Friday, 20th September 2024

ಸರಕಾರದ ನಿರ್ಧಾರದಿಂದ ಚಿತ್ರರಂಗಕ್ಕೆ ಉತ್ತೇಜನ

ಒಂದೆಡೆ ಡಿಜಿಟಲ್ ಪ್ಲಾಟಾರ್ಮ್‌ಗಳು ಹಾಗೂ ಮತ್ತೊಂದೆಡೆ ಲಾಕ್‌ಡೌನ್‌ನಿಂದಾಗಿ ಚಿತ್ರಮಂದಿರಗಳು ಅಳಿವಿನಂಚಿಗೆ ಸಾಗುತ್ತಿರುವ ಬೆಳವಣಿಗೆ ಕಂಡುಬರು ತ್ತಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳು ಈಗಾಗಲೇ ಬಾಗಿಲು ಮುಚ್ಚಿದ್ದು, ಮತ್ತಷ್ಟು ಚಿತ್ರಮಂದಿರಗಳು ಇದೇ ಪ್ರಯತ್ನದಲ್ಲಿದ್ದವು. ಆದರೆ ಇದೀಗ ರಾಜ್ಯ
ಸರಕಾರ ತೆಗೆದುಕೊಂಡಿರುವ ನಿರ್ಧಾರ ಚಿತ್ರಮಂದಿರಗಳ ಮಾಲೀಕರಿಗೆ ಒಂದು ಸಣ್ಣಮಟ್ಟದಲ್ಲಿ ಚೇತರಿಕೆಯ ಭರವಸೆ ಮೂಡಿಸಿರುವುದು ಉತ್ತಮ
ಬೆಳವಣಿಗೆ.

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಚಿತ್ರಮಂದಿರಗಳ ೨೦೨೧-೨೨ನೇ ಸಾಲಿನ ಆಸ್ತಿ ತೆರಿಗೆಯನ್ನು ಮನ್ನಾ ಮಾಡುವುದಾಗಿ ಸರಕಾರ ಘೋಷಿಸಿದೆ. ಪ್ರಸ್ತುತ ಸಂದರ್ಭದಲ್ಲಿ ಚಿತ್ರರಂಗಕ್ಕೆ ಶಕ್ತಿ ತುಂಬುವಲ್ಲಿ ಇದೊಂದು ಮಹತ್ವದ ಬೆಳವಣಿಗೆ. ಪರಭಾಷಾ ಹಾವಳಿಗಳ ನಡುವೆ ಕನ್ನಡ ಚಿತ್ರರಂಗ ಅಗಾಗ್ಗೆ
ಚಿತ್ರಮಂದಿರಗಳ ಸಮಸ್ಯೆ ಎದುರಿಸುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ಮತ್ತಷ್ಟು ಚಿತ್ರಮಂದಿರಗಳು ಮುಚ್ಚಿದರೆ, ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಹೊಸದೊಂದು ರೀತಿಯ ಸಮಸ್ಯೆಗೆ ಸಿಲುಕಲು ಕಾರಣವಾಗುತ್ತದೆ.

ಆದ್ದರಿಂದ ಚಿತ್ರರಂಗದ ಉಳಿವಿನ ಜತೆಗೆ ಚಿತ್ರಮಂದಿರಗಳ ಉಳಿವೂ ಅಗತ್ಯ. ಈ ಹಿನ್ನೆಲೆಯಲ್ಲಿ ಚಿತ್ರಮಂದಿರಗಳ ಉಳಿವಿಗೆ ನೆರವಾಗಲು ರಾಜ್ಯ ಸರಕಾರ ಒಂದು ವರ್ಷದ ಆಸ್ತಿ ತೆರಿಗೆ ಮನ್ನಾ ಘೋಷಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಮನ್ನಾ ಮಾಡಲಾಗಿದ್ದು, ರಾಜ್ಯದಲ್ಲಿಯೂ ಆಸ್ತಿ ತೆರಿಗೆ ಮನ್ನಾಕ್ಕೆ ಒತ್ತಾಯಿಸಿ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಽಕಾರಿಗಳು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿರುವ ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ, ರಾಜ್ಯದ ಚಿತ್ರಮಂದಿರಗಳ ಆಸ್ತಿ ತೆರಿಗೆ ಮನ್ನಾವನ್ನು ಘೋಷಿಸಿದ್ದಾರೆ. ಸರಕಾರದ ಈ ಸ್ಪಂದನೆ ಚಿತ್ರಮಂದಿರಗಳ ಉಳಿವಿಗೆ ಹಾಗೂ ಚಿತ್ರರಂಗದ ಬೆಳವಣಿಗೆಗೆ ನೀಡಿದ ಉತ್ತೇಜನವಾಗಿದೆ.