Sunday, 8th September 2024

ಜಲಯೋಜನೆಗಳ ಸಮರ್ಪಕ ಅನುಷ್ಠಾನ ಮುಖ್ಯ

ಪ್ರಧಾನಿ ಮೋದಿಯವರು ಇತ್ತೀಚೆಗೆ ಘೋಷಿಸಿದ ಮಹತ್ವದ ಯೋಜನೆಗಳ ಸಾಲಿಗೆ ಸಾಗರಮಾಲಾ ಯೋಜನೆಯೂ ಸೇರಿದೆ.
ಹಲವು ಜಲಯೋಜನೆಗಳಿಗೆ ಆದ್ಯತೆ ನೀಡಿದ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರವಾಗಿದ್ದಾರೆ.

ಇದೀಗ ಬಂದರು ಅಭಿವೃದ್ಧಿ ಜತೆಗೆ ಜಲಮಾರ್ಗ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಘೋಷಿಸಿರುವ ಮಹತ್ವದ ಯೋಜನೆಯೇ ಸಾಗರಮಾಲಾ ಯೋಜನೆ. 2015ರಿಂದ 2035ರ ಅವಧಿಯಲ್ಲಿ ಅನುಷ್ಠಾನಗೊಳಿಸಲು ಯೋಜಿಸಿರುವ ಈ ಯೋಜನೆಯಿಂದ 524ಕ್ಕೂ ಅಧಿಕ ಬಂದರುಗಳ ಅಭಿವೃದ್ಧಿಗೊಳ್ಳಲಿವೆ.

ಇದಕ್ಕಾಗಿ 6 ಲಕ್ಷ ಕೋಟಿ (82 ಬಿಲಿಯನ್) ವೆಚ್ಚಗೊಳಿಸಲಾಗುತ್ತಿದೆ. ದೇಶದ ಪಾಲಿಗೆ ಇದೊಂದು ಮಹತ್ವದ ಯೋಜನೆ ಸರಿ. ಆದರೆ ಬಂದರುಗಳ ಅಭಿವೃದ್ಧಿಯಷ್ಟೇ ಮುಖ್ಯವಾಗಿ ಪ್ರಸ್ತುತ ಕುಡಿಯುವ ನೀರಿನ ಅಗತ್ಯ ಪೂರೈಸುವಂಥ ಜಲಯೋಜನೆ ಗಳನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸುವುದು ಸಹ ಮುಖ್ಯ.

ನಮ್ಮ ದೇಶ ಬಹಳಷ್ಟು ನದಿಗಳನ್ನು ಒಳಗೊಂಡಿದ್ದರೂ ಜಲನಯನ ಪ್ರದೇಶಗಳ ನಿರ್ವಹಣೆಯಲ್ಲಿ ನಿರೀಕ್ಷಿತ ಪ್ರಮಾಣ ತಲುಪಲಾಗಿಲ್ಲಾ ಎಂಬ ಮಾತು ಇಂದಿಗೂ ಚಾಲ್ತಿಯಲ್ಲಿದೆ. ವಾರ್ಷಿಕ ಸರಾಸರಿ ನಾಲ್ಕು ಸಾವಿರ ಬಿಲಿಯನ್ ಘನ ಮೀಟರ್ ಮಳೆಯಾದರೂ ನೀರಿನ ಹಂಚಿಕೆಯಲ್ಲಿ ವ್ಯತ್ಯಾಸಗಳಿವೆ. ಇದಕ್ಕಿರುವ ಕಾರಣ, ಒಂದೊಂದು ಪ್ರದೇಶದ ಮಳೆಯ ಪ್ರಮಾಣ ದಲ್ಲಿನ ವ್ಯತ್ಯಾಸ. ಈ ಎರಡು ಕಾರಣಗಳಿಂದಾಗಿ ನದಿ ನೀರು ಹಾಗೂ ಮಳೆ ನೀರಿನ ಸಂಗ್ರಹ, ಶುದ್ಧೀಕರಣ ಹಾಗೂ ಸರಬುರಾಜು ನಿಟ್ಟಿನಲ್ಲಿ ಮತ್ತಷ್ಟು ಯೋಜನೆಗಳನ್ನು ರೂಪಿಸಬೇಕಾದ ಅಗತ್ಯವಿದೆ.

ಕೃಷಿ, ಕೈಗಾರಿಕೆಗಳ ಸ್ಥಾಪನೆ, ನಗರೀಕರಣ ಹೆಚ್ಚಾದಂತೆ ನೀರಿನ ಅಗತ್ಯತೆಯೂ ಹೆಚ್ಚುತ್ತಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಜಲಮಾಲಿನ್ಯ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಈ ವೇಳೆ ದೇಶಕ್ಕೆ ಜಲ ಯೋಜನೆಗಳ ಸಮರ್ಪಕ ಅನುಷ್ಠಾನ ಮುಖ್ಯ.

Leave a Reply

Your email address will not be published. Required fields are marked *

error: Content is protected !!