Sunday, 8th September 2024

ನ್ಯಾಯದಾನ ಚುರುಕಾಗಲಿ

ದೇಶದ ಕಾನೂನು ಸಂಹಿತೆಯಲ್ಲಿ ಹೊಸ ಬದಲಾವಣೆಗಳನ್ನು ತರಲಾಗಿದೆ. ಜುಲೈ ಒಂದರಿಂದ ಕೇಂದ್ರ ಸರಕಾರ ಹೊಸದಾಗಿ ಜಾರಿಗೊಳಿಸಿದ ಮೂರು ನ್ಯಾಯಸಂಹಿತೆಗಳು ಜಾರಿಗೆ ಬಂದಿವೆ. ಬ್ರಿಟಿಷರು ಜಾರಿಗೊಳಿಸಿದ ೧೮೬೦ರಷ್ಟು ಹಳೆಯದಾದ ಕಾನೂನುಗಳನ್ನು ಬದಿಗೊತ್ತಿ ಭಾರತೀಯ ತೆಯ
ಸ್ಪರ್ಶವುಳ್ಳ ಕಾನೂನುಗಳನ್ನು ಜಾರಿಗೊಳಿಸಿರುವುದು ಸ್ವಾಗತಾರ್ಹ.

ಹೊಸ ಕಾನೂನುಗಳು ಆರೋಪಿಗೆ ಶಿಕ್ಷೆ ವಿಽಸುವುದಕ್ಕಿಂತ ಸಂತ್ರಸ್ತನಿಗೆ ನ್ಯಾಯ ಒದಗಿಸಲು ಹೆಚ್ಚು ಒತ್ತು ನೀಡಲಿವೆ ಎಂದು ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ ಕಾನೂನು ಆಯುಧಗಳಷ್ಟೇ. ಪೊಲೀಸರಾಗಲಿ, ಅಧಿಕಾರಿಗಳಾಗಲಿ ನೆಲದ ಕಾಯಿದೆಯನ್ನು ಎತ್ತಿ ಹಿಡಿದು ಪರಿಣಾಮಕಾರಿಯಾಗಿ ಜಾರಿಗೆ ತರದೇಹೋದರೆ, ಯಾವುದೇ ಕಾನೂನಿಗೆ ಅರ್ಥವಿರುವುದಿಲ್ಲ. ಪ್ರಸ್ತುತ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಽನಿಯಮ ಇವು ಅನುಕ್ರಮವಾಗಿ ಬ್ರಿಟಿಷ್ ಯುಗದ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು ಬದಲಿಸಲಿದ್ದು, ಭಾರತದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ತರಲಿವೆ.

ಇನ್ನು ಮುಂದೆ ದೂರು ನೀಡಲು ಆಯಾ ವ್ಯಾಪ್ತಿಯ ಠಾಣೆಗಳನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಆನ್‌ಲೈನ್ ಮೂಲಕವೂ ದೂರು
ನೀಡಬಹುದು. ಇಮೇಲ್ ಮೂಲಕವೂ ಸಮನ್ಸ್ ಜಾರಿಗೊಳಿಸಬಹುದು. ಗಂಭೀರ ಅಪರಾಧ ಪ್ರಕರಣಗಳಲ್ಲಿ ಅಪರಾಧ ಸ್ಥಳಗಳ ವಿಡಿಯೊ ಚಿತ್ರೀಕರಣ ಕಡ್ಡಾಯವಾಗಲಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಮೊದಲ ವಿಚಾರಣೆ ನಡೆದ ೬೦ ದಿನಗಳೊಳಗೆ ದೋಷಾರೋಪ ಪಟ್ಟಿ ಸಲ್ಲಿಕೆ, ಕೋರ್ಟ್ ವಿಚಾರಣೆ
ಮುಗಿದ ೪೫ ದಿನಗಳೊಳಗೆ ತೀರ್ಪು ಪ್ರಕಟಣೆಯು ಕಡ್ಡಾಯವಾಗಲಿದೆ. ಇವೆಲ್ಲವೂ ನಿಧಾನ ನ್ಯಾಯಕ್ಕೆ ಹೆಸರಾದ ಭಾರತೀಯ ನ್ಯಾಯ ವ್ಯವಸ್ಥೆಯ ಸ್ವರೂಪವನ್ನು ಬದಲಿಸುವ ಗುರಿ ಹೊಂದಿರುವುದು ಸ್ಪಷ್ಟ. ಆದರೆ ಹೊಸ ಕಾನೂನುಗಳು ಜಾರಿಗೆ ಬಂದಾಗಲಷ್ಟೇ ಇದರ ಸಾಧಕ- ಬಾಧಕಗಳನ್ನು ತಿಳಿಯಲು ಸಾಧ್ಯ.

ರಾಜ್ಯ ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೊಸ ಕಾನೂನಿನ ಕೆಲವು ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಇವುಗಳಿಗೆ ತಿದ್ದುಪಡಿ ತರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದೇನೇ ಇರಲಿ, ದೇಶದ ಕಾನೂನಿಗೆ ಗೌರವ ಸಿಗಬೇಕಾದರೆ ಇವುಗಳ ಅನುಷ್ಠಾನ ತ್ವರಿತವಾಗಿರಬೇಕು. ವಿಳಂಬ
ನ್ಯಾಯ ನ್ಯಾಯದ ನಿರಾಕರಣೆ. ಈ ಪ್ರವೃತ್ತಿ ಇನ್ನಾದರೂ ನಿಲ್ಲಬೇಕು.

Leave a Reply

Your email address will not be published. Required fields are marked *

error: Content is protected !!