Thursday, 19th September 2024

ಭರವಸೆಯ ಸಭೆ

ಈಗಾಗಲೇ ರಷ್ಯಾ ಸ್ಪುಟ್ನಿಕ್ – ವಿ ಲಸಿಕೆ ವಿತರಣೆಗೆ ಮುಂದಾಗಿದ್ದು, ಸದ್ಯದಲ್ಲಿ ಈ ಲಸಿಕೆಯ ಒಟ್ಟು ಉತ್ಪಾದನೆಯ ಪ್ರಮಾಣ 2
ಮಿಲಿಯನ್‌ಗೆ ತಲುಪಲಿದೆ.

ಇದೇ ಮಾದರಿಯಲ್ಲಿ ಭಾರತದಲ್ಲಿ ವಿತರಿಸಲಾಗುವ ಲಸಿಕೆಯ ಅಧಿಕೃತ ಘೋಷಣೆ ಹಾಗೂ ಅದರ ನಿಖರತೆ ಬಗ್ಗೆ ಆದೇಶ ಸ್ಪಷ್ಟ ವಾಗಬೇಕಿದೆ. ಆದರೆ ವಿತರಣೆಗಾಗಿ ಹಲವು ಪ್ರಯತ್ನಗಳು ಮುಂದುವರಿದಿದ್ದು, ಇದೀಗ ಕೇಂದ್ರ ಸರಕಾರ ಮಹತ್ತರ ಸರ್ವ ಪಕ್ಷಸಭೆ ನಡೆಸಿದೆ. ಶುಕ್ರವಾರದಂದು ನಡೆಸಲಾದ ಈ ಸಭೆ ಭಾರತದ ರಾಜಕೀಯ ಇತಿಹಾಸದಲ್ಲಿನ ಮಹತ್ವದ ಸಭೆ. ಆಡಳಿತ ಪಕ್ಷ ಒಂದು ನಿರ್ಣಯವನ್ನು ಪ್ರಕಟಿಸುವಾಗ ವಿವಿಧ ಪಕ್ಷಗಳಿಂದ ಅಭಿಪ್ರಾಯ ಸಂಗ್ರಹಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಉತ್ತಮ ಬೆಳವಣಿಗೆ.

ಇಂತಹದೊಂದು ಬೆಳವಣಿಗೆಗೆ ಕಾರಣವಾಗಿರುವ ಕೇಂದ್ರ ಸರಕಾರ ಹಲವು ಪಕ್ಷಗಳಿಂದ ಅಭಿಪ್ರಾಯ ಸಂಗ್ರಹಿಸಿದೆ. ದೇಶದಲ್ಲಿ ಕರೋನಾ ಕಾಣಿಸಿಕೊಂಡ ದಿನಗಳಲ್ಲಿ ಎಲ್ಲ ಪಕ್ಷಗಳು ಪಕ್ಷಭೇದ ಮರೆತು ಕೇಂದ್ರ ಸರಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು. ಕೆಲವೇ ದಿನಗಳಲ್ಲಿ ಮಾಸ್ಕ್ ಹಾಗೂ ವೆಂಟಿಲೇಟರ್ ಖರೀದಿ ಕುರಿತು ಕೆಲವು ಅಪಸ್ವರಗಳು ಕೇಳಿಬಂದವು. ಆದರೆ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಸರ್ವಪಕ್ಷ ಸಭೆ ನಡೆಸಿದ್ದ ಕೇಂದ್ರ ಸರಕಾರ, ಇದೀಗ ಎರಡನೆ ಬಾರಿಗೆ ಸಭೆ ನಡೆಸಿದೆ.

ಲಸಿಕೆ ವಿತರಣೆಯ ಮಹತ್ವದ ವಿವರಗಳನ್ನು ಪ್ರಕಟಿಸಿದೆ. ಈ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹ ಪಾಲ್ಗೊಂಡು ವೆಚ್ಚ ಹಾಗೂ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಸಂಪೂರ್ಣ ವೆಚ್ಚವನ್ನು ಕೇಂದ್ರ ಸರಕಾರ ಭರಿಸು ತ್ತದೆಯೇ ಅಥವಾ ರಾಜ್ಯ ಸರಕಾರವೂ ಪಾಲು ಕೊಡಬೇಕೇ ಎಂಬುದಾಗಿ ಪ್ರಶ್ನಿಸಿದ್ದಾರೆ. ಕಾರ್ಯಕ್ಷಮತೆ ಹಾಗೂ ಭದ್ರತೆ ಕುರಿತು
ವಿವರಗಳನ್ನು ಕೇಳಿದ್ದಾರೆ. ಇದು ಮಹತ್ವದ ವಿಷಯ. ಲಸಿಕೆ ವಿತರಣೆಯಷ್ಟೇ ಮುಖ್ಯವಾಗಿ ಮೂರನೆ ಹಂತದ ಪ್ರಯೋಗವನ್ನು ತಲುಪಿದ್ದು ಯಾವ ಲಸಿಕೆಗೆ ಅನುಮತಿದೊರೆಯಲಿದೆ ಎಂಬುದು ಸಹ ಮುಖ್ಯ.