Saturday, 14th December 2024

ಕೋವ್ಯಾಕ್ಸಿನ್ ಲಸಿಕೆಯಿಂದ ಅಡ್ಡಪರಿಣಾಮ: ಯಾರು ಹೊಣೆ?

ಭಾರತ್ ಬಯೊಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಕೋವಿಡ್ ತಡೆ ಲಸಿಕೆ ತೆಗೆದುಕೊಂಡ ಮೂರನೇ ಒಂದರಷ್ಟು ಜನರಲ್ಲಿ ವರ್ಷದ ಬಳಿಕ ಅಡ್ಡಪರಿಣಾಮಗಳು ಕಂಡುಬಂದಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನದಲ್ಲಿ ಬಹಿರಂಗಗೊಂಡಿದೆ. ಈ ಲಸಿಕೆ ಪಡೆದ ಶೇ.೩೦ರಷ್ಟು ಜನರಲ್ಲಿ ವರ್ಷದ ಬಳಿಕ ಪಾರ್ಶ್ವವಾಯು, ನರ ಸಂಬಂಧಿತ ಅಸ್ವಸ್ಥತೆ ಮತ್ತು ಉಸಿರಾಟ ನಾಳ ಸಮಸ್ಯೆ ಸೇರಿದಂತೆ ಹಲವು ಅಡ್ಡ ಪರಿಣಾಮಗಳು ಕಂಡುಬಂದಿವೆ ಎಂದು ಅಧ್ಯಯನದ ವರದಿ ಹೇಳಿದೆ.

ಕೋವ್ಯಾಕ್ಸಿನ್ ಲಸಿಕೆಗೆ ಭಾರತ ಅತ್ಯಂತ ಅವಸರವಸರವಾಗಿ ಅನುಮತಿ ನೀಡಿದೆ ಎಂದು ಹಲವು ತಜ್ಞರು ಆಗಲೇ ಹೇಳಿದ್ದರು. ಆದರೂ ಕೇಂದ್ರ ಸರಕಾರವು ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯುವ ಮೊದಲೇ ಅದಕ್ಕೆ ಸರಕಾರ ಅನುಮತಿ ನೀಡಿತ್ತು. ಮೊದಲನೇ ಹಂತ ಮತ್ತು ಎರಡನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಯಾವ ರೀತಿಯ ಫಲಿತಾಂಶ ಲಭ್ಯವಾಗಿದೆ ಎನ್ನುವ ವಿವರವನ್ನೂ ಸರಕಾರ ಮುಚ್ಚಿಟ್ಟು ಕೋವ್ಯಾಕ್ಸಿನನ್ನು ಮಾರುಕಟ್ಟೆಗೆ ಇಳಿಸಿತ್ತು. ಅದಕ್ಕಾಗಿ ಸುಮಾರು ಒಂದು ಲಕ್ಷ ಕೋಟಿ ರುಪಾಯಿಯನ್ನೂ ಸುರಿಯಲಾಗಿತ್ತು.

ವಿಪರ್ಯಾಸವೆಂದರೆ ಲಸಿಕೆ ಹಾಕಿರುವ ಪ್ರಮಾಣಪತ್ರವನ್ನೂ ಕಡ್ಡಾಯಗೊಳಿಸಲಾಯಿತು. ಕೋಟ್ಯಂತರ ಜನರು ಪ್ರಮಾಣ ಪತ್ರಕ್ಕಾಗಿ ಲಸಿಕೆ
ಯನ್ನು ಪಡೆದರೇ ಹೊರತು, ಲಸಿಕೆಯ ಮೇಲೆ ವಿಶ್ವಾಸದಿಂದಲ್ಲ. ಲಸಿಕೆ ಬೇಡ, ನಮಗೆ ಪ್ರಮಾಣ ಪತ್ರ ಬೇಕು ಎನ್ನುವವರ ಸಂಖ್ಯೆಯೇ ದೊಡ್ಡದಿತ್ತು. ನಕಲಿ ಪ್ರಮಾಣ ಪತ್ರ ಮಾರಾಟದ ಭಾರೀ ಕಾಳದಂಧೆಗೆ ಇದು ಕಾರಣವಾಯಿತು. ಆತುರಾತುರವಾಗಿ ಲಸಿಕೆಗಳನ್ನು ಪ್ರಯೋಗಿಸುವುದು ಭಾರತದಂತಹ ದೇಶಕ್ಕೆ ಒಳ್ಳೆಯದಲ್ಲ ಎನ್ನುವುದನ್ನು  ವೈದ್ಯಕೀಯ ತಜ್ಞರು ಹೇಳುತ್ತಲೇ ಬಂದಿzರೆ. ಇಂತಹ ಆತುರದ ನಿರ್ಧಾರಗಳಿಗೆ ಭಾರತ ಈಗಾಗಲೇ ಸಾಕಷ್ಟು ಬೆಲೆ ತೆತ್ತಿದೆ. ಕೋವಿಡ್ ಲಸಿಕೆ ಮಾನವ ಇತಿಹಾಸದ ಅತ್ಯಂತ ಕಡಿಮೆ ಅವಧಿಯಲ್ಲಿ, ಶೀಘ್ರವಾಗಿ ಸಿದ್ಧಗೊಂಡ ಲಸಿಕೆಯಾಗಿದೆ. ಆದರೆ ಇದೀಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಅಧ್ಯಯನಕ್ಕೆ ಬಳಸಿರುವ ವಿಧಾನವು ಕಳಪೆಯಾಗಿದೆ ಎಂದು ವಾದ
ಮಾಡುತ್ತಿದೆ. ಹಾಗಾದರೆ ಆಗಿರುವ ತಪ್ಪಿಗೆ ಹೊಣೆಗಾರರು ಯಾರು?