Thursday, 19th September 2024

ಮೂರನೇ ಅಲೆ ಬಗ್ಗೆ ಇರಲಿ ಎಚ್ಚರ

ಕರ್ನಾಟಕದಲ್ಲಿ ಎರಡನೇ ಅಲೆ ಕ್ಷೀಣಿಸಿ, ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಪುನಃ ಏರುಗತಿಯಲ್ಲಿ ಸಾಗಿದೆ. ಅನ್‌ಲಾಕ್ ಆಗುತ್ತಿದ್ದಂತೆ ಜನರು ಕರೋನಾ ಆತಂಕವನ್ನು ಮರೆತು ಹೊರಬರುತ್ತಿರುವುದು ಸೋಂಕು ಹೆಚ್ಚಾಗಲು ಪ್ರಮುಖ ಕಾರಣ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ.

ಆದರೆ ವಿಶ್ವ ಆರೋಗ್ಯ ಸಂಸ್ಥೆ, ಏಮ್ಸ್ ಹಾಗೂ ಐಸಿಎಂಆರ್ ಸೇರಿದಂತೆ ಬಹುತೇಕ ಸಂಸ್ಥೆಗಳು, ಭಾರತದಲ್ಲಿ ಮೂರನೇ ಅಲೆ ಇನ್ನಷ್ಟು ತೀವ್ರವಾಗಿರಲಿದೆ. ಆದ್ದರಿಂದ ಎಚ್ಚರಿಕೆ ಇರುವುದು ಲೇಸು ಎನ್ನುವ ಮಾತನ್ನು ಈಗಾಗಲೇ ಹೇಳಿವೆ. ಈ ನಿಟ್ಟಿನಲ್ಲಿ ಸರಕಾರಗಳು ತಗೆದುಕೊಳ್ಳುವ ಎಲ್ಲ ಕ್ರಮಗಳೊಂದಿಗೆ, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ನಿರ್ಬಂಧ ಹೇರಿಕೊಳ್ಳಬೇಕಿದೆ. ಇದನ್ನು ಪಾಲಿಸದೇ, ಸರಕಾರ ಅನುಮತಿ ನೀಡಿದೆ ಎಂದು ಬೇಕಾಬಿಟ್ಟಿ ಓಡಾಡಿದರೆ ಮೂರನೇ ಅಲೆಗೆ ರತ್ನಗಂಬಳಿ ಹಾಸಿ ಸ್ವಾಗತಿಸಿದಂತಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಅಂದ ಮಾತ್ರಕ್ಕೆ ಸರಕಾರ ಕರೋನಾ ಹೋಗುವ ತನಕ ಅಥವಾ ಶೇ.೧೦೦ರಷ್ಟು ಲಸಿಕೆ ಕಾರ್ಯ ಮುಗಿಯುವ ತನಕ ಲಾಕ್‌ಡೌನ್ ಹೇರಿಕೊಂಡು ಇರುವುದಕ್ಕೆ ಸಾಧ್ಯವೇ ಇಲ್ಲ. ಲಾಕ್‌ಡೌನ್ ಎನ್ನುವುದು ತಾತ್ಕಲಿಕ ವ್ಯವಸ್ಥೆ ಯಾಗಿದ್ದು, ಇದರಿಂದ ಸಾರ್ವಜನಿಕರ ಹಾಗೂ ಸರಕಾರದ ಆರ್ಥಿಕ ಪರಿಸ್ಥಿತಿ ಮೇಲೆ ಬಹುದೊಡ್ಡ ಹೊಡೆತ ಬೀಳಲಿದೆ. ಲಾಕ್‌ಡೌನ್ ಅನ್ನು ಇನ್ನಷ್ಟು ಮುಂದು ವರಿಸಿದರೆ, ಕರೋನಾಕ್ಕಿಂತ ಹೆಚ್ಚು ಆರ್ಥಿಕ, ಸಾಮಾಜಿಕ ಅಸಮಾನತೆ ಉಂಟಾಗಿ ಜನರು ಬೀದಿಗೆ ಬರುತ್ತಾರೆ. ಈಗಾಗಲೇ ಹೇರಿರುವ ಲಾಕ್‌ಡೌನ್ ನಿಂದ ಪ್ರತಿಕ್ಷೇತ್ರದಲ್ಲಿಯೂ ಭಾರಿ ಆರ್ಥಿಕ ಮುಗ್ಗಟ್ಟು ಎದುರಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ.

ಇನ್ನು ಇದೇ ರೀತಿ ಮುಂದುವರಿದರೆ, ಪರಿಣಾಮ ಇನ್ನಷ್ಟು ಭೀಕರವಾಗಿರಲಿದೆ. ಆದ್ದರಿಂದ ಈ ಎಲ್ಲ ವಿಷಯವನ್ನು ಗಮನದಲ್ಲಿರಿಸಿಕೊಂಡು ಸಾರ್ವಜನಿಕರು, ಅನ್‌ಲಾಕ್ ಆಗಿದೆ ಎಂದು ಹೊರಗೆ ಅನವಶ್ಯಕವಾಗಿ ತಿರುಗಾಡುವ ಬದಲು, ಮನೆಯಲ್ಲಿಯೇ ಸುರಕ್ಷಿತವಾಗಿರುವುದು ಲೇಸು.