Friday, 20th September 2024

ಶಾಲೆ ಆರಂಭದ ಬಗ್ಗೆ ಇರಲಿ ಎಚ್ಚರ

ಕರ್ನಾಟಕದಲ್ಲಿ ಸೋಮವಾರದಿಂದ 9ರಿಂದ ದ್ವಿತೀಯ ಪಿಯುಸಿವರೆಗೆ ಭೌತಿಕ ತರಗತಿಯನ್ನು ಆರಂಭಿಸಲಾಗಿದೆ. ಮೊದಲ ದಿನ ಶೇ.36ರಷ್ಟು ವಿದ್ಯಾರ್ಥಿಗಳು ಆಗಮಿಸಿದ್ದು, ಇನ್ನು ಅನೇಕರು ಆನ್‌ಲೈನ್ ತರಗತಿಯ ಮೊರೆಯನ್ನೇ ಹೋಗಿದ್ದಾರೆ. ಮೂರನೇ ಅಲೆಯ ಆತಂಕ ಇರುವುದರಿಂದ, ನಗರ ಪ್ರದೇಶಗಳಲ್ಲಿ ಈಗಲೂ ಪೋಷಕರು ಮಕ್ಕಳನ್ನು ಆಫ್-ಲೈನ್ ತರಗತಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಕೇವಲ ಬೆಂಗಳೂರು ಮಾತ್ರವಲ್ಲದೇ. ಬೀದರ್, ಕೊಪ್ಪಳ, ಉತ್ತರ ಕನ್ನಡ ಭಾಗದಲ್ಲಿಯೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿರುವುದು, ಸರಕಾರ ನೀಡಿರುವ ಅಂಕಿ-ಅಂಶದಲ್ಲಿ ಸ್ಪಷ್ಟವಾಗಿದೆ. ತಜ್ಞರೇ ಹೇಳಿರುವಂತೆ ಅಕ್ಟೋಬರ್‌ನಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲಿಯೂ ಈ ಬಾರಿ ಮಕ್ಕಳಿಗೆ ಹೆಚ್ಚು ಸೋಂಕು ಬಾಧಿಸುವ ಆತಂಕ ಇರುವುದರಿಂದ, ಸಹಜವಾಗಿಯೇ ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು
ಹಾಕುತ್ತಿದ್ದಾರೆ.

ಅಂದ ಮಾತ್ರಕ್ಕೆ ಶಾಲೆಯನ್ನು ಆರಂಭಿಸದೇ, ಆನ್‌ಲೈನ್ ತರಗತಿಗಳನ್ನೇ ಮುಂದುವರಿಸುವುದು ಸಾಧ್ಯವಿಲ್ಲ. ಆದ್ದರಿಂದ ಅಗತ್ಯ ಕರೋನಾ ಮಾರ್ಗಸೂಚಿ ಗಳೊಂದಿಗೆ ಶಾಲೆಗಳನ್ನು ಆರಂಭಿಸಲೇಬೇಕಿದೆ. 9ನೇ ತರಗತಿಯ ಬಳಿಕ ಇದೀಗ ಒಂದರಿಂದ ಎಂಟನೇ ತರಗತಿಯವರೆಗೆ ತರಗತಿ ಆರಂಭಿಸುವುದಕ್ಕೆ ಸರಕಾರ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಆದರೆ 5ನೇ ತರಗತಿಗಿಂತ ಕೆಳಗಿನ ತರಗತಿಗಳಿಗೆ ಈ ಸಂಕಷ್ಟದ ಸಮಯದಲ್ಲಿ ಆರಂಭಿಸಬೇಕೇ? ಎನ್ನುವುದನ್ನು ಮತ್ತೊಮ್ಮೆ ಪರಾಮರ್ಶೆ ಮಾಡಬೇಕು.

ಏಕೆಂದರೆ, ಮಕ್ಕಳಿಗೆ ಕರೋನಾ ಮಾರ್ಗಸೂಚಿಯನ್ನು ಪಾಲಿಸಲೇಬೇಕು ಎಂದು ಹೇಳುವುದಕ್ಕೂ ಆಗುವುದಿಲ್ಲ. ಆದ್ದರಿಂದ ಮುಂದಿನ ಹಂತದ ತರಗತಿ ಯನ್ನು ಯಾವ ರೀತಿ ಆರಂಭಿಸಬೇಕು? ಎನ್ನುವ ಬಗ್ಗೆ ತಜ್ಞರಿಂದ ಸ್ಪಷ್ಟ ಚಿತ್ರಣ ಪಡೆದುಕೊಳ್ಳಬೇಕಾದ ಅನಿವಾರ್ಯತೆಯಿದೆ. ಇನ್ನು ಎಲ್ಲ ತರಗತಿಗಳನ್ನು ಆರಂಭಿಸಿದ ಬಳಿಕ ಮೂರನೇ ಅಲೆ ಹೆಚ್ಚಾದರೆ ಯಾವ ರೀತಿ ನಿಭಾಯಿಸಬೇಕು ಎನ್ನುವ ಬಗ್ಗೆ ತಯಾರಿ ಅಗತ್ಯ ಆರಂಭಿಸಬೇಕಿದೆ.