Sunday, 8th September 2024

ನಿಂತ ಕಾಲಮೇಲೆ ಮೀಸಲು ಕೋರುವುದು ಸರಿಯಲ್ಲ

ರಾಜ್ಯದಲ್ಲಿ ಪಂಚಮಸಾಲಿ ಮಾತ್ರವಲ್ಲದೇ ಈಗಾಗಲೇ ಹಲವು ಸಮುದಾಯಗಳು ತಮಗೆ ಮೀಸಲು ನೀಡುವಂತೆ ಆಗ್ರಹಿಸಿವೆ.

ಇದಕ್ಕಾಗಿ ಹಲವು ರ‍್ಯಾಲಿ, ಪ್ರತಿಭಟನೆ, ಧರಣಿಗಳನ್ನು ಮುಗಿಸಿವೆ. ಈ ಎಲ್ಲ ಸಮುದಾಯಗಳಿಗೂ ಮೀಸಲಿನ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಸರಕಾರ ನೀಡಿದೆ. ಆದರೆ ಪಂಚಮಸಾಲಿ ಹೋರಾಟದ ವಿಷಯದಲ್ಲಿ ಹೋರಾಟದ ಹಾದಿ, ಮೊಂಡುತನಕ್ಕೆ ತಿರುಗಿತೇ ಎನ್ನುವ ಪ್ರಶ್ನೆ ಶುರುವಾಗಿದೆ. ಇತರ ಸಮುದಾಯಗಳಿಗೆ ಕೇವಲ ಭರವಸೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಪಂಚಮಸಾಲಿಗೆ ಮೀಸಲು ನೀಡುವ ಕುರಿತು ಕುಲಶಾಸ ಅಧ್ಯಯನಕ್ಕೆ ಈಗಾಗಲೇ ಆದೇಶ ಹೊರಡಿಸಿದ್ದಾರೆ.

ಆದ್ದರಿಂದ ಈ ಅಧ್ಯಯನದ ಬಳಿಕ ಮೀಸಲಾತಿ ನೀಡಬೇಕೇ ಬೇಡವೇ ಎನ್ನುವುದು ತಿಳಿಯುತ್ತದೆ. ಆದರೆ ಈಗಲೇ, ಮೀಸಲು ಘೋಷಣೆ ಮಾಡಬೇಕು ಎಂದು ಪಟ್ಟು ಹಿಡಿದು, ಸತ್ಯಾಗ್ರಹ ಆರಂಭಿಸಿರುವುದು ಸರಿಯಾದ ನಡವಳಿಕೆಯೇ ಎನ್ನುವ ಪ್ರಶ್ನೆಗಳು ಶುರುವಾಗಿದೆ. ಯಾವುದೇ ಸರಕಾರ ಒಂದು ತೀರ್ಮಾನ ತಗೆದುಕೊಳ್ಳುವ ಮೊದಲು ನೂರಾರು ಆಯಾಮದಲ್ಲಿ ಯೋಚಿಸ ಬೇಕಾಗುತ್ತದೆ.

ಈಗ ಮೀಸಲಾತಿ ನೀಡುವಾಗಲೂ, ಹಿಂದುಳಿದ ವರ್ಗಗಳ ಆಯೋಗ ನೀಡುವ ವರದಿಯನ್ನು ನೋಡಬೇಕು. ಈ ವರದಿಯನ್ನು ಸಿದ್ಧಪಡಿಸಲು ಸಮಿತಿ, ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ನಡೆಸಿ, ಅಲ್ಲಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಬಳಿಕ ವರದಿಯನ್ನು ಸಲ್ಲಿಸಬೇಕು. ಈ ಎಲ್ಲ ಪ್ರಕ್ರಿಯೆಗೆ ಕನಿಷ್ಠ ಎಂದರೂ ಮೂರು ನಾಲ್ಕು ತಿಂಗಳು ಅಗತ್ಯ ಎನ್ನುವ ಮಾತುಗಳನ್ನು ತಜ್ಞರೇ ಹೇಳಿದ್ದಾರೆ. ಹೀಗಿರುವಾಗ, ಸಮಾವೇಶ ಸಮಾರಂಭ ಮುಗಿಯುವ ಮೊದಲೇ, ಮೀಸಲು ಘೋಷಿಸಿ ಎಂದರೆ ಸರಕಾರಕ್ಕೆ ಏನು ಮಾಡಲೂ ಆಗದ ಸ್ಥಿತಿ ನಿರ್ಮಾಣವಾಗುತ್ತದೆ.

ಇದರೊಂದಿಗೆ ಈ ರೀತಿ ಮೊಂಡುತನ ಹಿಡಿದು ಕುಳಿತರೆ, ಸರಿದಾರಿಯಲ್ಲಿರುವ ಹೋರಾಟ, ತಪ್ಪು ಹಾದಿಯತ್ತ ಹೊರಳಿದರೂ ಅಚ್ಚರಿಯಿಲ್ಲ. ಆದ್ದರಿಂದ ಮುಖಂಡರು ಈ ಬಗ್ಗೆ ಯೋಚಿಸಬೇಕಿದೆ. ಸರಕಾರ ಕೂಡ ವಿಳಂಬ ಧೋರಣೆ ಅನುಸರಿಸದೆ,
ಇದಕ್ಕೆಂದು ಸೂಕ್ತ ಪರಿಹಾರವನ್ನು ಬೇಗ ಕಂಡುಹಿಡಿಯಬೇಕು.

Leave a Reply

Your email address will not be published. Required fields are marked *

error: Content is protected !!