Saturday, 27th July 2024

ಪರಿಸ್ಥಿತಿಯ ದುರುಪಯೋಗ ಸಲ್ಲ

ಬೇಸಗೆ ಕಾಲ ಅಪ್ಪಳಿಸುತ್ತಿದ್ದಂತೆ ಧುತ್ತೆಂದು ತಲೆದೋರುವ ಎರಡು ಪ್ರಮುಖ ಸಮಸ್ಯೆಗಳೆಂದರೆ ವಿದ್ಯುತ್ ಕಣ್ಣಾಮುಚ್ಚಾಲೆ ಮತ್ತು ನೀರಿನ ಕೊರತೆ. ಈ ಎರಡೂ ಸಮಸ್ಯೆಗಳಿಂದ ರೈತರು ಅನುಭವಿಸುವ ಪಡಿಪಾಟಲು ಅಷ್ಟಿಷ್ಟಲ್ಲ. ನೀರಾವರಿ ಸೌಲಭ್ಯ ಇಲ್ಲದವರು ಮಾಡಿಕೊಂಡ ಬೋರ್‌ವೆಲ್/ಬಾವಿ ಯಂಥ ಪರ್ಯಾಯ ವ್ಯವಸ್ಥೆಗಳಲ್ಲೂ ನೀರಿನ ಒರತೆ ಬತ್ತುವುದು, ಒಂದೊಮ್ಮೆ ನೀರಿದ್ದರೂ ಯಥೋಚಿತವಾಗಿ ಮತ್ತು ಸಕಾಲಿಕವಾಗಿ ಅದನ್ನು ಬೆಳೆಗಳಿಗೆ ಹಾಯಿಸಲು ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಮಸ್ಯೆ ಎದುರಾಗುವುದು ಬಹುತೇಕ ಎಲ್ಲ ವರ್ಷಗಳಲ್ಲೂ ಕಾಣಬರುವ ಸಮಸ್ಯೆಯೇ.

ಕೆಲವೆಡೆಯಂತೂ ಬೆಳೆಗಳಿಗಿರಲಿ, ಕುಡಿಯುವ ನೀರಿಗೂ ಸಂಚಕಾರ ಒದಗುವುದಿದೆ. ಬೆಂಗಳೂರು ಕೂಡ ಇದಕ್ಕೆ ಹೊರತಾಗಿಲ್ಲ. ಕಾವೇರಿ/ತಿಪ್ಪ ಗೊಂಡನಹಳ್ಳಿ ಜಲಾಶಯದ ನೀರು ಸರಬರಾಜಿನಲ್ಲಿ ವ್ಯತ್ಯಯವಾದರೆ ಬೆಂಗಳೂರಿಗರು ಟ್ಯಾಂಕರ್ ನೀರನ್ನು ನೆಚ್ಚಬೇಕಾಗುವುದು ಅನಿವಾರ್ಯ. ತೀರಾ ಇತ್ತೀಚಿನವರೆಗೂ ಇದು ಅಬಾಽತವಾಗಿ ಸಾಗಿತ್ತು. ಆದರೆ ಮಹಾನಗರಿಯಲ್ಲಿ ನೀರಿನ ಕೊರತೆ ತಾರಕಕ್ಕೇರಿರುವುದನ್ನು ಮನಗಂಡ ಕೆಲವು ಖಾಸಗಿ ಟ್ಯಾಂಕರ್ ಮಾಲೀಕರು ಪರಿಸ್ಥಿತಿಯ ದುರ್ಲಾಭ ಪಡೆದು ಕೊಂಡು ದುಪ್ಪಟ್ಟು ದರ ವಸೂಲು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.

‘ಬೇಡಿಕೆ ಹೆಚ್ಚಾದಂತೆ ಉತ್ಪನ್ನದ/ಸೇವೆಯ ಬೆಲೆಯೂ ಹೆಚ್ಚುತ್ತದೆ’ ಎಂಬುದು ವಾಣಿಜ್ಯ ಪ್ರಪಂಚದ ನಿಯಮವೇ ಆಗಿದ್ದಿರಬಹುದು; ಹಾಗಂತ ಅದನ್ನು ಎಲ್ಲ ಬಾಬತ್ತುಗಳಿಗೂ ಅನ್ವಯಿಸುವುದು ಸ್ವೀಕಾರಾರ್ಹವಲ್ಲ. ಲಾಭಗಳಿಕೆಯು ವ್ಯಾಪಾರಧರ್ಮವೇ ಇರಬಹುದು, ಆದರೆ ಅದಕ್ಕೊಂದು ನೈತಿಕ ನೆಲೆಗಟ್ಟೂ ಇರಬೇಕಾಗುತ್ತದೆ ಮತ್ತು ಮಾನವೀಯತೆಯ ಸೆಲೆ ಅಲ್ಲಿರಬೇಕಾಗುತ್ತದೆ. ಟ್ಯಾಂಕರ್‌ಗಳು ಹೀಗೆ ನೀರಿಗೆ ದುಪ್ಪಟ್ಟು ದರ ವಸೂಲಿ ಮಾಡು ತ್ತಿರುವುದಕ್ಕೆ ದೂರು ದಾಖಲಾದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ದರ ನಿಗದಿ ಸೇರಿದಂತೆ ಒಂದಷ್ಟು ಕ್ರಮಗಳನ್ನು ಕೈಗೊಳ್ಳಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಚಿಂತನೆ ಸ್ವಾಗತಾರ್ಹವಾದರೂ, ಟ್ಯಾಂಕರ್‌ಗಳು ಅದಕ್ಕೂ ಮೊದಲೇ ಸ್ವಯಂ ಶಿಸ್ತಿಗೆ ತಮ್ಮನ್ನು ಒಳಪಡಿಸಿ ಕೊಳ್ಳಬೇಕಾದ್ದು ಈ ಕ್ಷಣದ ಅನಿವಾರ್ಯವಾಗಿದೆ. ಟ್ಯಾಂಕರ್ ನೀರಿನ ಸೇವೆಗೆ ಗ್ರಾಹಕರಿಂದ ಯಥೋಚಿತ ಶುಲ್ಕವನ್ನೇ ವಸೂಲು ಮಾಡಲು ಅವರು ಮುಂದಾಗಲಿ.

Leave a Reply

Your email address will not be published. Required fields are marked *

error: Content is protected !!