Friday, 20th September 2024

ಜನಸಂಖ್ಯೆ ನಿಯಂತ್ರಣ ಮಾರ್ಗೋಪಾಯ ಅನಿವಾರ್ಯ

ದೇಶ ಅಥವಾ ರಾಜ್ಯಗಳ ಅಭಿವೃದ್ಧಿಯಲ್ಲಿ ಜನಸಂಖ್ಯೆಯೂ ಮಹತ್ವದ ಪಾತ್ರವಹಿಸುತ್ತದೆ. ಅದೇ ರೀತಿ ಸಂಖ್ಯೆಯ ಹೆಚ್ಚಳ ಮಾರಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣ ಎಂಬುದು ಅಭಿವೃದ್ಧಿಯಷ್ಟೇ ಮಹತ್ವದ ಸಂಗತಿ.

ಸರಕಾರಗಳ ಆದೇಶಗಳಿಂದ ಜನಸಂಖ್ಯೆ ನಿಯಂತ್ರಣ ಅಸಾಧ್ಯ ಎಂಬ ಹೇಳಿಕೆಗಳು ಕೇಳಿಬರುತ್ತವೆ. ಆದರೆ ಜನಸಂಖ್ಯೆ ಹೆಚ್ಚಳದಿಂದ ಉಂಟಾಗಬಹುದಾದ ಪರಿಣಾಮ ಗಳನ್ನು ವಿವರಿಸುವಲ್ಲಿ ಮಾರ್ಗಸೂಚಿಗಳು ಬಹುಅವಶ್ಯ. ಭಾರತ ಸಹಿತ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಜನಸಂಖ್ಯೆ. ಬ್ರೆಜಿಲ್, ಚೀನಾ ಹಾಗೂ ಭಾರತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು, ಪ್ರಸ್ತುತ ಭಾರತ ದೇಶವು ವಿಶ್ವದಲ್ಲಿ ಎರಡನೆ ಸ್ಥಾನದಲ್ಲಿದೆ.

೧೩೮ ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಮುಂದಿನ ಮೂರು ವರ್ಷಗಳಲ್ಲಿ ಚೀನಾವನ್ನೂ ಮೀರಿಸಲಿದೆ ಎಂದು ಅಂದಾಜಿಸಲಾಗಿದೆ. ಇಂಥದೊಂದು ಬೆಳವಣಿಗೆ ಸಂಭವಿಸಿದರೆ ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ. ಅತಿಹೆಚ್ಚು ಜನಸಂಖ್ಯೆ ಹೊಂದುವುದು ಪೂರಕವಲ್ಲದ ಮಾರಕ ಬೆಳವಣಿಗೆಯಾಗಿರುವುದರಿಂದ ನಿಯಂತ್ರಣ ಅಗತ್ಯ. ಈ ನಿಟ್ಟಿನಲ್ಲಿ ದೇಶದಲ್ಲಿ ಈಗಾಗಲೇ ಪ್ರಯತ್ನಗಳು ಆರಂಭಗೊಂಡಿವೆ. ಅಸ್ಸಾಂ ಮತ್ತು ಉತ್ತರಪ್ರದೇಶ ಹೊಸ ಜನಸಂಖ್ಯಾ ಮಾದರಿಯನ್ನು ಘೋಷಿಸಿವೆ.

ಇದೇ ರೀತಿ ಕರ್ನಾಟಕದಲ್ಲೂ ಜನಸಂಖ್ಯಾ ನೀತಿ ಜಾರಿಗೆ ತರಬೇಕೆಂಬ ಬೇಡಿಕೆಗಳು ಕೇಳಿಬರುತ್ತಿವೆ. ದೇಶದ ಏಳಿಗೆಯಲ್ಲಿ ಜನಸಂಖ್ಯೆ ನಿಯಂತ್ರಣ ಎಂಬುದು ಪ್ರಮುಖ ಪಾತ್ರವಹಿಸುವುದರಿಂದ ಜನಸಂಖ್ಯೆ ನಿಯಂತ್ರಣ ನೀತಿ ರೂಪಿಸುವುದು, ಅನುಷ್ಠಾನಕ್ಕೆ ಆದ್ಯತೆ ನೀಡುವುದು ಅಗತ್ಯ ಮಾತ್ರವಲ್ಲದೆ ಅನಿವಾರ್ಯ
ಸಂಗತಿ.