Thursday, 19th September 2024

ನಕಲಿ ಬಿತ್ತನೆ ಬೀಜ ತಡೆಗೆ ಕ್ರಮ ಅಗತ್ಯ

ಕರೋನಾ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ದಿನಗಳಲ್ಲಿ ರೈತರು ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಆದರೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರದ ಏರಿಕೆ ಹಾಗೂ ನಕಲಿ ಬಿತ್ತನೆ ಬೀಜಗಳ ಹಾವಳಿ ರೈತರನ್ನು ಕಂಗೆಡಿಸಿದೆ. ಈ ನಿಟ್ಟಿನಲ್ಲಿ ನಕಲಿ ಬಿತ್ತನೆ ಬೀಜಗಳ ತಡೆಗಾಗಿ ಬಹಳಷ್ಟು ಕ್ರಮಗಳನ್ನು ಕೈಗೊಳ್ಳಬೇಕಿರುವ ಅಗತ್ಯತೆ ಹೆಚ್ಚಿದೆ.

ಹಲವೆಡೆ ದಾಳಿ ನಡೆಸಿ ನಕಲಿ ಬಿತ್ತನೆ ಬೀಜಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಕೋಟ್ಯಂತರ ಮೌಲ್ಯದ ಕಳಪೆ ಬಿತ್ತನೆ ಬೀಜಗಳನ್ನು ವಶಪಡಿಸಿಕೊಳ್ಳ ಲಾಗುತ್ತಿದೆ. ಆದರೆ ಈ ಕ್ರಮ ಹೆಗ್ಗಳಿಕೆಯಲ್ಲ. ಪ್ರಸ್ತುತ ದಾಳಿಗಳಿಗಿಂತಲೂ ಆಮದು ತಡೆ ಬಹುಮುಖ್ಯ. ದೇಶದಲ್ಲಿನ ಅಡಕೆ ವ್ಯಾಪಾರಿಗಳ ಜಾಲವು ಇಂಡೋ ನೇಷ್ಯಾದಿಂದ ಕಳಪೆ ಗುಣಮಟ್ಟದ ಕಳಪೆ ಗುಣಮಟ್ಟದ ಅಡಕೆ ಆಮದುಮಾಡಿಕೊಳ್ಳುವ ದೇಶದ ಅಡಕೆ ಬೆಳೆಗಾರರ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿರುವ ಘಟನೆ ಬೆಳಕಿಗೆ ಬಂದಿದೆ. ಇದು ಕೇವಲ ಅಡಕೆ ಬೆಳೆಗಾರರಿಗೆ ಅನ್ವಹಿಸುವ ವಿಷಯವಲ್ಲ.

ಹಲವು ರೀತಿಯ ಬೆಳೆಗಾರರು ಕಳಪೆ ಬೀಜಗಳಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇಂಥ ಬೆಳವಣಿಗೆಯನ್ನು ತಡೆಗಟ್ಟಲು ಕಳಪೆ ಬೀಜಗಳ ಬಹಳಷ್ಟು ಸುರಕ್ಷತಾ ಕ್ರಮಗಳ ಅಗತ್ಯತೆ ಬಗ್ಗೆ ರೈತರಿಂದ ಕೂಗು ಕೇಳಿಬರಲಾರಂಭಿಸಿವೆ. ಇಂಥ ವೇಳೆಯಲ್ಲಿಯೇ ಕೆಲವು ದೇಶಗಳು ಆಮಿಷಗಳ ಮೂಲಕ ರೈತರಿಗೆ ಕಳಪೆ ಬೀಜಗಳನ್ನು ಪೂರೈಸಿ ಆರ್ಥಿಕ ದಿವಾಳತನ ಸೃಷ್ಟಿಸುವ ‘ಸೀಡ್ ಟೆರರಿಸಂ’ ತಡೆಗೂ ಅಗತ್ಯ ರೂಪುರೇಷೆಗಳನ್ನು ಸಿದ್ಧಪಡಿಸ ಬೇಕಿರುವುದು ಪ್ರಸ್ತುತದ ಬಹುಮುಖ್ಯ ಜವಾಬ್ದಾರಿ.