Sunday, 8th September 2024

ಸಾಂತ್ವನದ ಬದಲು ಸೂಚನೆ

ಪ್ರತಿ ಬಾರಿಯು ಪ್ರಧಾನಿ ಭಾಷಣದ ಬಗ್ಗೆ ಕುತೂಹಲ, ನಿರೀಕ್ಷೆಗಳು ವ್ಯಕ್ತವಾಗುತ್ತವೆ. ಅದಕ್ಕೆ ಅವರ ಮಾತಿನ ಶೈಲಿಯೂ ಕೂಡ
ಮಹತ್ವವಾದದ್ದೆ. ಕರೋನಾ ಸಂದರ್ಭದಲ್ಲಿ ಅವರ ಭಾಷಣಗಳು ಮತ್ತಷ್ಟು ಮಹತ್ವ ಪಡೆದಿವೆ.

ಇದೀಗ ಒಂದೆಡೆ ಸಾಲು ಸಾಲು ಹಬ್ಬಗಳು, ಮತ್ತೊಂದೆಡೆ ಇವುಗಳಿಗೆ ಅಡ್ಡಿಯಾಗಿರುವ ಕರೋನಾ ಸೋಂಕಿನ ಸಂಕಷ್ಟ. ಈ ಸಮಯದಲ್ಲಿ ಪ್ರಧಾನಿ ಮಾತು ಮತ್ತಷ್ಟು ಮಹತ್ವ ಪಡೆದಿತ್ತು. ಆದರೆ ಇದೀಗ ಪ್ರಧಾನಿಯವರು ವ್ಯಕ್ತಪಡಿಸಿರುವ ಮಾತುಗಳನ್ನು
ಗಮನಿಸಿದರೆ ಇದನ್ನು ಭರವಸೆ ಎಂದು ಭಾವಿಸಬೇಕೋ, ಅಥವಾ ಮತ್ತಷ್ಟು ಆತಂಕದ ಪರಿಸ್ಥಿತಿ ಎಂದು ಭಾವಿಸಬೇಕೋ ಎಂಬಂತಾಗಿದೆ.

ಇಡೀ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ದೇಶದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿರಬಹುದು, ಆದರೆ, ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಆದ್ದರಿಂದ ಹಬ್ಬದ ಸಂಭ್ರಮದಲ್ಲಿ ಕರೋನಾ ಸೋಂಕನ್ನು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪ್ರಧಾನಿ ಜನತೆಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆ, ಜನರಿಗೆ ಜವಾಬ್ದಾರಿಯ ಅರಿವು ಮೂಡಿಸುವ ಮಹತ್ವದ ಹೇಳಿಕೆ ಎಂಬುದು ನಿಜ. ಆದರೆ ಪ್ರಸ್ತುತ ಸಂದರ್ಭದಲ್ಲಿ ಜನರು ಪ್ರಧಾನಿಯವರಿಂದ ಜನತೆ ಬಯಸಿದ್ದ ಹೇಳಿಕೆ ಇದಲ್ಲ. ಲಸಿಕೆಯ ಕುರಿತು ಮಹತ್ವದ ಸುದ್ದಿ ನೀಡಬಹುದು, ಹಬ್ಬದ ಸಂಭ್ರಮಕ್ಕೆ ಲಸಿಕೆ ಕೊಡುಗೆಯಾಗ ಬಹುದು ಎಂಬುದಾಗಿ ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಮುನ್ನೆಚ್ಚರಿಕೆ ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಈಗ ಚಳಿಗಾಲ ಮತ್ತು ಸಾಲುಸಾಲು ಹಬ್ಬಗಳು ಬರುತ್ತಿರುವುದರಿಂದ, ಅದರ ಸಂಭ್ರಮದಲ್ಲಿ ಜನರು ಒಂದು ಕ್ಷಣ ಜವಾಬ್ದಾರಿತನ
ಮರೆದರೂ ಅದು ಭಾರಿ ಅಪಾಯಕ್ಕೆ ಕಾರಣವಾಗಬಹುದು ಎಂದು ಸಲಹೆ ನೀಡಿದ್ದಾರೆ. ಪಾಲನೆ ಜನರ ಕರ್ತವ್ಯ. ಆದರೆ ಜನರ ನಿರೀಕ್ಷೆ ಎಚ್ಚರಿಕೆಗಿಂತಲೂ ಸಂತ್ವಾನದ ನಿರೀಕ್ಷೆಯಾಗಿತ್ತು.

Leave a Reply

Your email address will not be published. Required fields are marked *

error: Content is protected !!