Thursday, 19th September 2024

ಮಹಿಳಾ ಕ್ರಿಕೆಟ್‌ಗೆ ದೊರೆಯಲಿ ಮತ್ತಷ್ಟು ಮನ್ನಣೆ

ಜಾಗತಿಕ ಮಟ್ಟದಲ್ಲಿ ಅತ್ಯಂತ ಖ್ಯಾತಿಗೆ ಪಾತ್ರವಾಗಿರುವ ಕ್ರೀಡೆ ಕ್ರಿಕೆಟ್. ಇಂಥ ಮಹತ್ವದ ಕ್ರೀಡಾ ಕ್ಷೇತ್ರಕ್ಕೆ ಭಾರತದ ಕೊಡುಗೆಯೂ ಮಹತ್ವದ್ದು. ಕ್ರಿಕೆಟ್ ಕ್ಷೇತ್ರದ ಆರಾಧ್ಯ ದೈವ ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಪ್ರತಿಭಾನ್ವಿತರನ್ನು ಕ್ರೀಡಾ ಜಗತ್ತಿಗೆ ಕೊಡುಗೆಯಾಗಿ
ನೀಡಿದ್ದ ಭಾರತ, ಇದೀಗ ಮಹಿಳಾ ಕ್ರಿಕೆಟ್ ಕ್ಷೇತ್ರಕ್ಕೂ ಅನೇಕ ಪ್ರತಿಭಾನ್ವಿತರನ್ನು ಕೊಡುಗೆಯಾಗಿ ನೀಡಿದೆ.

ಕ್ರಿಕೆಟ್‌ನಿಂದಾಗಿ ದೇಶಿಯ ಆಟಗಳು ಸೊರಗಿವೆ ಎಂಬಂಥ ಅಪವಾದಗಳು ಕೇಳಿಬಂದರೂ, ಕ್ರಿಕೆಟ್ ಕೂಡ ಜಾಗತಿಕವಾಗಿ ಭಾರತದ ಹಿರಿಮೆಯನ್ನು ಹೆಚ್ಚಿಸಿದೆ.
ಭಾರತೀಯ ಕ್ರಿಕೆಟ್ ಎಂದೊಡನೆ ತಟ್ಟನೆ ನೆನಪಾಗುವುದು ಭಾರತೀಯ ಪುರುಷರ ತಂಡ. ಆದರೆ ಮಹಿಳಾ ತಂಡವೂ ಸಾಧನೆಯಲ್ಲಿ ಹಿಂದುಳಿದಿಲ್ಲ. ಇಂದು ಭಾರತೀಯ ಮಹಿಳಾ ತಂಡದ ಸಾಧನೆ ಅತ್ಯುತ್ತಮ ಹಾದಿಯಲ್ಲಿ ಸಾಗುತ್ತಿದೆ. ವಲ್ಡ್ ಕಪ್ ನಲ್ಲಿಯೂ ಉತ್ತಮ ಪ್ರದರ್ಶನವನ್ನು ನೀಡಿ ತನ್ನ ಸಾಮರ್ಥ್ಯದ ಬಗ್ಗೆ ಭರವಸೆ ಮೂಡಿಸುವಲ್ಲಿ ಯಶಸ್ವಿಗೊಂಡಿದೆ.

ಶ್ರೇಯಾಂಕ ಗಳಿಕೆಯಲ್ಲಿಯೂ ಗಮನ ಸೆಳೆದಿದ್ದು, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ನಂತರ ನಾಲ್ಕನೆ ಸ್ಥಾನದಲ್ಲಿದೆ ಭಾರತದ ಮಹಿಳಾ ತಂಡ. ತಂಡದ ನಾಯಕಿಯ ಸಾಧನೆಯೂ ಶ್ಲಾಘನೀಯವಾಗಿದೆ. ಮಹಿಳಾ ತಂಡದ ನಾಯಕಿ ಮಿಥಾಲಿರಾಜ್ ಕೂಡ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ೧೦ ಸಾವಿರ ರನ್ ಗಳಿಸಿ ಭಾರತದ ಕೀರ್ತಿ ಹೆಚ್ಚಿಸಿದ್ದಾರೆ. ಮಹಿಳಾ ಕ್ರಿಕೆಟ್ ನ ಎಲ್ಲಾ ಪಾರ್ಮ್ಯಾಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪ್ರಥಮ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ಮಿಥಿಲಿ ರಾಜ್. ಈಕೆ ಭಾರತ ತಂಡದ ನಾಯಕಿ ಎಂಬುದು ಮತ್ತೊಂದು ಹೆಮ್ಮೆ.

ಇಂಗ್ಲೆಂಡ್‌ನ ಮಾಜಿ ಆಟಗಾರ್ತಿ ಚಾರ್ಲೋಟ್ ಎಡ್ವರ್ಡ್ಸ್‌ನ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು ಹೊಸದೊಂದು ದಾಖಲೆಗೆ ಪಾತ್ರವಾಗಿದ್ದಾರೆ ಮಿಥಾಲಿ ರಾಜ್. ಇಂಥ ಕ್ರೀಡಾಪಟುಗಳನ್ನು ಹೊಂದುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹೊಸದೊಂದು ಭರವಸೆಯನ್ನು ಮೂಡಿಸುವಲ್ಲಿ ಯಶಸ್ಸು ಸಾಧಿಸಿದೆ. ಪುರುಷ ಕ್ರಿಕೆಟ್‌ಗೆ ದೊರೆಯುತ್ತಿರುವಷ್ಟು ಮನ್ನಣೆ, ಜನಪ್ರಿಯತೆ ಮಹಿಳಾ ಕ್ರಿಕೆಟ್‌ಗೆ ದೊರೆಯದಿದ್ದರೂ, ಸಾಧನೆಯ ವಿಚಾರದಲ್ಲಿ ಭಾರತದ ತಂಡ ಉತ್ತಮ ಹೆಜ್ಜೆಗುರುತನ್ನು ಮೂಡಿಸುತ್ತಿರುವುದು ಶ್ಲಾಘನಾರ್ಹ ಸಂಗತಿ.