Friday, 20th September 2024

ಕೇಂದ್ರದ ಆಶಯ ಅರ್ಥೈಸಿಕೊಳ್ಳದಿದ್ದರೆ ಅಪಾಯ

ಲಾಕ್‌ಡೌನ್ ತೆರವಿನಿಂದಾಗಿ ಇದೀಗ ಎಲ್ಲೆಡೆ ಜನಜಂಗುಳಿ ಕಂಡುಬರುತ್ತಿದೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು ಕಂಡುಬರುತ್ತಿದೆ. ಜತೆಗೆ ಜನತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಬೆಳವಣಿಗೆಯೂ ಕಂಡುಬಂದಿದೆ.

ಈ ಎಲ್ಲ ಬೆಳವಣಿಗೆಯನ್ನು ಗಮನಿಸಿರುವ ಕೇಂದ್ರ ಸರಕಾರ ತನ್ನ ಆಶಯವೊಂದನ್ನು ವ್ಯಕ್ತಪಡಿಸಿದೆ. ಈ ಆಶಯವನ್ನು ಅನುಸರಿಸದಿದ್ದರೆ ಮುಂದಿನ ದಿನಗಳಲ್ಲಿ ಬಹಳಷ್ಟು ಅಪಾಯವನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಕರೋನಾ ಎಂಬುದು ಸಂಪೂರ್ಣ ಮುಕ್ತವಾಗಿಲ್ಲ. ಆದ್ದರಿಂದ ಸುರಕ್ಷತೆಯ ಬಗ್ಗೆ ಜನತೆ
ನಿರ್ಲಕ್ಷ್ಯವಹಿಸಬಾರದು ಎಂಬುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆಶಯ.

ಜನರ ಆರ್ಥಿಕ ಸಂಕಷ್ಟ ನಿವಾರಣೆಗೆ ಅಡ್ಡಿಯಾಗುತ್ತಿದೆ ಎಂಬ ಆಶಯದ ಆಧಾರದಲ್ಲಿ ಲಾಕ್‌ಡೌನ್ ತೆರವುಗೊಳಿಸಲಾಗಿದೆ. ಲಾಕ್‌ಡೌನ್ ತೆರವಿನ ನಂತರ
ಜನರ ಓಡಾಟ ಹೆಚ್ಚಾಗಿದ್ದು, ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂಬುದು ಸರಕಾರಗಳ ಆತಂಕಕ್ಕೆ ಕಾರಣ. ಜನತೆ ಕರೋನಾ ತಡೆಗಾಗಿ ವಹಿಸು ತ್ತಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಲವು ಸುರಕ್ಷತಾ ನಿಯಮಗಳನ್ನು ಸೂಚಿಸಿದ್ದು, ಅನುಸರಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಕೋವಿಡ್ –19 ವೈರಸ್ ಹರಡುವಿಕೆಯ ನಂತರ ಅದರ ಹೊಸ ಹೊಸ ರೂಪಾಂತರಿ ಸೋಂಕುಗಳ ಹರಡುವಿಕೆಯೂ ಇಂದು ಆತಂಕ ಸೃಷ್ಟಿಸುತ್ತಿರುವ ಇಂದಿನ ದಿನಗಳಲ್ಲಿ ಸುರಕ್ಷತೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು.

ಅನಗತ್ಯವಾಗಿ ಓಡಾಟಕ್ಕೆ ಸಾಧ್ಯವಾದಷ್ಟು ಸ್ವಯಂ ನಿಯಂತ್ರಣವೇರಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯಗಳ ಸಲಹೆ, ಸೂಚನೆಗಳ ಹಿಂದಿರುವ ಆಶಯಗಳನ್ನು ಸರಿಯಾದ ರೀತಿ ಗಮನಿಸಬೇಕು. ಇಲ್ಲವಾದಲ್ಲಿ ಮತ್ತಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಆದ್ದರಿಂದ ಜನರ ಸುರಕ್ಷತೆ ಎಂಬುದು ಕೇವಲ ಸರಕಾರದ ಜವಾಬ್ದಾರಿಯಲ್ಲ. ನಮ್ಮ ಪಾತ್ರವೂ ಬಹುಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ.