ಮಾವಿನ ಹಣ್ಣಿಗೆ ರಾಸಾಯನಿಕ ಮಿಶ್ರಣ ಮಾಡಿ, ಬಣ್ಣಕ್ಕೆ ತಿರುಗಿಸಿ ಮಾರಾಟ ಮಾಡುತ್ತಿರುವ ಜಾಲ ಎಲ್ಲೆಡೆ ಸಕ್ರಿಯವಾಗಿರುವ ಕಾರಣ ಮಾವಿನ ಹಣ್ಣಿನ ಋತು ಪ್ರಾರಂಭವಾಗುವುದಕ್ಕಿಂತ ತಿಂಗಳು ಮೊದಲೇ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಮಾವಿನ ಹಣ್ಣುಗಳು ಮಾರಾಟಕ್ಕೆ ಇರುತ್ತವೆ.
ಈ ಮಾವಿನ ಹಣ್ಣುಗಳನ್ನು ನೋಡಿ ಮನಸೋತ ಜನರು ಆರೋಗ್ಯಕ್ಕೆ ಮಾರಕವಾಗುವ ರಾಸಾಯನಿಕವನ್ನು ಹೊಟ್ಟೆಗೆ ಸೇರಿಸಿಕೊಳ್ಳುತ್ತಿದ್ದಾರೆ. ಹಣದ ಆಸೆಗೆ ನಗರದ ನಾನಾ ಕಡೆಗಳಲ್ಲಿ ಇಂತಹ ದಂಧೆ ಜೋರಾಗಿ ನಡೆದಿದೆ. ರೈತರ ಜಮೀನಿನಿಂದ ತಂದ ಮಾವಿನ ಹಣ್ಣು ನೈಸರ್ಗಿಕವಾಗಿ ಹಣ್ಣಾಗಲು ಸರಿಸುಮಾರು ಒಂದುವಾರ ಕಾಲಾವಕಾಶ ಬೇಕು. ಆದರೆ ಎಥಿಫಾನ್ ಟ್ಯಾಗ್ಪಾನ್-೩೯ ಎಂಬ ವಿಷಕಾರಿ ಔಷಧ ಬಳಕೆಯಿಂದ ೪-೫ ದಿನದಲ್ಲಿ ಹಣ್ಣಾಗುವ ಮಾವಿನ ಹಣ್ಣನ್ನು ಒಂದೇ ದಿನದಲ್ಲಿ ಹಣ್ಣು ಮಾಡಲಾಗುತ್ತಿದೆ.
ರೈತರ ಜಮೀನಿನಿಂದ ವ್ಯಾಪಾರಿಗಳ ಗೋದಾಮಿಗೆ ಬರುವ ಮಾವಿನ ಹಣ್ಣನ್ನು ಟ್ಯಾಗ್ಪಾನ್ ವಿಷಕಾರಿ ರಾಸಾಯನಿಕ ಬ್ಯಾರಲ್ ನೀರಿನಲ್ಲಿ ಹಾಕಲಾಗುತ್ತಿದೆ. ಹಣ್ಣುಗಳನ್ನು ಆ ನೀರಿನಲ್ಲಿ ಹಾಕಿ ನಂತರ ಏರ್ ಕೂಲರ್‌ನಲ್ಲಿ ಇಡಲಾಗುತ್ತದೆ. ೧೨ ರಿಂದ ೨೪ ಗಂಟೆ ತಂಪಾಗಿಸಿದರೆ ೨ ದಿನದಲ್ಲಿ ಹಣ್ಣಾಗುತ್ತದೆ. ಟ್ಯಾಗ್ಪಾನ್- ೩೯ಎಂಬ ವಿಷಕಾರಿ ಕೆಮಿಕಲ್ ಬಳಸಿ ಹಣ್ಣು ತಿನ್ನುವುದರಿಂದ ಮಾನುಷ್ಯನ ದೇಹದಲ್ಲಿ ಸೂಕ್ಷ್ಮ ಇಂದ್ರಿಯಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಕಣ್ಣು, ಕಿಡ್ನಿ ಹಾಗೂ ಪುರುಷತ್ವದ ಮೇಲೆ ಪರಿಣಾಮ ಬಿರುತ್ತದೆ. ಕೆಮಿಕಲ್ ಮಿಶ್ರಿತ ಹಣ್ಣುಗಳನ್ನು ನಿತ್ಯ ತಿನ್ನುವುದರಿಂದ ಕ್ಯಾನ್ಸರ್ ಕಾಯಿಲೆಗೆ ಎಡೆ ಮಾಡಿಕೊಡುತ್ತಿದೆ.
ಕೆಮಿಕಲ್ ಮಿಶ್ರಿತ ಹಣ್ಣುಗಳ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆಗೆ ಗೊತ್ತಿದ್ದರೂ ದಿವ್ಯ ಮೌನ ವಹಿಸಿದ್ದಾರೆ. ಕೂಡಲೇ ಅಧಿಕಾರಿಗಳು ರಾಸಾಯನಿಕ ಬಳಕೆ ಮಾಡಿ ಮಾವಿನ ಹಣ್ಣು ಸೇರಿದಂತೆ ಇನ್ನಿತರ ಹಣ್ಣುಗಳನ್ನು ಬಣ್ಣಕ್ಕೆ ತಿರುಗಿಸಿ ಮಾರಾಟ ಮಾಡುವವರ ವಿರುದ್ಧ ಕ್ರಮ ವಹಿಸಬೇಕು. ಸಾರ್ವಜನಿಕರೂ ಕೂಡ ಯಾವುದೇ ಹಣ್ಣಿನ ಋತು ಪ್ರಾರಂಭವಾಗುವುದಕ್ಕಿಂತಲೂ ಮೊದಲೇ ಹಣ್ಣನ್ನು ತಿನ್ನಬಾರದು.