Friday, 19th April 2024

ರೈತರ ಆತ್ಮಹತ್ಯೆ: ಶಾಶ್ವತ ಪರಿಹಾರ ಅಗತ್ಯ

ಕಳೆದ ಹತ್ತು ತಿಂಗಳಲ್ಲಿ ರಾಜ್ಯದಲ್ಲಿ ಆತ್ಯಹತ್ಯೆ ಪ್ರಕರಣ ಸೇರಿದಂತೆ ೧,೨೪೦ ರೈತರು ಮೃತಪಟ್ಟಿzರೆ. ೨೦೨೩ರ ಏಪ್ರಿಲ್‌ನಿಂದ ೨೦೨೪ರ ಜನವರಿ ಮಧ್ಯದ ಅವಧಿಯಲ್ಲೇ ೬೯೨ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಧಾನಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ರೈತರಿಗೆ ಸರಕಾರ ಕೃಷಿ ಸಾಲ ಸೌಲಭ್ಯ, ಸಬ್ಸಿಡಿ, ಕಡಿಮೆ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದರೂ ಆತ್ಮಹತ್ಯೆ ಪ್ರಕರಣಗಳು ಮಾತ್ರ ವರ್ಷದಿಂದ ವರ್ಷಕ್ಕೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇರುವುದು ಆತಂಕಕಾರಿ. ಇದಕ್ಕೆ ಮುಖ್ಯ ಕಾರಣ ಖಾಸಗಿ ಲೇವಾದೇವಿದಾರರಿಂದ ರೈತರು ಪಡೆಯುತ್ತಿರುವ ಸಾಲ ಮತ್ತು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಇರುವುದು. ಆತ್ಮಹತ್ಯೆಗೀಡಾಗಿರುವ ಬಹುತೇಕ ರೈತರು ಎರಡು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವವರೇ. ಇವರಿಗೆ ಬ್ಯಾಂಕ್‌ಗಳು ಸುಲಭವಾಗಿ ಸಾಲ ಕೊಡುವುದಿಲ್ಲ.

ಹೀಗಾಗಿ ಸಹಜವಾಗಿಯೇ ಗ್ರಾಮೀಣ ಪ್ರದೇಶಗಳಲ್ಲಿರುವ ಖಾಸಗಿ ಲೇವಾದೇವಿದಾರರಿಂದ ಹಣ ಪಡೆಯುತ್ತಾರೆ. ವರ್ಷಕ್ಕೊಮ್ಮೆ ಬೆಳೆಯಿಂದ ಬಂದ ಆದಾಯದಿಂದ ರೈತನ ಅವಶ್ಯಕತೆಗಳಾದ ಆಹಾರ, ಮಕ್ಕಳ ಶಿಕ್ಷಣ, ಆರೋಗ್ಯ ಇತ್ಯಾದಿಗಳಿಗೆ ಖರ್ಚು ಮಾಡಿದ ನಂತರ ಉಳಿಯುವ ಮೊತ್ತವು ಅತಿ ಯಾದ ಬಡ್ಡಿದರವನ್ನು ವಿಧಿಸುವ ಖಾಸಗಿ ಲೇವಾದೇವಿದಾರರ ಸಾಲದ ಬಾಧ್ಯತೆಗಳನ್ನು ಪೂರೈಸಲು ಸಾಕಾಗುವುದಿಲ್ಲ.

ಮಾನಕ್ಕೆ ಹೆದರಿ ಆತ್ಮಹತ್ಯೆಯೊಂದೇ ಅವರಿಗಿರುವ ದಾರಿಯಾಗಿದೆ. ಲೇವಾದೇವಿದಾರರು ನೋಂದಣಿ ಮಾಡಿಸಬೇಕು, ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿನ ಬಡ್ಡಿದರವನ್ನು ವಿಧಿಸಬಾರದು ಎಂಬ ಶಾಸನ ಜಾರಿಗೊಳಿಸಲಾಗಿದ್ದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ರೈತರ ಸಂಕಷ್ಟಕ್ಕೆ ಮತ್ತೊಂದು ಕಾರಣ ವೆಂದರೆ ಕುಗ್ಗುತ್ತಿರುವ ಲಾಭ. ಛಿದ್ರಗೊಂಡ ಭೂ ಹಿಡುವಳಿಯಿಂದಾಗಿ, ದೊಡ್ಡ ಪ್ರಮಾಣದ ಕೃಷಿಯ ಪ್ರಯೋಜನಗಳನ್ನು ಪಡೆಯಲಾಗುವುದಿಲ್ಲ. ಡೀಸೆಲ್, ಕೃಷಿ ಉಪಕರಣಗಳ ವೆಚ್ಚವು ಹೆಚ್ಚುತ್ತಿದ್ದು, ಬೆಳೆ ಬೆಳೆಯಲು ದುಬಾರಿ ಮೊತ್ತವನ್ನು ತೆತ್ತಬೇಕಾಗಿದೆ. ಆದರೆ ಅದರಿಂದ ಬರುವ ಲಾಭ ಮಾತ್ರ ಬಹಳ ಕಡಿಮೆ. ಇಂತಹ ಅನೇಕ ಸಮಸ್ಯೆಗಳಲ್ಲಿ ಸಿಲುಕಿರುವ ರೈತರನ್ನು ಅವುಗಳಿಂದ ಹೊರಗೆ ತರದಿದ್ದರೆ ಆತ್ಮಹತ್ಯೆಗಳ ಸರಣಿ ತಡೆಯಲು ಸಾಧ್ಯವಿಲ್ಲ.

Leave a Reply

Your email address will not be published. Required fields are marked *

error: Content is protected !!