. ಆದ್ದರಿಂದ
ಅಧಿವೇಶನದಲ್ಲಿ ನಡೆಯುವ ಕಲಾಪದಷ್ಟೇ ಮುಖ್ಯ, ಅಧಿವೇಶನದ ಹೊರಗಡೆ ನಡೆಯುವ ಈ ಜನಸಂಘಟನೆಗಳ ಪ್ರತಿಭಟನೆಗಳು. ಇವುಗಳಿಗೂ
ರಾಜಕಾರಣಿಗಳು ಕಿವಿಯಾಗುವ ಅಗತ್ಯವಿದೆ.