Wednesday, 11th December 2024

ತಾಪಂ, ಜಿಪಂ ಚುನಾವಣೆ ಇನ್ನು ವಿಳಂಬವಾಗದಿರಲಿ

ದೇಶದಲ್ಲಿ ಅಧಿಕಾರ ವಿಕೇಂದ್ರಿಕರಣಕ್ಕೆ ಶ್ರೀಕಾರ ಹಾಡಿದ ರಾಜ್ಯ ಕರ್ನಾಟಕ. ಇಂಥ ಅಭಿಮಾನಪೂರ್ವಕ ಹಿನ್ನೆಲೆಯ ರಾಜ್ಯದಲ್ಲಿ ಜಿಲ್ಲೆ, ತಾಲೂಕು ಪಂಚಾಯಿತಿ ಚುನಾವಣೆ ನಡೆಯದೇ ನಾಲ್ಕು ವರ್ಷ ಸಮೀಪಿಸುತ್ತಿದೆ. ಮಿನಿ ಸರಕಾರದಂತಿರುವ ಬಿಬಿಎಂಪಿ ಚುನಾವಣೆ ವಿಚಾರದಲ್ಲೂ ಇದೇ ರೀತಿಯ ವರಸೆ ತೋರಲಾಗು ತ್ತಿದೆ.

ರಾಜ್ಯದ ಜಿಲ್ಲೆ ಮತ್ತು ತಾಲೂಕು ಪಂಚಾಯಿತಿಗಳಿಗೆ ೨೦೨೧ರ ಚುನಾವಣೆ ನಡೆಯಬೇಕಿತ್ತು. ಆದರೆ, ಅಂದಿನ ಬಿಜೆಪಿ ಸರಕಾರ ಕ್ಷೇತ್ರ ಮರು ವಿಂಗಡಣೆ
ಸಂಬಂಧ ಸೀಮಾ ನಿರ್ಣಯ ಆಯೋಗ ರಚಿಸಿತು. ಈ ಆಯೋಗದ ಮೂಲಕ ಅಧ್ಯಯನ, ವರದಿ ಸಿದ್ಧತೆ ಪ್ರಕ್ರಿಯೆಯಲ್ಲೇ ಕಾಲ ತಳ್ಳಲಾಯಿತು. ಚುನಾವಣಾ ಆಯೋಗ ಆಕ್ಷೇಪಿಸಿದರೂ ಸರಕಾರ ಮಾತ್ರ ತನ್ನ ನಿಲುವಿಗೆ ಅಂಟಿಕೊಂಡಿತು. ನಂತರದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲು ಗುರುತಿಸುವ ಸಂಬಂಧ ಸಮಿತಿ ರಚಿಸಲಾಯಿತು.

ಸುಪ್ರಿಂಕೋರ್ಟ್ ಸೂಚನೆ ಅನುಸಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅನಿವಾರ್ಯವೂ ಆಗಿತ್ತು. ಅದರಂತೆ, ಅಸ್ತಿತ್ವಕ್ಕೆ ಬಂದಿದ್ದ ನ್ಯಾಯಮೂರ್ತಿ
ಭಕ್ತವತ್ಸಲ ಕಮಿಟಿ ವರದಿಯನ್ನೂ ನೀಡಿದೆ. ಆ ಬಳಿಕವೂ ಜಿಲ್ಲೆ, ತಾಲೂಕು ಪಂಚಾಯಿತಿ ಚುನಾವಣೆ ನಡೆಸುವ ದಿಶೆಯಲ್ಲಿ ರಾಜ್ಯ ಸರಕಾರ ಸಕಾರಾತ್ಮಕ
ಹೆಜ್ಜೆಯಿರಿಸಿಲ್ಲ. ಇದು ಸ್ಥಳೀಯಾಡಳಿತಗಳಿಗೆ ಶಕ್ತಿ ತುಂಬುವ ವಿಷಯದಲ್ಲಿ ಎಲ್ಲ ಸರಕಾರಗಳೂ ಪರಮ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಮುಖ್ಯವಾಗಿ ಜಿ, ತಾಲೂಕು ಪಂಚಾಯಿತಿ, ಮಹಾನಗರ ಪಾಲಿಕೆಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವುದು ಯಾವ ಪಕ್ಷದ ಶಾಸಕರು ಗಳಿಗೂ ಬೇಕಾಗಿಲ್ಲ.

ಜನರಿಂದ ಆಯ್ಕೆಯಾದ ಪ್ರತಿನಿಽಗಳು ಲೋಕಲ್ ಬಾಡಿಗಳಲ್ಲಿ ಇಲ್ಲದಿದ್ದರೆ ಇಂಥ ಸಂಸ್ಥೆಗಳಲ್ಲಿ ತಾವೇ ದರ್ಬಾರು ನಡೆಸಬಹುದು ಎನ್ನುವುದು ಶಾಸಕರ
ಯೋಚನೆ ಇದ್ದಂತಿದೆ. ಆದರೆ ಈ ಧೋರಣೆ ಅಽಕಾರ ವಿಕೇಂದ್ರಿಕರಣದ ಮೂಲ ಆಶಯಕ್ಕೆ ಧಕ್ಕೆ ತರುತ್ತದೆ ಎಂಬದನ್ನೂ ಗಣನೆಗೆ ತೆಗೆದುಕೊಳ್ಳಬೇಕು.
ಇದೀಗ ಕ್ಷೇತ್ರ ಪುನರ್ ವಿಂಗಡಣೆ, ಮೀಸಲು ನಿಗದಿ ಸಮಸ್ಯೆ ಮತ್ತಿತರ ನನೆಗುದಿಗೆ ಬಿದ್ದಿರುವ ಎಲ್ಲ ಸಮಸ್ಯೆಗಳೂ ಇತ್ಯರ್ಥವಾಗಿವೆ. ವಿಧಾನಸಭೆ,
ಲೋಕಸಭೆ ಚುನಾವಣೆ ಪ್ರಕ್ರಿಯೆಯೂ ಜೂನ್ ೪ಕ್ಕೆ ಮುಕ್ತಾಯವಾಗಲಿದೆ.

ಆದ್ದರಿಂದ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಬೇಕು.