Thursday, 19th September 2024

ಕುಂಠಿತ ಯೋಜನೆಗೆ ದೊರೆಯುವುದೇ ವೇಗ

ಮಧ್ಯ ಕರ್ನಾಟಕದ ಜನತೆಯ ಪಾಲಿಗೆ ಬಹಳಷ್ಟು ನಿರೀಕ್ಷೆಗಳನ್ನು ಮೂಡಿಸಿದ ಮಹತ್ವದ ಯೋಜನೆಗೆ ಇನ್ನಾದರೂ ವೇಗ
ದೊರೆಯಬೇಕಿದೆ. ರಾಜ್ಯದ ಪ್ರಮುಖ ಯೋಜನೆಯೊಂದು ಎರಡು ದಶಕಗಳಿಂದಲೂ ಭರವಸೆ – ಸಮಸ್ಯೆ – ವಿರೋಧ – ಪ್ರತಿಭಟನೆಗಳನ್ನು ಕಾಣುತ್ತಲೇ ಸಾಗಿದೆ.

ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಸಚಿವ ಸಂಪುಟದಲ್ಲಿ ಆಡಳಿತ ಅನುಮೋದನೆ ದೊರೆತಿರುವು ದರಿಂದ ವೇಗ ದೊರೆಯಬಹುದೆಂಬ ನಿರೀಕ್ಷೆಗಳು ವ್ಯಕ್ತವಾಗಿವೆ. ನಾಡಿನ ಜನರ ಹಾಗೂ ರೈತರ ಪಾಲಿಗೆ ಬಹು ಮುಖ್ಯವಾಗಿರುವ ಈ ಯೋಜನೆಗೆ ವೇಗ ನೀಡಲು ರಾಜ್ಯ ಸರಕಾರ ಕೇಂದ್ರದ ಮೇಲೆ ತ್ತಡ ತಂದು ಈ ಯೋಜನೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಳ್ಳಲು ಆದ್ಯತೆ ನೀಡಬೇಕಿರುವ ಅನಿವಾರ್ಯತೆ ಸೃಷ್ಟಿಯಾಗಿದೆ.

2000ನೇ ಸಾಲಿನಲ್ಲಿ ಭರವಸೆಗಳನ್ನು ಮೂಡಿಸಿದ ಭದ್ರಾ ಮೇಲ್ದಂಡೆ ಯೋಜನೆ ಜಾರಿಯು ಆಡಳಿತಾತ್ಮಕ ಒಪ್ಪಿಗೆ ಪಡೆಯಲು ಮೂರು ವರ್ಷಗಳನ್ನು ತೆಗೆದುಕೊಂಡಿತು. 2015ರಲ್ಲಿ ಈ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಪಡೆಯಲು ರಾಜ್ಯ ಸರಕಾರ ಪ್ರಯತ್ನ ಆರಂಭಿಸಿತು. ಸತತ ಪ್ರಯತ್ನದ ಫಲವಾಗಿ ಕೇಂದ್ರ ಜಲಶಕ್ತಿ ಸಚಿವರು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಸಮ್ಮತಿ ಸೂಚಿಸಿದ್ದಾರೆ. ಇದರಿಂದ ಶೇ.60ರಷ್ಟು ಅನುದಾನವನ್ನು ಕೇಂದ್ರ ಸರಕಾರ ನೀಡಲಿದೆ.

ಉಳಿದ ಶೇ.40ರಷ್ಟು ಅನುದಾನ ಜಾರಿಗೆ ರಾಜ್ಯ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. 60:40ರಷ್ಟು ಅನುದಾನದ ಅನುಪಾತಕ್ಕೆ ಒಪ್ಪಿಗೆ ಪಡೆದಿರುವ ಈ ಯೋಜನೆ, ರಾಜ್ಯದ ಪ್ರಥಮ ರಾಷ್ಟ್ರೀಯ ಯೋಜನೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಆದರೆ ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ವಿಳಂಬದಿಂದ ಸಾಗುತ್ತಿರುವ ಯೋಜನೆಗೆ ವೇಗ ದೊರೆಯಬೇಕಿದೆ. ರೈತರಲ್ಲಿ ನಿರೀಕ್ಷೆ ಮೂಡಿಸಿದ ಯೋಜನೆಯೊಂದು ಎರಡು ದಶಕ ಕಳೆದರೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಾರದಿರುವುದು ವಿಪರ್ಯಾಸದ ಸಂಗತಿ.