Thursday, 19th September 2024

ಕಹಿ ಗಳಿಗೆಯಲ್ಲಿ ಸಿಹಿ ಸುದ್ದಿ

ನೂತನ ಕೃಷಿ ಕಾಯಿದೆ ವಿರೋಧಿಸಿ ರೈತರು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರಕಾರ
ವಿಶೇಷ ಪ್ಯಾಕೇಜ್‌ವೊಂದನ್ನು ಘೋಷಿಸಿದೆ.

ಈ ಪ್ಯಾಕೇಜ್‌ನಿಂದ 5 ಕೋಟಿ ಕಬ್ಬು ಬೆಳೆಗಾರರಿಗೆ ಲಾಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳೆಗಾರರಿಗೆ 3500 ಕೋಟಿ ರುಪಾಯಿ ಮೊತ್ತದ ಸಬ್ಸಿಡಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಇದು ಇಡೀ ದೇಶ ಕಬ್ಬು ಬೆಳೆಗಾರರ ಪಾಲಿಗೆ ಸಿಹಿ ಸುದ್ದಿಯಾಗಿದ್ದರೂ, ರಾಜ್ಯದ ಇಂದಿನ ಸ್ಥಿತಿಯನ್ನು ಗಮನಿಸಿದರೆ ಕಹಿ
ಗಳಿಗೆಯಲ್ಲಿ ಒದಗಿಬಂದಿರುವ ಸಿಹಿ ಸುದ್ದಿ ಎನ್ನಬಹುದು.

ರಾಜ್ಯದಲ್ಲಿನ ಕಬ್ಬು ಬೆಳೆಗಾರರಿಗೆ ನೀಡಬೇಕಿರುವ 600 ಕೋಟಿ ಸಬ್ಸಿಡಿ ಹಣ ಬಾಕಿ ಉಳಿದಿದೆ. ರಾಜ್ಯದಲ್ಲಿನ ಸರಕಾರಿ ಸ್ವಾಮ್ಯದ ಎರಡು ಸಕ್ಕರೆ ಕಾರ್ಖಾನೆಗಳಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಪೂರ್ಣ ಸ್ಥಗಿತಗೊಂಡಿದೆ. ಮಂಡ್ಯದ ಮೈ ಶುಗರ್ ಖಾಸಗೀ ಯವರ ಪಾಲಿಗೆ ಸೇರುವ ಪ್ರಯತ್ನದಲ್ಲಿದೆ. ಸರಕಾರಿ ಸ್ವಾಮ್ಯದ ಎರಡು ಸಕ್ಕರೆ ಕಾರ್ಖಾನೆಗಳ ಅವನತಿಯ ಪರಿಣಾಮ ಕಬ್ಬು ಬೆಳೆಗಾರರು ಎದುರಿಸುತ್ತಿದ್ದಾರೆ.

ಮೈಸೂರು ಸಕ್ಕರೆ ಕಾರ್ಖಾನೆಯ ಸ್ಥಗಿತದಿಂದ 36 ಸಾವಿರ ಎಕರೆಗೂ ಅಧಿಕ ಕಬ್ಬು ಬೆಳೆಯುತ್ತಿದ್ದ ಶಿವಮೊಗ್ಗ – ಚಿಕ್ಕಮಗಳೂರು ಜಿಲ್ಲೆಯ ಕಬ್ಬು ಬೆಳೆಗಾರರು ಇತರ ಬೆಳೆಯತ್ತ ಮುಖಮಾಡಿದ್ದಾರೆ. ಸರಕಾರಿ ಸ್ವಾಮ್ಯದ ಕಾರ್ಖಾನೆಗಳ ಅವನತಿಯಿಂದ ಖಾಸಗಿ ಕಾರ್ಖಾನೆಗಳು ಸಂಪೂರ್ಣ ಹಿಡಿತ ಸಾಧಿಸಿರುವ ಇಂದಿನ ದಿನಗಳಲ್ಲಿ ರೈತರು ಇತರ ಬೆಳೆಗಳತ್ತ ಆಕರ್ಷಿತರಾಗುತ್ತಿರುವ ಸ್ಥಿತಿಯೂ ಕಂಡುಬರುತ್ತಿದೆ.

ಕಬ್ಬು ಬೆಳೆಗಾರರ ಪಾಲಿಗೆ ಇದೊಂದು ಸಂಕಷ್ಟದ ಕಹಿ ಗಳಿಗೆಯಾಗಿರುವ ಇಂದಿನ ಸಂದರ್ಭದಲ್ಲಿ ಇದೀಗ ಘೋಷಣೆಯಾಗಿರುವ
ವಿಶೇಷ ಪ್ಯಾಕೇಜ್ ಸಿಹಿ ಸುದ್ದಿಯಾಗಿದೆ.