Sunday, 8th September 2024

ಸುರಕ್ಷತೆಯ ನಿರ್ಲಕ್ಷ್ಯ ಸೋಂಕು ಲಕ್ಷ

ಕರೋನಾ ತಂದೊಡ್ಡಿದ ಸಂಕಷ್ಟದ ಸ್ಥಿತಿ ಈಗಾಗಲೇ ಎಲ್ಲರಿಗೂ ಮನವರಿಕೆಯಾಗಿದೆ. ಆದರೂ ಸುರಕ್ಷತೆಯ ಕಾರಣದಿಂದ ಮತ್ತಷ್ಟು ಜಾಗ್ರತೆ ವಹಿಸಬೇಕಿರುವ ಅಗತ್ಯತೆ ಹಿಂದೆಂದಿಗಿಂತಲೂ ಇದೀಗ ಹೆಚ್ಚಾಗಿದೆ.

ಏಕೆಂದರೆ ಇದೀಗ ಕರೋನಾ ಪೀಡಿತ ದೇಶಗಳ ಸಾಲಿನಲ್ಲಿ ಭಾರತ ನಂ.1 ಸ್ಥಾನವನ್ನು ತಲುಪುವ ಸಾಧ್ಯತೆ ಕಂಡುಬರುತ್ತಿದೆ. ಅಕ್ಟೋಬರ್ ಮೊದಲವಾರದಲ್ಲಿ ಭಾರತದ ಕರೋನಾ ಸೋಂಕಿತರ ಸಂಖ್ಯೆೆ 70ಲಕ್ಷಕ್ಕೆೆ ತಲುಪಲಿದೆ ಎಂದು ಅಂದಾಜಿಸ ಲಾಗಿದೆ.
ದೇಶದಲ್ಲಿ ಕೋವಿಡ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಘೋಷಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ಬಹಳಷ್ಟು ನಿಯಂತ್ರಣ ಸಾಧಿಸುವಲ್ಲಿ ಯಶಸ್ಸು ದೊರೆತಿತ್ತು. ಆದರೆ ಜನರ ಆರ್ಥಿಕ ಸಂಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ಲಾಕ್‌ಡೌನ್‌ನನ್ನು ತೆರವುಗೊಳಿಸಲಾಯಿತು. ಲಾಕ್‌ಡೌನ್ ತೆರವಿನಿಂದ ಜನರು ಜಾಗ್ರತೆ ವಹಿಸುವ ನಿಟ್ಟಿನಲ್ಲಿ ನಿರ್ಲಕ್ಷ್ಯತೆ ತೋರುತ್ತಿರುವುದರಿಂದ ಇದೀಗ ಮತ್ತೆೆ ಪ್ರಕರಣಗಳ ಸಂಖ್ಯೆೆಯಲ್ಲಿ ಏರಿಕೆ ಉಂಟಾಗಿದೆ.

ಈ ಬಗ್ಗೆ ಪ್ರಧಾನಿಯವರು ಸಹ ಇತ್ತೀಚೆಗೆ ದೇಶದ ಜನರನ್ನುದ್ದೇಶಿಸಿ ನೀಡಿರುವ ಹೇಳಿಕೆ ಮಹತ್ವದ್ದಾಗಿದೆ. ಆದರೆ ಅದನ್ನು ಸರಿಯಾದ ರೀತಿ ಪಾಲನೆ ಮಾಡಬೇಕಿರುವುದು ನಮ್ಮೇಲ್ಲರ ಜವಾಬ್ದಾರಿ. ಈ ಹಿಂದೆ ಲಾಕ್ ಡೌನ್‌ಗೆ ಕರೆ ನೀಡಿದ್ದ ಪ್ರಧಾನಿ ಮೋದಿಯವರು ಇದೀಗ ‘ಜಬ್ ತಕ್ ದವಾಯಿ ನಹಿ, ತಬ್ ತಕ್ ದಿಲಾಯಿ ನಹೀ’ ಎಂಬ ಮಹತ್ವದ ಸಂದೇಶವನ್ನು ನೀಡಿದ್ದಾರೆ. ಅಂದರೆ ಸೋಂಕಿನ ನಿವಾರಣೆಗೆ ಲಸಿಕೆ ದೊರೆಯುವವರೆಗೆ ನಿರ್ಲಕ್ಷ್ಯ ತೋರದಿರಿ ಎಂಬುದು ಈ ಮಾತಿನ ಅರ್ಥ. ದೇಶದಲ್ಲಿ
ಇದೀಗ ಪ್ರತಿನಿತ್ಯ ಸೋಂಕಿತರ ಪ್ರಮಾಣ ಒಂದು ಲಕ್ಷ ಸಮೀಪಿಸುತ್ತಿರುವುದರಿಂದ ಮತ್ತೊಮ್ಮೆ ಜಾಗ್ರತೆ ವಹಿಸಬೇಕಿರುವ ಅವಶ್ಯಕತೆ ಹೆಚ್ಚುತ್ತಿದೆ. ಸಣ್ಣ ನಿರ್ಲಕ್ಷ್ಯ ಇದೀಗ ಸೋಂಕಿತರ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದ್ದು, ಜಾಗ್ರತೆ ವಹಿಸಬೇಕಿರುವುದು ಹಾಗೂ ಸುರಕ್ಷತೆಯ ಕ್ರಮಗಳನ್ನು ಅನುಸರಿಸಬೇಕಿರುವುದು ಮುಖ್ಯ.

Leave a Reply

Your email address will not be published. Required fields are marked *

error: Content is protected !!