Wednesday, 11th December 2024

‘ವಾರಿಸ್ ಪಂಜಾಬ್ ದೇ’ ಈಗಲೇ ಚಿವುಟಿ ಹಾಕಿ

ಸ್ವಯಂಘೋಷಿತ ಧರ್ಮಬೋಧಕ ಮತ್ತು ಪ್ರತ್ಯೇಕ ಖಾಲಿಸ್ಥಾನ ರಾಷ್ಟ್ರದ ಪ್ರತಿಪಾದಕ ಅಮೃತ್ ಪಾಲ್ ಸಿಂಗ್ ಪತ್ತೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿರುವಾಗಲೇ ಬುಧವಾರ ವಿಡಿಯೋವೊಂದನ್ನು ಹರಿಬಿಟ್ಟಿ ರುವ ಅಮೃತ್ ಪಾಲ್ ಸಿಂಗ್, ‘ಪಂಜಾಬ್ ಸರಕಾರವು ತಮ್ಮನ್ನು ಬಂಧಿಸುವ ಉದ್ದೇಶ ಹೊಂದಿದ್ದರೆ ನನ್ನ ಮನೆಗೆ ಬರಬಹುದಿತ್ತು. ನಾನು ಶರಣಾಗುತ್ತಿದೆ’ ಎಂದು ಹೇಳಿದ್ದಾನೆ.

ಈ ಹೇಳಿಕೆಯು ಪಂಜಾಬ್ ಸರಕಾರ ಮತ್ತು ಅಲ್ಲಿನ ಪೊಲೀಸರ ಮೇಲೆಯೇ ಅನುಮಾನ ಹುಟ್ಟುವಂತೆ ಮಾಡಿದೆ. ‘ಅಲ್ಲಿನ ಸರಕಾರ ಮತ್ತು ಪೊಲೀಸರೇ ಅಮೃತ್ ಪಾಲ್ ಸಿಂಗ್‌ಗೆ ಬೆಂಬಲ ನೀಡುತ್ತಿದ್ದಾರೆ’ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಈ ಹಿಂದೆ ವಾರಿಸ್ ಪಂಜಾಬ್ ದೇ ಸಂಘಟನೆ ಯ ಕೆಲವರನ್ನು ಬಂಧಿಸುವಾಗ ಅಮೃತ್ ಪಾಲ್ ಸಿಂಗ್ ಅಚ್ಚರಿಯ ರೀತಿಯಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದು ಕೂಡ ಹಲವು ಅನುಮಾನ ಗಳಿಗೆ  ಎಡೆ ಮಾಡಿಕೊಟ್ಟಿತ್ತು. ಇದೀಗ ಈ ಹೊಸ ವಿಡಿಯೋ ಸರಕಾರವನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ.

ಪಂಬಾಬ್‌ನಲ್ಲಿ ಖಾಲಿಸ್ತಾನ ಪರಿಕಲ್ಪನೆಯನ್ನು ಒಪ್ಪುವ ಜನರು ವಿರಳ ಸಂಖ್ಯೆಯಲ್ಲಿದ್ದರೂ ಆಡಳಿತದ ಆಯಕಟ್ಟಿನ ಸ್ಥಳಗಳಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲಿನ ಹಲವು ರಾಜಕಾರಣಿಗಳು, ಪೊಲೀಸರೇ ಪ್ರತ್ಯೇಕ ಖಾಲಿಸ್ತಾನ ಪರಿಕಲ್ಪನೆ ಪೋಷಿಸುತ್ತಿದ್ದಾರೆ ಎಂದೂ ಹೇಳಲಾಗು ತ್ತಿದೆ. ಇದು ನಿಜವೇ ಆದಲ್ಲಿ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಪಂಜಾಬ್ ಪಾಕಿಸ್ತಾನದ ಜತೆಗೆ ಗಡಿಯನ್ನು ಹಂಚಿಕೊಂಡಿರುವುದರಿಂದ ಗಡಿಯಾಚೆ ಯಿಂದ ಉಗ್ರರು ಒಳನುಸುಳುವ ಅಪಾಯ ಇದೆ. ಅಮೃತ್ ಪಾಲ್ ಮತ್ತು ಅವರ ಜತೆಗಾರರು ಪಾಕಿಸ್ತಾನದಲ್ಲಿ ಆಶ್ರಯ ಕೋರುವ ಸಾಧ್ಯತೆಯೂ ಇದೆ. ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿ ಇರುವ ಖಾಲಿಸ್ತಾನ ಬೆಂಬಲಿ ಗರು ಶಸ್ತ್ರಾಸ್ತ್ರ -ಮಾದಕ ಪದಾರ್ಥ ವ್ಯಾಪಾರ ಜಾಲವನ್ನು ಬಳಸಿಕೊಂಡು ಉಗ್ರವಾದಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ.

ಆದ್ದರಿಂದ ಕೇಂದ್ರ ಸರಕಾರವೇ ಇದರಲ್ಲಿ ಮುತುವರ್ಜಿ ವಹಿಸಬೇಕಾದ ಅಗತ್ಯವಿದೆ. ವಾರಿಸ್ ಪಂಜಾಬ್ ದೇ ಸಂಘಟನೆಯೊಂದಿಗೆ ನಂಟು ಹೊಂದಿರುವ ರಾಜಕಾರಣಿಗಳು ಮತ್ತು ಪೊಲೀಸರನ್ನು ಗುರುತಿಸಬೇಕಿದೆ. ಆ ಮೂಲಕ ಬೆಳೆದು ಹೆಮ್ಮರವಾಗುವ ಮೊದಲೇ ಉಗ್ರ ಸಂಘಟನೆಯೊಂದನ್ನು ಚಿವುಟಿ ಹಾಕಬೇಕಿದೆ.

Read E-Paper click here