Friday, 20th September 2024

ಹಬ್ಬದ ಗುಂಗಲ್ಲಿ ಕರೋನಾ ಮರೆಯದಿರೋಣ

ದೇಶಾದ್ಯಂತ ಈಗ ಸಾಲು ಸಾಲಾಗಿ ಹಬ್ಬಗಳ ಸಂಭ್ರಮ. ಈ ಸಂಭ್ರಮದ ಗುಂಗಲ್ಲಿರುವ ಜನತೆ ಕರೋನಾವನ್ನು ನಿರ್ಲಕ್ಷ್ಯ ಮಾಡುವ ಸಾಧ್ಯತೆ ಬಹಳಷ್ಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೂಡ ಕರೋನಾ ನಿರ್ವಹಣೆಗೆ ಸಂಬಂಧಿಸಿ, ಸದ್ಯಕ್ಕೆ ಅನುಷ್ಠಾನದಲ್ಲಿರುವ ಮಾರ್ಗಸೂಚಿಯನ್ನು ಸೆ.30ರವರೆಗೆ ವಿಸ್ತರಿಸಿದೆ.

ಆದರೆ ಈ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿರುವ ಜವಾಬ್ದಾರಿ ಸ್ಥಳೀಯ ಸರಕಾರಗಳ ಮೇಲಿದೆ. ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಸ್ಥಳೀಯವಾಗಿ ಹೆಚ್ಚುತ್ತಿವೆ. ಕೆಲವು ಜಿಗಳಲ್ಲಿ ಸಕ್ರಿಯ ಪ್ರಕರಣ ಹಾಗೂ ದೃಢಪಡುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳವು ಆತಂಕಕಾರಿಯಾಗಿದೆ. ಹಬ್ಬದ ಸಂದರ್ಭದಲ್ಲಿ ಅದರಲ್ಲೂ ಮಾರುಕಟ್ಟೆ ಪ್ರದೇಶದಲ್ಲಿ ಜನರು ಹೆಚ್ಚಿನ ಸಂಖ್ಯೆ ಯಲ್ಲಿ ಸೇರುವುದು ಸಹಜ.

ಆದ್ದರಿಂದ, ಸ್ಥಳೀಯ ಸರಕಾರಗಳು ಜನರು ಈ ರೀತಿ ಒಂದೇ ಕಡೆ ಸೇರುವುದನ್ನು ತಪ್ಪಿಸಲು ಸಮರ್ಪಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರೊಂದಿಗೆ ಕೋವಿಡ್ ಪರೀಕ್ಷೆ, ಪತ್ತೆ, ಚಿಕಿತ್ಸೆ, ಲಸಿಕೆ ತೆಗೆದುಕೊಳ್ಳುವುದು ಹಾಗೂ ಕೋವಿಡ್-19 ಮಾರ್ಗಸೂಚಿಯ ಕಟ್ಟುನಿಟ್ಟಿನ ಪಾಲನೆಯನ್ನು ಮುಂದುವರಿಸ ಬೇಕಿದೆ. ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲನೆ ಹಾಗೂ ತಪ್ಪಿದವರಿಗೆ ದಂಡ ವಿಧಿಸಿದ ಪ್ರಕರಣಗಳು ಸೇರಿದಂತೆ ಮಾರ್ಗಸೂಚಿ ಪಾಲನೆಗೆ ಸಂಬಂಧಿಸಿ ನಿಯಮಗಳು ಇನ್ನಷ್ಟು ಕಠಿಣವಾಗಬೇಕಿದೆ.

ಕೋವಿಡ್ ಶೂನ್ಯ ಪ್ರಕರಣ ಅಥವಾ ಕಡಿಮೆ ಪ್ರಕರಣಗಳಿರುವ ಪ್ರದೇಶದಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳುವುದು ಅತೀ ಅಗತ್ಯ. ಜನರು ಕೂಡ ದಂಡ ಗಳಿಗೆ ಹೆದರಿ ಕರೋನಾ ಮಾರ್ಗಸೂಚಿಗಳನ್ನು ಪಾಲಿಸುವ ಬದಲು ದೇಶದಿಂದ ಸಾಂಕ್ರಾಮಿಕ ರೋಗವನ್ನು ಅಟ್ಟುವಲ್ಲಿ ನಮ್ಮ ಪಾತ್ರವೂ ಮುಖ್ಯ ಎಂಬುದನ್ನು ಅರಿತು ಮಾರ್ಗಸೂಚಿಗಳನ್ನು ಪಾಲಿಸಬೇಕು. ಇದೊಂದು ವರ್ಷ ಹಬ್ಬವನ್ನು ಸಂಭ್ರಮದಿಂದ ಆಚರಿಸದಿದ್ದರೆ ಆರೋಗ್ಯ ಸಮಾಜ ನಿರ್ಮಾಣಕ್ಕೆ ನಾವು ಕೊಟ್ಟ ಕೊಡುಗೆ ಎಂದು ಭಾವಿಸಬೇಕಿದೆ. ಇಲ್ಲವಾದಲ್ಲಿ ಕರೋನಾ ಎರಡನೇ ಅಲೆಯಲ್ಲಿ ಎದುರಿಸಿದ ಕಷ್ಟಗಳನ್ನೇ ಮತ್ತೆ ಎದುರಿಸಬೇಕಾದೀತು.