Thursday, 19th September 2024

ಪ್ರತಿಭಟನೆ ಹೆಸರಲ್ಲಿ ಪ್ರಶಸ್ತಿಗಳಿಗೆ ಅಗೌರವ

ಕೇಂದ್ರ ಸರಕಾರ ರೈತರ ಒಳಿತಿಗೆಂದು ಜಾರಿಗೊಳಿಸಿದ ನೂತನ ಕೃಷಿ ಮಸೂದೆ ಇದೀಗ ವಿವಾದಿತವಾಗಿದೆ. ರೈತರು ಇದನ್ನು ವಿರೋಧಿಸುತ್ತಿರುವ ಕಾರಣ ದೆಹಲಿಯಲ್ಲಿ ಪ್ರತಿಭಟನೆ ಮುಂದುವರಿದಿದೆ.

ಡಿ.8 ರಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ರೈತರ ಉಪಯೋಗಕ್ಕಾಗಿ ರೂಪಿಸಿದ ಮಸೂದೆ ಒಂದು ವರ್ಗದ ರೈತರಿಗೆ ಇಷ್ಟ ವಾಗದಿರಬಹುದು. ಇದನ್ನು ಪ್ರತಿಭಟಿಸುವುದು, ಬದಲಾವಣೆಗಾಗಿ ಒತ್ತಾಯಿಸುವುದು ಸರಿಯಾದ ಮಾರ್ಗ. ಆದರೆ ಒಂದು ಪ್ರತಿಭಟನೆಗೆ ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳು ಬೆಂಬಲಸೂಚಿಸುವುದು ತನ್ನ ಎದುರಾಳಿ ಪಕ್ಷವನ್ನು ಪರೋಕ್ಷವಾಗಿ ರೈತರ ಮೂಲಕ ವಿರೋಧಿಸುವ ಬೆಳವಣಿಗೆಯಾಗಿ ಗೋಚರಿಸುತ್ತದೆ.

ಪ್ರತಿಭಟನೆಗಳು ವಸ್ತುನಿಷ್ಠವಾಗಿರಬೇಕೆಂದರೆ ರಾಜಕೀಯ ಪಕ್ಷಗಳಿಂದ ಮುಕ್ತವಾಗಿರುವುದರ ಜತೆಗೆ ಸಂಪೂರ್ಣವಾಗಿ ರೈತರು ಮತ್ತು ಜನತೆಯ ಬೆಂಬಲ ಹೊಂದಿರಬೇಕು. ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಈ ಪ್ರತಿಭಟನೆ ಬೆಂಬಲಿಸುತ್ತಿರುವ ಪಂಜಾಬ್‌ನ ಹಲವು ಮಾಜಿ ಕ್ರೀಡಾಪಟುಗಳು ತಮಗೆ ದೊರೆತಿರುವ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿಗಳನ್ನು ವಾಪಸ್ ಸಲ್ಲಿಸು ವುದಾಗಿ ಘೋಷಿಸಿದ್ದಾರೆ. ಇದು ಪ್ರಶಸ್ತಿಗೆ ತೋರುವಂಥ ಅಗೌರವ.

ಸಾಧಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸರಕಾರ ಸಲ್ಲಿಸುವ ಅಭಿನಂದನೆಯೇ ಪ್ರಶಸ್ತಿ. ಈ ಪ್ರಶಸ್ತಿಗಳನ್ನು ಆಯಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯ ಗೌರವಾರ್ಥವಾಗಿ ನೀಡಲಾಗಿರುತ್ತದೆ. ಇದನ್ನು ಅನ್ಯಕಾರಣಗಳಿಗಾಗಿ ಹಿಂದಿರುಗಿಸುವುದೆಂದರೆ ತಾವು ಸೇವೆ ಸಲ್ಲಿಸಿದ ಕ್ಷೇತ್ರಕ್ಕೆ ಹಾಗೂ ಸರಕಾರಕ್ಕೆ ತೋರುವ ಅಗೌರವ. ಕ್ರೀಡಾಪಟುಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ
ಪಾಲ್ಗೊಂಡು ಹಕ್ಕೊತ್ತಾಯಿಸುವುದು ಸಮಂಜಸ ಕ್ರಮ. ಇದರ ಹೊರತಾಗಿ ಪಡೆದ ಪ್ರಶಸ್ತಿಗಳನ್ನು ವಾಪಸ್ ನೀಡುವುದಾಗಿ ಘೋಷಿಸುವುದು ಅವೈಜ್ಞಾನಿಕ ಕ್ರಮ.

ಇಂಥ ಬೆಳವಣಿಗೆಯಿಂದ ಪ್ರಶಸ್ತಿಗಳ ಮೇಲೆ ಅಗೌರವ ಭಾವನೆ ಮೂಡಲು ಕಾರಣವಾಗುತ್ತದೆ. ಸಾಧನೆಗೆ ಸರಕಾರ ಸಲ್ಲಿಸಿದ ಗೌರವವನ್ನು ಪಡೆದು, ನಂತರ ಅನ್ಯ ಕಾರಣಗಳಿಗಾಗಿ ವಾಪಸ್ ನೀಡುವುದಾಗಿ ಘೋಷಿಸುವುದು ಉತ್ತಮ ಮಾರ್ಗವೇ?