Thursday, 19th September 2024

ವಿಮಾನ ಹಾರಾಡಿಸುವ ಮೊದಲು ಯೋಚಿಸಿ

ಕರೋನಾ ಹಾವಳಿ ತಹಬಂದಿಗೆ ಬರುವ ಮುನ್ನವೇ ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧವನ್ನು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ತೆರವು ಗೊಳಿಸಿ ಡಿ.15ರಿಂದ ಸಂಚಾರ ಮರು ಆರಂಭಿಸುವುದಾಗಿ ಆದೇಶ ಹೊರಡಿಸಿರುವುದು ದೇಶವಾಸಿಗಳನ್ನು ಚಿಂತೆಗೀಡು ಮಾಡಿದೆ.

ಯಾರೋ ಮಾಡುವ ತಪ್ಪಿಗೆ, ಯಾವುದೋ ದೇಶದ ಮೂಲೆಯಲ್ಲಿರಬಹುದಾದ ಮಹಾಮಾರಿಯನ್ನು ನಮ್ಮ ಮೇಲೆ ತಂದೆಸೆಯುವುದು ನ್ಯಾಯವೇ? ಇಷ್ಟು ದಿನ ಅನುಭವಿಸಿದ ನೋವು, ಸಂಕಟ ಸಾಲದೆ? ಕಳೆದ ಎರಡು ಅವಧಿಯಲ್ಲಿ ಸೋಂಕು ಹರಡಲು ಕಾರಣವೇ ದೇಶ-ವಿದೇಶಗಳ ವಿಮಾನಗಳ ಪ್ರಯಾಣಿಕರು ಎಂಬುದನ್ನು ಮರೆಯುವ ಹಾಗಿಲ್ಲ. ಪರಿಣಾಮ ದೇಶವಿಡಿ ಸಾಂಕ್ರಮಿಕ ಆವರಿಸಿ ಜನಜೀವನವನ್ನೆ ಹಾಳು ಮಾಡಿ, ಉದ್ಯೋಗ, ಆರೋಗ್ಯ, ಜೀವಹಾನಿ, ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು. ಲಾಕ್‌ಡೌನಿನಂತಹ ವಿಷಮ ಪರಿಸ್ಥಿತಿಗೆ ದೂಡಿದ್ದನ್ನು ಮರೆಯಲು ಸಾಧ್ಯವೇ? ಇಂತಹದೊಂದು ವಿಷಮ ಘಳಿಗೆಯಿಂದ ಹೊರಬಂದು, ಹೊಸ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಇನ್ನೂ ಹೆಣಗಾಡುತ್ತಿರುವಾಗಲೇ ದೇಶವಾಸಿಗಳ ಜೀವನದ ಜತೆಗೆ ಚೆಟವಾಡುವ ಪ್ರಯೋಗ ಸಲ್ಲದು.

ವಿಮಾನ ಸಂಚಾರ ಆರಂಭ ಹುಂಬತನವೆನಿಸುತ್ತದೆ. ಅಷ್ಟಕ್ಕೂ ಕೊರೊನಾ ಲಸಿಕೆ ಹಾಕಲು ಆರಂಭಿಸಿ ಆರು ತಿಂಗಳಷ್ಟೇ ಕಳೆದಿವೆ. ಹೆಚ್ಚಿನ ಆದಾಯದ ದೇಶಗಳು ವಿಶ್ವದ ಸುಮಾರು ಶೇ.44ನಷ್ಟು ಡೋಸ್‌ಗಳನ್ನು ಮಾತ್ರ ತಮ್ಮ ಜನರಿಗೆ ನೀಡಿವೆ. ಕಡಿಮೆ ಆದಾಯದ ದೇಶಗಳು ಕೇವಲ ಶೇ.0.4ನಷ್ಟು ಲಸಿಕೆ ನೀಡಿವೆ. ಈ ಪರಿಸ್ಥಿತಿಯಲ್ಲಿ ಕೆಲವು ತಿಂಗಳುಗಳಿಂದ ಯಾವುದೇ ಬದಲಾವಣೆಯಾಗಿಲ್ಲ ಎಂಬುದೇ ಆತಂಕಕಾರಿ ವಿಷಯ. ಇಂಥ ಸನ್ನಿವೇಶದಲ್ಲಿ ಅಂತಾ ರಾಷ್ಟ್ರೀಯ ವಿಮಾನ ಯಾನ ಪುನಾರಂಭ ಎಷ್ಟು ವಿಹಿತ? ದೇಶವಾಸಿಗಳ ಜೀವನಾಡಿ ಅರಿತು ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಆಡಳಿತ ವರ್ಗವು
ಸೂಕ್ಷ್ಮತೆಯಿಂದ ಯೋಚಿಸಬೇಕು. ಹೊಸರೂಪಾಂತರ ತಳಿ ಒಮೈಕ್ರಾನ್ ಅಪಾಯಕಾರಿ ವೈರಾಣು ಎಂಬುದನ್ನು ತಜ್ಞರೇ ಒಪ್ಪಿಕೊಂಡಿದ್ದಾರೆ. ಈ ಹಂತದಲ್ಲಿ ಯಾವುದೇ ನಿರ್ಬಂಧ ಸಡಿಲಿಕೆ ಮತ್ತೆ ಅಪಾಯಕ್ಕೆ ಆಹ್ವಾನವಿತ್ತಂತೆಯೇ ಸರಿ. ಹೀಗಾಗಿ, ಸರಕಾರವು ಎಚ್ಚರಿಕೆಯ ನಿರ್ಧಾರಗಳನ್ನು ತೆಗೆದುಕೊಂಡು. ದೇಶವಾಸಿಗಳ ರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ.