Thursday, 19th September 2024

ತಮಿಳುನಾಡಿನ ಒಗ್ಗಟ್ಟಿನ ಸೂತ್ರಕ್ಕೆ ಕರ್ನಾಟಕದ ಉತ್ತರವೇನು?

ಕರ್ನಾಟಕ – ತಮಿಳುನಾಡು ಎರಡು ರಾಜ್ಯಗಳಿಗೂ ಅನುಕೂಲವಾಗುವಂಥ ಮೇಕೆದಾಟು ಯೋಜನೆಯನ್ನು ತಮಿಳುನಾಡು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ರಾಜ್ಯ ದಿಂದ ತಮಿಳುನಾಡಿಗೆ ಯೋಜನೆಯ ಬಗ್ಗೆ ಬಹಳಷ್ಟು ಬಾರಿ ಅರ್ಥೈಸುವ ಪ್ರಯತ್ನಗಳು ನಡೆದರೂ, ಅವುಗಳು ಪ್ರಯತ್ನಗಳು ವಿಫಲವಾಗಿವೆ.

ವಿವಾದ ಬಗೆಹರಿಯದಿದ್ದರೆ ಯೋಜನೆ ಅನುಷ್ಠಾನದ ವಿಳಂಬ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇಂಥದೊಂದು ಬೆಳವಣಿಗೆಯಿಂದಾಗಿ ಮೇಕೆ ದಾಟು ಯೋಜನೆ ಮತ್ತೊಂದು ಕಾವೇರಿ ವಿವಾದದ ರೂಪವಾಗಿ ಗೋಚರಿಸುತ್ತಿದೆ. ಇಂಥ ಸಂದರ್ಭದಲ್ಲಿ ರಾಜ್ಯವು ಸಮಸ್ಯೆ ಇತ್ಯರ್ಥಕ್ಕಾಗಿ ಯಾವ ರೀತಿಯ ಪ್ರಯತ್ನ ನಡೆಸಲಿದೆ ಎಂಬುದು ಬಹುಮುಖ್ಯವಾದ ಸಂಗತಿ. ಮೇಕೆದಾಟು ಯೋಜನೆ ಅನುಷ್ಠಾನವನ್ನು ವಿರೋಽಸುವ ನಿಟ್ಟಿನಲ್ಲಿ ತಮಿಳುನಾಡಿನ 13 ಪಕ್ಷಗಳು ಒಟ್ಟಾಗಿ ಸಮಾಲೋಚಿಸಿವೆ.

ವಿರೋಧ ವ್ಯಕ್ತಪಡಿಸಿರುವುದರ ಜತೆಗೆ ಕಾನೂನು ಹೋರಾಟದ ಬಗ್ಗೆಯೂ ಗಂಭೀರ ಸಮಾಲೋಚನೆ ನಡೆಸಿವೆ. ತಮಿಳು ನಾಡಿನಲ್ಲಿ ನಡೆದಿರುವ ಇಂಥದೊಂದು ಬೆಳವಣಿಗೆಗೆ ಕರ್ನಾಟಕ ರಾಜ್ಯದ ಉತ್ತರವೇನು ಎಂಬುದು ಮುಖ್ಯವಾದ ವಿಚಾರ. ರೈತರ ಹೆಸರಿನಲ್ಲಿ ಬಹಳಷ್ಟು ಹೇಳಿಕೆಗಳನ್ನು ನೀಡುವ ಮೂರು ಪಕ್ಷಗಳು ಮೇಕೆದಾಟಿನ ವಿಚಾರದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸದೆ ಕೇವಲ ಹೇಳಿಕೆಗಳಿವೆ ಸೀಮಿತವಾದವೇ ಎಂಬುದು ಚಿಂತನಾರ್ಹ ಸಂಗತಿ. ತಮಿಳುನಾಡಿನ ಹಲವು ಪಕ್ಷಗಳು ಪಕ್ಷರಾಜಕಾರಣ ಮರೆತು ಮೇಕೆದಾಟು ಯೋಜನೆ ವಿರೋಧಿಸಲು ಹಲವು ನಿರ್ಣಯಗಳನ್ನು ಕೈಗೊಳ್ಳುತ್ತಿರುವ ಈ ವೇಳೆಯಲ್ಲಿ ರಾಜ್ಯದಲ್ಲಿನ ಪಕ್ಷಗಳು ಯೋಜನೆಯ ಅನುಷ್ಠಾನಕ್ಕಾಗಿ ಯಾವ ರೀತಿ ಪ್ರಯತ್ನಗಳು ನಡೆಸುತ್ತಿವೆ ಎಂಬುದು ಚಿಂತನಾರ್ಹ ಸಂಗತಿ.

ರಾಜ್ಯದ ರಾಜಕಾರಣಿಗಳು ರಾಜ್ಯದ ಜನತೆ ಈ ಬಗ್ಗೆ ಉತ್ತರಿಸಬೇಕಾದ ಅಗತ್ಯವಿದೆ. ರೈತಪರ ಎಂದು ಘೋಷಿಸಿಕೊಳ್ಳುವ ರಾಜ್ಯದ ಯಾವುದೇ ಪಕ್ಷವಾದರೂ ಮೇಕೆದಾಟು ಅನುಷ್ಠಾನದ ವಿಚಾರದಲ್ಲಿ ತನ್ನ ಪಾತ್ರವೇನು ಎಂಬುದನ್ನು ಸ್ಪಷ್ಟಪಡಿಸಬೇಕಿದೆ.