Sunday, 8th September 2024

ನೀಟ್‌ಗೆ ವಿದಾಯ ಸ್ವಾಗತಾರ್ಹ

ನೀಟ್ ಪರೀಕ್ಷೆ ಕುರಿತ ಅಕ್ರಮಗಳ ಬಗ್ಗೆ ಸುಪ್ರೀಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದಿದೆ. ಈ ನಡುವೆ ರಾಜ್ಯ ಸರಕಾರವು ಕೇಂದ್ರ ಸುಪರ್ದಿಯಲ್ಲಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಿಂದ ಹೊರ ಬಂದು ಸಿಇಟಿ ಆಧಾರದಲ್ಲಿ ರಾಜ್ಯದ ವೈದ್ಯ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲು ಮುಂದಾಗಿದೆ. ಈ ಸಂಬಂಧ ಉಭಯ ಸದನಗಳಲ್ಲೂ ನಿರ್ಣಯ ಅಂಗೀಕರಿಸಲಾಗಿದೆ.

ತಮಿಳುನಾಡು ಈಗಾಗಲೇ ನೀಟ್‌ನಿಂದ ಹೊರ ಬಂದು ತನ್ನದೇ ಪರೀಕ್ಷಾ ವ್ಯವಸ್ಥೆಯಡಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುತ್ತಿದೆ. ಪಶ್ಚಿಮ ಬಂಗಾಳ ಸರಕಾರವೂ ಇದೇ ಮಾದರಿಯ ನಿರ್ಣಯ ಕೈಗೊಂಡಿದೆ. ಕಳೆದ ಮೂರು ದಶಕಗಳಿಂದ ವೃತ್ತಿಪರ ಕೋರ್ಸುಗಳಿಗೆ ವ್ಯಾಪಕ ಬೇಡಿಕೆಯಿದೆ. ಪ್ರತೀ ವರ್ಷ ಲಕ್ಷಗಟ್ಟಲೆ ವಿದ್ಯಾರ್ಥಿ ಗಳು ಈ ಪರೀಕ್ಷೆ ಬರೆದು ವೈದ್ಯರಾಗುವ ಕನಸು ಕಾಣುತ್ತಿದ್ದಾರೆ. ಪಿಯು ಹಂತದಲ್ಲಿ ವೈದ್ಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳನ್ನು ಗಮನದಲ್ಲಿಟ್ಟು ಕೊಂಡೇ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಲಕ್ಷಾಂತರ ರು. ವ್ಯಯಿಸಿ ಕೋಚಿಂಗ್ ಪಡೆಯುತ್ತಾರೆ.

ಕೆಲವರು ತಮ್ಮ ಬೇಕಾದ ಕಾಲೇಜಿನಲ್ಲಿ, ಬೇಕಾದ ಕೋರ್ಸ್ಗೆ ಪ್ರವೇಶ ಪಡೆಯಲು ಪಿಯು ಬಳಿಕ ಒಂದು ವರ್ಷ ಪೂರ್ತಿ ಪರೀಕ್ಷೆಗೆ ಸಿದ್ಧತೆ ನಡೆಸಿ ಎರಡನೇ ಬಾರಿ ಪರೀಕ್ಷೆ ಬರೆಯುತ್ತಾರೆ. ಆದರೆ ದೇಶದ ಮುಂದಿನ ವೈದ್ಯರನ್ನು, ಎಂಜಿನಿಯರ್‌ಗಳನ್ನು ರೂಪಿಸುವ ನೀಟ್, ಜೆಇಇನಂತಹ ಪರೀಕ್ಷೆ ಪ್ರತೀ ವರ್ಷ ಒಂದಲ್ಲ ಒಂದು ವಿವಾದಗಳಿಗೆ ಗುರಿಯಾಗುತ್ತಲೇ ಬಂದಿದೆ. ಈ ವರ್ಷದ ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ೬೭ ವಿದ್ಯಾರ್ಥಿಗಳಲ್ಲಿ ೪೪ ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ಸ್ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್ ಸ್ಥಾನ ಪಡೆದಿದ್ದರು.

ಇಂತಹ ಕಳಂಕಿತ ನೀಟ್ ಪರೀಕ್ಷೆ ಅತಿ ಹೆಚ್ಚು ವೈದ್ಯ ಕಾಲೇಜುಗಳಿರುವ ಕರ್ನಾಟಕದಂತಹ ದಕ್ಷಿಣದ ರಾಜ್ಯಗಳಿಗೆ ಮಾರಕ ಮಾತ್ರವಲ್ಲ, ಗ್ರಾಮೀಣ ಬಡ ಮಕ್ಕಳ ಶಿಕ್ಷಣಾವಕಾಶಗಳನ್ನು ಮೊಟಕುಗೊಳಿಸುತ್ತಿದೆ. ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯನ್ನೇ ಈ ಅಕ್ರಮಗಳು ಬುಡಮೇಲು ಮಾಡುತ್ತಿವೆ. ಹೀಗಾಗಿ ಇದರಿಂದ ದೂರ ಸರಿಯುವ ರಾಜ್ಯ ಸರಕಾರದ ನಡೆ ಸ್ವಾಗತಾರ್ಹ. ಆದರೆ ಈ ನಿರ್ಣಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇದ್ದು ರಾಜ್ಯ ಸರಕಾರ ಸಮರ್ಥ ವಾದ ಮಂಡನೆಗೆ ಸಿದ್ಧವಾಗಬೇಕಿದೆ. ಇದರ ಜತೆಗೆ ನಮ್ಮ ಸಿಇಟಿ ಪರೀಕ್ಷಾ ವ್ಯವಸ್ಥೆಯ ಲೋಪಗಳನ್ನೂ ಸರಿಪಡಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!