Sunday, 8th September 2024

ಮುಂದುವರಿದ ಕುತಂತ್ರ ಹೈಬ್ರಿಡ್ ವಾರ್

ಲಡಾಖ್‌ನಲ್ಲಿ ನಡೆದ ಭಾರತ – ಚೀನಾ ಸೈನಿಕರ ನಡುವಿನ ಸಂಘರ್ಷದಿಂದ ಎರಡೂ ದೇಶಗಳ ನಡುವೆ ಉಂಟಾದ ಉದ್ವಿಗ್ನತೆ, ಮಾತುಕತೆ ಮೂಲಕ ಬಗೆಹರಿದಂತೆ ಕಂಡುಬಂದರೂ ಚೀನಾದ ಕುತಂತ್ರ ನಡೆ ಮುಂದುವರಿದಿದೆ. ಎರಡು ದೇಶಗಳ ನಡುವಣ  ಸಂಬಂಧವನ್ನು ಸಹಜ ಸ್ಥಿತಿಗೆ ತರುವ ಉದ್ದೇಶದಿಂದ ಭಾರತದ ವಿದೇಶಾಂಗ ಸಚಿವ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಐದು ಅಂಶಗಳ ಸೂತ್ರಕ್ಕೆ ಪರಸ್ಪರ ಸಹಮತ ವ್ಯಕ್ತವಾಗಿರುವುದು ಆಶಾದಾಯಕ ಬೆಳವಣಿಗೆ ಎಂದು ಭಾವಿಸಲಾಗಿದೆ.

ಇದರ ಬೆನ್ನಲ್ಲೆ ಒಂದೆಡೆ ಶಾಂತಿಮಂತ್ರವನ್ನು ಅನುಸರಿಸುತ್ತಿರುವ ಚೀನಾ ಮತ್ತೊಂದೆಡೆ ಪರೋಕ್ಷವಾಗಿ ಭಾರತದ ಗಣ್ಯರ ಡೇಟಾ ಸಂಗ್ರಹಣೆಗೆ ಮುಂದಾಗಿ ಕುತಂತ್ರ ನೀತಿ ಅನುಸರಿಸುತ್ತಿರುವುದು ಬೆಳಕಿಗೆ ಬಂದಿದೆ. ಚೀನಾ ಮೂಲದ ಸಂಸ್ಥೆಯೊಂದು ಭಾರತದ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ 1,350ಕ್ಕೂ ಅಧಿಕ ರಾಜಕಾರಣಿಗಳು ಹಾಗೂ 350ಕ್ಕೂ ಅಧಿಕ ಸಂಸದರ ಆನ್‌ಲೈನ್ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಿರುವ ಮಾಹಿತಿ ಬೆಳಕಿಗೆಬಂದಿದೆ.

ಭಿನ್ನಮತ ಸಂಘರ್ಷಕ್ಕೆ ಕಾರಣವಾಗಬಾರದೆಂಬ ನಿಯಮವನ್ನು ಎರಡು ದೇಶಗಳು ಘೋಷಿಸಿದ್ದರೂ ಸಹ, ಚೀನಾ ಗಡಿ ಸಂಘರ್ಷದ ಮೂಲಕ ಉದ್ವಿಗ್ನತೆಯನ್ನು ಸೃಷ್ಟಿಸಿತ್ತು. ಶಾಂತಿ ಮಾತುಕತೆ ಮುಗಿಯುವುದರೊಳಗಾಗಿ ಚೀನಾದ ಮತ್ತೊಂದು ಕುತಂತ್ರ ಬೆಳಕಿಗೆ ಬಂದಿದೆ. ರಕ್ಷಣಾಪಡೆ, ರಾಜಕಾರಣಿಗಳು, ಪ್ರಖ್ಯಾತರು ಹಾಗೂ ಕುಖ್ಯಾತರು ಸೇರಿದಂತೆ ಎಲ್ಲ ವಲಯದವರ ಮೇಲೆ ಕಣ್ಣಿರಿಸಿರುವ ಚೀನಾ 150 ಮಿಲಿಯನ್ ಡೇಟಾಗಳನ್ನು ಪರಿಶೀಲಿಸುವ ಮೂಲಕ ಹೈಬ್ರಿಡ್ ವಾರ್ ನಡೆಸುತ್ತಿರುವ ಸಂಗತಿ ಬೆಳಕಿಗೆ ಬರುತ್ತಿದೆ.

ಇದೀಗ ಚೀನಾಕ್ಕೆ ಸೂಕ್ತ ಉತ್ತರ ನೀಡಲು ಸನ್ನದ್ಧರಾಗಬೇಕಾದ ಅವಶ್ಯಕತೆ ಉಂಟಾಗಿದೆ. ಗಡಿ ಸಂಘರ್ಷಕ್ಕೆ ಸೇನೆಯ ಮೂಲಕ ಉತ್ತರ ನೀಡುವಂತೆಯೇ ಡೇಟಾಗಳ ಕಳ್ಳತನ ತಡೆಗೆ ತಾಂತ್ರಿಕವಾಗಿಯೂ ತಕ್ಕ ಉತ್ತರ ನೀಡಲು ಸಜ್ಜಾಗಬೇಕಿರುವ ಅನಿವಾ ರ್ಯತೆ ಸೃಷ್ಟಿಯಾಗಿದೆ.

Leave a Reply

Your email address will not be published. Required fields are marked *

error: Content is protected !!