Thursday, 19th September 2024

ಪರಿಹಾರ ಪರಿಷ್ಕರಣೆ ಜತೆಗೆ ಸಮಗ್ರ ಯೋಜನೆ ಜಾರಿ ಅವಶ್ಯ

ವಿಧಾನಸಭೆಯ ಕಾರ್ಯಕಲಾಪದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತಮ ಸಲಹೆಯೊಂದನ್ನು ನೀಡಿದ್ದಾರೆ. ಕಾಡು
ಪ್ರಾಣಿಗಳಿಂದ ಬೆಳೆ ಹಾನಿಯಾಗಿರುವ ಪ್ರಮಾಣದಷ್ಟು ಪರಿಹಾರ ನೀಡಬೇಕೆಂದು ತಿಳಿಸಿದ್ದಾರೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವನ್ಯಜೀವಿ ಸಂಘರ್ಷಗಳು ಕಂಡುಬರುತ್ತಿದ್ದು, ಇದರಿಂದ ಬೆಳೆಹಾನಿ ಸಂಭವಿಸುತ್ತಿದೆ. ಕೆಲವೆಡೆ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ದೊರೆಯದೆ ಸಂಕಷ್ಟದ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಮಸ್ಯೆ ತಪ್ಪಿಸಲು ರೈತರು ವಿದ್ಯುತ್ ಬೇಲಿ, ಕಂದಕಗಳ ನಿರ್ಮಾಣದಂಥ ಅವೈಜ್ಞಾನಿಕ ಕ್ರಮಗಳನ್ನು ಅನುಸರಿಸುತ್ತಿರುವುದು ಸಹ ಕಂಡುಬರುತ್ತಿದೆ.

ರೈತರಿಂದ ಅಗಾಗ್ಗೆ ಬೆಳೆ ಹಾನಿ ಪರಿಹಾರ ಪರಿಷ್ಕರಣೆ ಬಗ್ಗೆ ಮನವಿಗಳು ಕೇಳಿಬರುತ್ತಿರುವ ಈ ವೇಳೆಯಲ್ಲಿ ಕೇವಲ ಪರಿಹಾರದ ಪರಿಷ್ಕರಣೆ ಮಾತ್ರವೇ ಮುಖ್ಯವಾಗದೆ, ಸಮಸ್ಯೆ ನಿವಾರಣೆಗಾಗಿ ಸಮಗ್ರ ಯೋಜನೆಯೊಂದನ್ನು ರೂಪಿಸುವ ಅಗತ್ಯವಿದೆ.
ಕೈಗಾರಿಕೆಗಳ ಸ್ಥಾಪನೆ, ನಗರೀಕರಣ ಹಾಗೂ ಆರ್ಥಿಕ ಅನುಕೂಲಕ್ಕಾಗಿ ರೆಸಾರ್ಟ್‌ಗಳ ಸ್ಥಾಪನೆಗಳಿಂದಾಗಿ ಅರಣ್ಯಭೂಮಿ ಸಂಕುಚಿತಗೊಳ್ಳುತ್ತಾ ಸಾಗುತ್ತಿದೆ.

ಕಾಡುಗಳ ಅತಿಕ್ರಮಣ ಹಾಗೂ ನಾಶದಿಂದಾಗಿ ಪ್ರಾಣಿಗಳು ಮತ್ತು ಮಾನವರ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಈ ರೀತಿ ಪರಿಸರದಲ್ಲಿ ಅಸಮತೋಲನ ಕಂಡುಬರುತ್ತಿರುವುದರಿಂದ ಪ್ರಾಣಿಗಳು ಆಹಾರ ಅರಸಿ ನಾಡಿಗೆ ನುಗ್ಗುತ್ತಿರುವ ಬೆಳವಣಿಗೆಗಳು ಅಗಾಗ್ಗೆ ಕಂಡುಬರುತ್ತಿವೆ.

ಒಂದು ಕಾಡಿನ ತುದಿಯಿಂದ ಇನ್ನೊಂದು ಕಾಡಿನ ಆರಂಭವಾಗುತ್ತಿತ್ತು. ಆದರೆ ಇಂದು ಸಂಪರ್ಕ ಕೊಂಡಿಗಳೇ ಕಾಣೆಯಾಗು ತ್ತಿವೆ. ಕಾಡು ಪ್ರಾಣಿಗಳು ಆಗಾಗ್ಗೆ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳಲು ಇದು ಸಹ ಪ್ರಮುಖ ಕಾರಣ. ಕೆಲವು ಜಿಲ್ಲೆಗಳಲ್ಲಿ ಆನೆಗಳ ಹಾವಳಿ ಕಂಡುಬರುತ್ತಿರುವುದು ಇದೇ ಸಮಸ್ಯೆಯ ಒಂದು ಭಾಗ. ಆದ್ದರಿಂದ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಸಮಗ್ರ ಯೋಜನೆ ರೂಪಿಸಬೇಕಿರುವುದು ಅವಶ್ಯ.