Friday, 20th September 2024

ಭಾರತದ ಗಡಿಯಲ್ಲಿ ಎಚ್ಚರ ಅತ್ಯಗತ್ಯ

ಕಳೆದ ಕೆಲ ದಿನಗಳಿಂದ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಮಾನದಿಂದ ಭಾರತದ ಮೇಲಾಗುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಅದರಲ್ಲಿಯೂ ಇದೀಗ ಅಮೆರಿಕ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂಪಡೆದಿದ್ದರಿಂದ, ಅಫ್ಘಾನಿಸ್ತಾನ ತಾಲಿಬಾನಿಗಳ ಹಾಗೂ ಇತರ ಉಗ್ರ ಸಂಘಟನೆಗಳ ತವರು ಆಗಲಿದೆ.

ಈಗಾಗಲೇ ಪಾಕಿಸ್ತಾನ ಹಾಗೂ ಚೀನಾ, ತಾಲಿಬಾನಿಗಳಿಗೆ ಬೆಂಬಲ ನೀಡಿರುವುದರಿಂದ, ಭಾರತಕ್ಕೆ ಗಡಿ ಭಾಗದಲ್ಲಿ ಕೆಲ ಸಮಸ್ಯೆ ಎದುರಾಗುವುದು ಖಚಿತ. ಇದಕ್ಕೆ ಪೂರಕ ಎನ್ನುವಂತೆ ಈಗಾಗಲೇ ಕಾಶ್ಮೀರದಲ್ಲಿ ಉಗ್ರ ಉಪಟಳ, ಒಳ ನುಸುಳುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಂತದಲ್ಲಿ ನೆರೆ ಶತ್ರುರಾಷ್ಟ್ರ ವಾಗಿರುವ ಚೀನಾ ಹಾಗೂ ಪಾಕಿಸ್ತಾನ ಎರಡೂ ಅಫ್ಘಾನಿಸ್ತಾನದ ತಾಲಿಬಾನಿಗಳಿಗೆ ಬೆಂಬಲ ನೀಡುತ್ತಿರುವು ದರಿಂದ, ಗಡಿಯಲ್ಲಿ ಉಗ್ರರ ಉಪಟಳ ಹೆಚ್ಚಾಗಲಿದೆ.

ಈಗಾಗಲೇ ಭಾರತವೂ ವಿವಿಧ ಮಿತ್ರ ರಾಷ್ಟ್ರಗಳೊಂದಿಗೆ ಈ ಬಗ್ಗೆ ನಿರಂತರ ಚರ್ಚೆ ನಡೆಸುವ ಜತೆಜತೆ, ತಾಲಿಬಾನಿಗಳೊಂದಿಗೂ ರಾಯಭಾರಿ ಕಚೇರಿಯ ಹಂತದಲ್ಲಿ ಚರ್ಚೆ ನಡೆಸಲಾಗುತ್ತಿದೆ. ತಾಲಿಬಾನಿ ಗಳಿಂದ ಸಮಸ್ಯೆಯಾಗುವುದು ತಿಳಿದಿದ್ದರೂ, ಜಗತ್ತಿನ ಇತರ ರಾಷ್ಟ್ರಗಳು ತಾಲಿಬಾನಿಗಳ ವಿಷಯದಲ್ಲಿ ಮೌನ ವಹಿಸಿರುವುದರಿಂದ, ಭಾರತ ಏಕಾಂಗಿ ಯಾಗಿ ಪ್ರತಿಭಟಿಸಲು ಈ ಹಂತದಲ್ಲಿ ಸಾಧ್ಯವಿಲ್ಲ. ಸದ್ಯದ ಮಟ್ಟಿಗೆ ಭಾರತಕ್ಕೆ ತನ್ನ ಗಡಿಯನ್ನು ರಕ್ಷಣೆ ಮಾಡಿಸಿ ಕೊಳ್ಳುವುದು ಮೊದಲ ಆದ್ಯತೆ ಆಗಿದೆ ಹೊರತು, ತಾಲಿಬಾನಿಗಳ ವಿರುದ್ಧ ಹೋರಾಟ ಮಾಡುವುದಲ್ಲ.

ಸೈನ್ಯದ ಬಲಪಡಿಸುವ ಜತೆಗೆ, ಒಂದು ವೇಳೆ ತಾಲಿಬಾನಿಗಳ ವಿರುದ್ಧ ತಿರುಗಿ ಬೀಳುವ ಸನ್ನಿವೇಶ ಎದುರಾದರೆ, ತಮ್ಮೊಂದಿಗೆ ಯಾವ ರಾಷ್ಟ್ರಗಳು ಬರಲಿವೆ ಎನ್ನುವುದನ್ನು ನೋಡಬೇಕು. ಇದಕ್ಕೆ ಕೆಲ ಸಮಯ ಬೇಕು. ಆದರೆ ಅಲ್ಲಿಯವರೆಗೆ ಚೀನಾ ಹಾಗೂ ಪಾಕಿಸ್ತಾನದೊಂದಿಗೆ ಹಂಚಿಕೊಂಡಿರುವ ಗಡಿಯಲ್ಲಿ ತೀವ್ರ
ಕಟ್ಟೆಚ್ಚರವಹಿಸುವ ಅಗತ್ಯವಿದೆ.