Friday, 20th September 2024

ಹೇಳಿಕೆ ನೀಡುವಾಗ ಬದ್ಧತೆ ಇರಲಿ

ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರಿಗೂ ತಮ್ಮದೇ ಆದ ಜವಾಬ್ದಾರಿಯಿರುತ್ತದೆ. ಅದರಲ್ಲಿಯೂ ಜನಪ್ರತಿನಿಧಿಗಳು, ಸಚಿವರಾಗಿರುವವರು ಹೇಳಿಕೆ ನೀಡುವಾಗ ಜವಾಬ್ದಾರಿಯುತವಾಗಿರಬೇಕು. ಎರಡು ದಿನದ ಹಿಂದೆ ಮೈಸೂರಿನಲ್ಲಿ ಚಾಮುಂಡಿ ಬೆಟ್ಟದ ಆಸುಪಾಸಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಸಹಜವಾಗಿಯೇ ಪ್ರತಿಪಕ್ಷಗಳು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅದರಲ್ಲಿಯೂ ಗೃಹ ಖಾತೆಯನ್ನು ಹೊಸದಾಗಿ ಪಡೆದಿರುವ ಆರಗ ಜ್ಞಾನೇಂದ್ರ ವಿರುದ್ಧ ಟೀಕಾಪ್ರಹಾರ ನಡೆಸುವುದು ಮಾತ್ರವಲ್ಲದೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಟೀಕಿಸಿದರು. ಇಡೀ ಸಮಾಜ ತಲೆತಗ್ಗಿಸುವ ಈ ರೀತಿಯ ಘಟನೆಗಳು ನಡೆದಾಗ ಆಡಳಿತದಲ್ಲಿರುವ ಪಕ್ಷ ಹಾಗೂ ಅಧಿಕಾರಿ ಗಳೇ ಇದರ ಹೊಣೆಗಾರಿಕೆಯನ್ನು ಹೋರಬೇಕು. ‘ಆ ಘಟನೆ ನಡೆದ ಸ್ಥಳದಲ್ಲಿ ನಾನಿರಲಿಲ್ಲ’ ಎನ್ನುವ ಉಡಾಫೆ ಉತ್ತರಗಳು ನೀಡುತ್ತಾ ಹೋಗುವುದು ಸರಿಯಲ್ಲ. ಇನ್ನು ಈ ರೀತಿಯ ಪೈಶಾಚಿಕ ಘಟನೆ ನಡೆದಾಗ, ‘ಅವರ ಕಾಲದಲ್ಲಿಯೂ ನಡೆದಿತ್ತು’ ಎಂದು, ಸಮರ್ಥನೆ ಮಾಡಿಕೊಳ್ಳುವುದನ್ನು ರಾಜಕೀಯ ಪಕ್ಷಗಳು ಬಿಡಬೇಕು.

ಗೃಹ ಇಲಾಖೆ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರು, ‘ರೇಪ್ ಆಗಿರುವುದು ಅಲ್ಲಿ. ಕಾಂಗ್ರೆಸ್‌ನವರು ನನ್ನ ರೇಪ್ ಮಾಡುತ್ತಿದ್ದಾರೆ’ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಗೃಹ ಇಲಾಖೆಯ ಜವಾಬ್ದಾರಿ ಹೊತ್ತಿರುವ ಹಾಗೂ ಬಿಜೆಪಿಯ ಹಿರಿಯ ಶಾಸಕರೊಬ್ಬರಿಂದ ಈ ರೀತಿಯ ಹೇಳಿಕೆ ಖಂಡನೀಯ. ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಘಟನೆಯಲ್ಲಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸುವುದು ಪ್ರತಿಪಕ್ಷಗಳು ಕೆಲಸ. ಅದನ್ನು ಅವರು ಮಾಡಿದ್ದಾರೆ. ಸಚಿವರಾದ ಬಳಿಕ ಹೇಳಿಕೆ ನೀಡುವ ಮೊದಲು ಎಚ್ಚರಿಕೆಯಿಂದ ಇರಬೇಕು. ಈ ರೀತಿಯ ಸೂಕ್ಷ್ಮ ಪ್ರಕರಣಗಳ ವಿಷಯದಲ್ಲಿ ಪ್ರತಿಕ್ರಿಯಿಸುವಾಗ ಬದ್ಧತೆಯ ಹೇಳಿಕೆಗಳನ್ನು
ಸಚಿವರಿಂದ ರಾಜ್ಯ ಬಯಸುತ್ತದೆ.