Sunday, 8th September 2024

ಕಲಾ ಕುಟುಂಬಕ್ಕೆ ಸಲ್ಲಿಸಿದ ಗೌರವ

ಮಾದಕ ವ್ಯಸನದ ಆರೋಪದಿಂದ ಸ್ಯಾಂಡಲ್ ವುಡ್ ವಿವಾದಕ್ಕೆ ಸಿಲುರುವ ಸಂದರ್ಭದಲ್ಲಿ ಚಿತ್ರರಂಗದ ಬಹಳಷ್ಟು ಮಹತ್ವದ ಬೆಳವಣಿಗೆಗಳು ಕಡೆಗಣನೆಯಾಗುತ್ತಿವೆ. ಇದಕ್ಕೆೆ ಡಾ.ವಿಷ್ಣುವರ್ಧನ್ ಸ್ಮಾರಕದ ಭೂಮಿಪೂಜೆಯೇ ಉದಾಹರಣೆ. ದಶಕಗಳಿಂದ ಭರವಸೆಯಾಗಿಯೇ ಉಳಿದಿದ್ದ ಡಾ.ವಿಷ್ಣು ಸ್ಮಾರಕದ ಭೂಮಿಪೂಜೆ ನೆರವೇರಿದೆ. ಆದರೆ ಇದೀಗ ಚಿತ್ರರಂಗದ ಇಂಥ ಮಹತ್ವದ ಘಟನೆಯನ್ನು ಮರೆಯಾಗುವಂತೆ ಮಾಡಿದೆ ಡ್ರಗ್ಸ್ ಪ್ರಕರಣ.

2009ರ ಡಿಸೆಂಬರ್ 30ರಂದು ಸಂಭವಿಸಿದ ಡಾ.ವಿಷ್ಣುವರ್ಧನ್ ಅವರ ನಿಧನ ಕನ್ನಡಚಿತ್ರರಂಗಕ್ಕೆ ದೊಡ್ಡ ಆಘಾತವನ್ನು ನೀಡಿತ್ತು. ನಂತರ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಸ್ಮಾರಕವನ್ನು ಮೈಸೂರಿನಲ್ಲಿ ಸ್ಥಾಪಿಸಬೇಕೆಂಬ ಅಪೇಕ್ಷೆ ಯನ್ನು ವ್ಯಕ್ತಪಡಿಸಿದ್ದರು. ದಶಕ ಕಳೆದರೂ ಇದುವರೆಗೆ ಕೇವಲ ಭರವಸೆಯಾಗಿಯೇ ಉಳಿದಿದ್ದ ಸ್ಮಾರಕ ಭವನ ನಿರ್ಮಾಣಕ್ಕೆ ಸೆ.15ರ ಮಂಗಳವಾರದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಆನ್‌ಲೈನ್ ಮೂಲಕ ಭೂಮಿ ಪೂಜೆ ನೆರವೇರಿಸಿದ್ದಾರೆ.

ಇದು ಡಾ.ವಿಷ್ಣುವರ್ಧನ್‌ನಂಥ ಪ್ರತಿಭೆ ಹಾಗೂ ಅವರ ಕಲಾ ಕುಟುಂಬಕ್ಕೆ ಸರಕಾರ ಸಲ್ಲಿಸುವ ಒಂದು ಗೌರವ. ಸೆ.18ರಂದು ನಡೆಯಲಿರುವ ಡಾ.ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬಕ್ಕೆ ಸಲ್ಲಿಸಿದ ಕೊಡುಗೆ. ಡಾ.ರಾಜ್‌ಕುಮಾರ್ ಅವರ ನಂತರದ ಪೀಳಿಗೆಯ ಮಹತ್ವ ನಟ ಡಾ.ವಿಷ್ಣುವರ್ಧನ್. ಸತತವಾಗಿ 38 ವರ್ಷಗಳ ಕಾಲ, ಸದಭಿರುಚಿಯ ಚಿತ್ರಗಳನ್ನು ನೀಡಿ ಅಭಿಮಾನಿಗಳ ಮನಸಿನಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ. ಇಂಥ ಕಲಾವಿದನಿಗೆ ಸ್ಮಾರಕ ನಿರ್ಮಾಣದ ಮೂಲಕ ಗೌರವ ಸಲ್ಲಿಸುತ್ತಿರುವ ಈ ವೇಳೆಯಲ್ಲಿ ಚಿತ್ರರಂಗ ಸಂಭ್ರಮಕ್ಕಿಂತಲೂ ಸಂದಿಗ್ಧ ಸ್ಥಿತಿಗೆ ಸಿಲುಕಿಕೊಂಡಿದೆ. ಆದರೂ ವಿಷ್ಣುವರ್ಧನ್ ಅಭಿಮಾನಿಗಳ ಪಾಲಿಗೆ ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು, ಸರಕಾರದ ಪಾತ್ರವೂ ಶ್ಲಾಘನೀಯ.

Leave a Reply

Your email address will not be published. Required fields are marked *

error: Content is protected !!