Sunday, 8th September 2024

ಕರೋನಾ ನಿರ್ಬಂಧ ಪಾಲನೆ ಎಷ್ಟರಮಟ್ಟಿಗೆ ಆದೀತು?

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ರಾಜ್ಯಾದ್ಯಂತ ಹೊಸ ವರ್ಷಾಚರಣೆಗೆ ಸರಕಾರವು ಕೆಲವು ನಿರ್ಬಂಧಗಳನ್ನು ಹೇರಿದೆ. ಬಾರ್, ರೆಸ್ಟೋರೆಂಟ್ ಮತ್ತಿತರ ಸ್ಥಳಗಳಲ್ಲಿ ಒಟ್ಟು ಸಾಮರ್ಥ್ಯದ ಶೇ.೫೦ರಷ್ಟು ಮಂದಿಗೆ ಮಾತ್ರ ಪ್ರವೇಶ ನೀಡಬೇಕು ಎಂದು ಸರಕಾರ ಸೂಚಿಸಿದೆ.

ಆದರೆ ಜನರು ಇದನ್ನು ಎಷ್ಟರಮಟ್ಟಿಗೆ ಪಾಲಿಸುತ್ತಾರೆ ಎಂಬುದೇ ಪ್ರಶ್ನೆ. ಬಾರ್, ರೆಸ್ಟೋರೆಂಟ್‌ಗಳನ್ನು ತಲೆ ಏಣಿಕೆ ಮಾಡಿ ಶೇ.೫೦ ಜನರು ಇದ್ದಾರೆಯೇ ಎಂದು ಲೆಕ್ಕ ಹಾಕುವುದು ಅಸಾಧ್ಯ. ಸಂಪೂರ್ಣ ಲಾಕ್‌ಡೌನ್ ಹೇರಿದಾಗಲೂ ಮನೆಯಲ್ಲಿ ಕುಳಿತುಕೊಳ್ಳಲಾಗದ ಜನರು ಬೀದಿಗೆ ಬಂದು ಪೊಲೀಸರ ಲಾಠಿ ಏಟಿನ
ರುಚಿ ಕಂಡಿದ್ದನ್ನು ನೋಡಿದ್ದೇವೆ. ಇನ್ನು ಹೀಗೆ ಅರ್ಧಂಬರ್ಧ ಲಾಕ್‌ಡೌನ್ ಹೇರಿದರೆ ಪಾಲಿಸುತ್ತಾರೆಯೇ ಎಂಬುದು ಪ್ರಶ್ನೆ. ಹಾಗಂತ ಸರಕಾರವೇ ಎಲ್ಲದಕ್ಕೂ ರೀತಿ ರಿವಾಜುಗಳನ್ನು ಮಾಡಲು ಆಗುವುದಿಲ್ಲ. ಮಾಡಿದರೂ ಜನರು ಅವುಗಳನ್ನು ಒಪ್ಪುವ ಮನಸ್ಥಿತಿಯಲ್ಲಿಲ್ಲ.

ಹೀಗಾಗಿ ಸಾರ್ವಜನಿಕರೇ ಸ್ವಯಂಪ್ರೇರಿತವಾಗಿ ಕರೋನಾ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಅಲ್ಲದೆ, ಬಹುತೇಕರು ಮಾಸ್ಕ್ ಬಳಕೆಯನ್ನು ಸಂಪೂರ್ಣ ವಾಗಿ ನಿಲ್ಲಿಸಿದ್ದಾರೆ. ಕೆಲವರು ಧರಿಸಿದರೂ ದಂಡದ ಭಯಕ್ಕೆ ಬಾಯಿಗೆ ಹಾಕಿಕೊಂಡಿರುತ್ತಾರೆ. ಈಗಾಗಲೇ ಒಮೈಕ್ರಾನ್‌ನಿಂದ ಅಮೆರಿಕ ಸೇರಿದಂತೆ ಶ್ರೀಮಂತ ರಾಷ್ಟ್ರಗಳೇ ತತ್ತರಿಸುತ್ತಿವೆ. ಭಾರತಕ್ಕೂ ಒಮೈಕ್ರಾನ್ ಕಾಲಿಟ್ಟು, ಈಗಾಗಲೇ ಒಂದು ಜೀವ ಬಲಿ ಪಡೆದಿದೆ. ಇಂಥ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಸ್ವಯಂಪ್ರಜ್ಞೆ ಮೆರೆದು ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಕರೋನಾ ತೊಲಗಿಸಲು ಮನಸ್ಸು ಮಾಡಬೇಕಿದೆ.

ಪ್ರತಿಯೊಬ್ಬರೂ ತಮ್ಮ ಮತ್ತು ತಮ್ಮವರ ಜೀವ ಕಾಪಾಡಲು ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸರ್ ಬಳಕೆ ಮಾಡಬೇಕಿದೆ. ಕ್ರಿಸ್‌ಮಸ್ ಸಂದರ್ಭದಲ್ಲೂ ಜನಜಂಗುಳಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದರೆ ಸರಕಾರವು ಕ್ರಿಸ್‌ಮಸ್ ಆಚರಣೆಗೆ ಯಾವುದೇ ನಿರ್ಬಂಧ ಹೇರಿಲ್ಲ. ಕ್ರೈಸ್ತ್ ಬಾಂಧವರು ಅದನ್ನೇ ದುರುಪಯೋಗಪಡಿಸಿಕೊಂಡು ಜನಜಂಗುಳಿಗೆ ಅವಕಾಶ ಮಾಡಿಕೊಡ ಬಾರದು. ಈ ವರ್ಷ ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚಣೆಯನ್ನು ಆಚರಿಸಿಲ್ಲ ವಾದರೆ ಮುಂದಿನ ವರ್ಷ ಆಚರಿಸಬಹುದು ಎಂಬ ಭಾವನೆ ಎಲ್ಲರಲ್ಲೂ ಇರಲಿ. ಇಲ್ಲವಾದಲ್ಲಿ ಕರೋನಾ ಎರಡನೇ ಅಲೆಯಲ್ಲಿ ಅನುಭವಿಸಿದ್ದ ಕಹಿ ಘಟನೆಗಳು ಮತ್ತೇ ಮರುಕಳಿಸಬಹುದು.

error: Content is protected !!