Thursday, 19th September 2024

ರಾಜ್ಯ ಪೊಲೀಸ್ ಇಲಾಖೆ ನಡೆ ಶ್ಲಾಘನೀಯ

ಲಾಕ್‌ಡೌನ್ ಪರಿಸ್ಥಿತಿ, ಅಪರಾಧ ಪ್ರಕರಣ ತಡೆ, ಸೈಬರ್ ಕ್ರೈಂ ವಂಚನೆಗಳನ್ನು ಏಕಕಾಲದಲ್ಲಿ ಹಾತೋಟಿಗೆ ತರುವಲ್ಲಿ ಕರ್ನಾಟಕ ಪೊಲೀಸರ ಸೇವಾ ಕಾರ್ಯ ಮೆಚ್ಚುಗೆಗೆ ಅರ್ಹವಾಗಿದೆ. ಕೊಲೆ ಪ್ರಕರಣಗಳಂಥ ಗಂಭೀರ ಪ್ರಕರಣಗಳ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಿರುವುದು, 50 ಕೋಟಿಗೂ ಅಽಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ನ್ಯಾಯಾಲಯದ ಆದೇಶದ ಮೇರೆಗೆ ನಾಶಪಡಿಸಿರುವುದು ಉತ್ತಮ ಬೆಳವಣಿಗೆ.

ಇಲಾಖೆಯೊಳಗಿನ ಭ್ರಷ್ಟಚಾರ ನಿರ್ಮೂಲನೆ ನಿಟ್ಟಿನಲ್ಲಿಯೂ ಪ್ರಯತ್ನಗಳು ಆರಂಭಗೊಂಡಿದೆ. ಭ್ರಷ್ಟಚಾರದ ಆರೋಪ ಕೇಳಿಬಂದರೆ ಕಟ್ಟುನಿಟ್ಟಿನ ಕ್ರಮ ಕೈ ಗೊಳ್ಳುವುದಾಗಿ ಸಿಬ್ಬಂದಿಗಳಿಗೆ ನಗರ ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ. ಇವುಗಳಿಗಿಂತಲೂ ಮುಖ್ಯವಾಗಿ ಪೊಲೀಸ್ ಇಲಾಖೆಯು ಕ್ರೈಂ ಪ್ರಕರಣಗಳ ತಡೆಗಾಗಿ ನಡೆಸಿರುವ ಚಿಂತನೆ ಉತ್ತಮ ಪ್ರಯತ್ನವಾಗಿದ್ದು, ಶೀಘ್ರ ಅನುಷ್ಠಾನ ಅಗತ್ಯವಾಗಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 900ಕ್ಕೂ ಅಧಿಕ ಪೊಲೀಸ್ ಠಾಣೆಗಳಲ್ಲಿ ಸಬ್‌ಇನ್ಸ್‌ಪೆಕ್ಟರ್ ಕಾನೂನು ಮತ್ತು ಸುವ್ಯವಸ್ಥೆ ಜತೆಗೆ ಹಲವು ಪ್ರಕರಣಗಳ ತನಿಖೆಯನ್ನೂ ನಡೆಸಬೇಕಿದೆ.

ಇದರಿಂದ ಪ್ರಕರಣಗಳ ಇತ್ಯರ್ಥದಲ್ಲಿ ವಿಳಂಬವಾಗುತ್ತದೆ. ಈ ಸಮಸ್ಯೆ ಬಗೆಹರಿಸಲು ಠಾಣೆಗೆ ಇಬ್ಬರು ಸಬ್ ಇನ್ಸ್‌ಪೆಕ್ಟರ್ ನೇಮಿಸುವ ಚಿಂತನೆಯನ್ನು ಪೊಲೀಸ್ ಇಲಾಖೆ ಪ್ರಕಟಿಸಿದೆ. 850 ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಸೃಷ್ಟಿಸಿ ಕ್ರೈಂ ರೇಟ್ ಹೆಚ್ಚಿರುವ ಠಾಣೆಗೆ ನಿಯೋಜನೆ ಮಾಡಲಾಗುವುದು. ಠಾಣೆಯಲ್ಲಿ ಇಬ್ಬರು ಪಿಎಸ್‌ಐ ಗಳಿರುವುದರಿಂದ ಜ್ಯೇಷ್ಠತೆ ಹೊಂದಿರುವ ಪಿಎಸ್‌ಐಗೆ ಕಾನೂನು ಮತ್ತು ಸುವ್ಯವಸ್ಥೆ ಜವಾಬ್ದಾರಿ, ಮತ್ತೊಬ್ಬರಿಗೆ ತನಿಖೆ ಜವಾಬ್ದಾರಿ ನೀಡುವುದರಿಂದ
ಕ್ರೈಂರೇಟ್ ತಗ್ಗಿಸಬಹುದು ಎಂಬುದು ಪೊಲೀಸ್ ಇಲಾಖೆ ಚಿಂತನೆ. ಈ ರೀತಿ ಹೊಸ ಹೊಸ ಪ್ರಯತ್ನಗಳ ಮೂಲಕ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಲು ಸಜ್ಜುಗೊಂಡಿರುವ ಪೊಲೀಸ್ ಇಲಾಖೆಯ ಕಾರ್ಯವೈಖರಿ ಶ್ಲಾಘನೀಯ ಸಂಗತಿ.