Friday, 26th July 2024

ಬರಬೇಡ ಎಂದವರೇ ಕೈಮುಗಿದು ಕರೀತಿದಾರೆ

ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು

ಬೆಂಗಳೂರಿನಲ್ಲಿ ಇರುವವರ ಮನವೊಲಿಕೆಗೆ ಕಸರತ್ತು

ಗ್ರಾಪಂ ಚುನಾವಣೆಯಲ್ಲಿ ಇವರೇ ನಿರ್ಣಾಯಕ

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬುದು ಇದಕ್ಕೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಲಾಕ್‌ಡೌನ್ ನಿಂದ ಕಂಗೆಟ್ಟು ಹಳ್ಳಿಯ ಕಡೆಗೆ ಬರುವವರಿಗೆ ದಿಗ್ಬಂಧನ ಹಾಕಿದ್ದ ಹಳ್ಳಿಗರೇ ಇಂದು ನಗರವಾಸಿಗಳಿಗೆ ರೆಡ್ ಕಾರ್ಪೆಟ್ ಹಾಕಿ ಊರಿಗೆ ಕರೆಯು ತ್ತಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಕರೋನಾ ಇದೆ, ಊರಿಗೆ ಬರಬೇಡ ಎಂದರೆ ಈಗ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಬರುವಂತೆ ದುಂಬಾಲು ಬೀಳುತ್ತಿದ್ದಾರೆ. ಇದಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡುವ ಭರವಸೆಯನ್ನು ನೀಡುತ್ತಿದ್ದಾರೆ. ಹಳ್ಳಿಗಳಿಂದ ತಂಡೋಪತಂಡವಾಗಿ ಬಂದು, ನಗರದಲ್ಲಿರುವವರ ಮನೆಗಳಿಗೆ ತೆರಳಿ, ಮತದಾನದ ದಿನ ಮರೆ ಯದೆ ಬರುವಂತೆ ಮನವೊಲಿಕೆ ಮಾಡುತ್ತಿದ್ದಾರೆ. ಇದಕ್ಕಾಗಿ ವಾಹನ ವ್ಯವಸ್ಥೆ, ಬಸ್ ಚಾರ್ಜ್ ವ್ಯವಸ್ಥೆಯನ್ನು ಮಾಡಿಕೊಡು ತ್ತಿದ್ದಾರೆ.

ಇತರ ಗ್ರಾಮದ ಜನರಿಗೆ ನಿಷೇಧ: ಕರೋನಾ ಲಾಕ್‌ಡೌನ್ ಆರಂಭದಲ್ಲಿ ಅನೇಕ ಹಳ್ಳಿಗಳಲ್ಲಿ ಬೆಂಗಳೂರಿನಿಂದ ಬಂದವರನ್ನು ಊರಿಗೆ ಸೇರಿಸದಂತೆ ತಾಕೀತು ಮಾಡಿದ್ದರು. ಅನೇಕ ಹಳ್ಳಿಗಳಲ್ಲಿ ಬೆಂಗಳೂರಿನಿಂದ ಬಂದವರನ್ನು ಮನೆಗಳಿಗೆ ಸೇರಿಸಿದರೆ
5 ಸಾವಿರ ರು. ದಂಡ ವಿಧಿಸುವಂತೆ ಫರ್ಮಾನು ಹೊರಡಿಸಿದ್ದರು. ಅನೇಕ ಹಳ್ಳಿಗಳಲ್ಲಿ ಗ್ರಾಮ ಪಂಚಾಯತಿಗಳೇ ಗ್ರಾಮಕ್ಕೆ  ವಾಹನ ನಿಷೇಧ, ಇತರ ಗ್ರಾಮದ ಜನರ ನಿಷೇಧ ಮಾಡಿದ್ದರು. ಗ್ರಾಮಸ್ಥರೇ ಕಾವಲು ಕಾಯುವ ಮೂಲಕ ಬೇರೆ ಹಳ್ಳಿಗಳ ಜನ ರನ್ನು ಕಾವಲು ಕಾಯುತ್ತಿದ್ದರು. ಅದರಲ್ಲೂ ಬೆಂಗಳೂರು ಮತ್ತು ಮುಂಬೈನಿಂದ ಬಂದ ಜನರನ್ನು ಅಪರಾಧಿಗಳಂತೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದೀಗ ಪರಿಸ್ಥಿತಿ ಬದಲಾಗಿದ್ದು, ಡಿ.22 ಮತ್ತು 27ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಮತದಾನ ನಡೆಯುವ ಭಾಗಗಳ ಅಭ್ಯರ್ಥಿಗಳು ಈಗಾಗಲೇ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಊರಿಂದ ಹೋಗಿ ವಿವಿಧ ನಗರಗಳಲ್ಲಿ ವಾಸವಾಗಿರುವವರನ್ನು ಮತದಾನದ ದಿನ ಕರೆತರುವ ಪ್ರಯತ್ನ ಜೋರಾಗಿ ನಡೆಯುತ್ತಿದೆ. ಮನೆಯವರ
ಬಳಿ ದುಂಬಾಲು ಬಿದ್ದು, ಫೋನ್ ನಂಬರ್ ಪಡೆದು, ಅವರಿಗೆ ಈಗಾಗಲೇ ಕರೆ ಮಾಡಿ ‘ಬಂದು ಮತದಾನ ಮಾಡುವಂತೆ’ ಮನವಿ ಮಾಡುತ್ತಿದ್ದಾರೆ. ಜತೆಗೆ, ತಮ್ಮ ಮನೆಯವರಿಗೆಲ್ಲ ಮತ ಹಾಕುವಂತೆ ಹೇಳುವಂತೆಯೂ ಶಿಫಾರಸು ಮಾಡುತ್ತಿದ್ದಾರೆ.

ದಂಡ ಹಾಕಿದವರಿಂದಲೇ ದೀರ್ಘದಂಡ
ಕರೋನಾ ಹೆಚ್ಚಳವಾಗುತ್ತಿದ್ದ ಸಂದರ್ಭದಲ್ಲಿ ಗ್ರಾಮಗಳಿಗೆ ಬೆಂಗಳೂರಿನಿಂದ ಬಂದವರಿಗೆ ಅನೇಕ ಕಡೆ ದಂಡ ವಿಧಿಸಿದ ಪ್ರಕರಣ ಗಳು ಬೆಳಕಿಗೆ ಬಂದಿದ್ದವು. ತಮ್ಮ ಮಕ್ಕಳು ಊರಿಗೆ ಬಂದ ಬಗ್ಗೆ ಮಾಹಿತಿ ನೀಡಿದೆ ಇದ್ದಾರೆ ಎಂಬ ಕಾರಣಕ್ಕೆ ಅನೇಕ ಪೋಷಕರಿಗೆ ಗ್ರಾಮಗಳ ಮುಖಂಡರು ದಂಡ ವಿಧಿಸಿದ್ದರು. ಅನಿವಾರ್ಯವಾಗಿ ಕೆಲವರು ಸಾಮಾಜಿಕ ಸಾಮರಸ್ಯದ ದೃಷ್ಟಿಯಿಂದ ದಂಡ ಕಟ್ಟಿ ಸುಮ್ಮನಾಗಿದ್ದರು.

ಇದೀಗ ಅಂತಹ ದಂಡ ವಿಧಿಸಿದ ಮುಖಂಡರೇ ಬೆಂಗಳೂರಿನಿಂದ ಬಂದು ಮತ ಹಾಕುವಂತೆ ದೀರ್ಘದಂಡ ಹಾಕುತ್ತಿದ್ದಾರೆ. ‘ನಿಮ್ಮ ಮನೆಯವರಿಗೆಲ್ಲ ಹೇಳಿ ಒಂಚೂರು ನಮಗೆ ಮಾಡ್ಸಪ್ಪ, ಬೆಂಗ್ಳೂರಲ್ಲಿ ಎಲ್ಲಿದ್ದೀಯಾ ಹೇಳಪ್ಪ, ನಿಮ್ಮನೆ ಹತ್ರನೇ ಬತ್ತಿನಿ’ ಎಂದು ಪ್ರತಿದಿನ ಕರೆ ಮಾಡುತ್ತಿದ್ದಾರೆ. ಸ್ನೇಹಿತರ ಜತೆ ಕರೆ ಮಾಡಿಸಿ ಪ್ರತಿದಿನ ನೆನಪು ಮಾಡಿಕೊಡುವ ಕಾರ್ಯವೂ ನಡೆಯು ತ್ತಿದೆ.

ಜಾಲತಾಣದಲ್ಲಿ ಟ್ರೋಲ್
ಗ್ರಾಮ ಪಂಚಾಯತಿ ಚುನಾವಣೆಯ ಈ ಟ್ರೆಂಡ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಕೂಡ ಆಗುತ್ತಿದೆ. ಕರೋನಾ ವೇಳೆ ಯಲ್ಲಿ ಸ್ನೇಹಿತರೇ ಊರಿಗೆ ಬರುತ್ತೇವೆ ಎಂದರೆ ಮೂಗು ಮುರಿಯುತ್ತಿದ್ದರು. ಈಗ ಕರೋನಾ ಇದ್ರೂ ಪರವಾಗಿಲ್ಲ ಬಂದು ವೋಟ್ ಹಾಕೋದು ಮಿಸ್ ಮಾಡಬೇಡ ಗೆಳೆಯ ಅನ್ನೋ ಟ್ರೆಂಡ್ ಹೆಚ್ಚಾಗುತ್ತಿದೆ. ಅಂದು ನಮ್ಮನ್ನು ಅವಮಾನಿಸುತ್ತಿದ್ದವರೇ ಇಂದು ರಾಜಮರ್ಯಾದೆಯಿಂದ ಕರೆಯುತ್ತಿದ್ದಾರೆ ಎಂದು ಅನೇಕ ಯುವಕರು ಟ್ರೋಲ್ ಮಾಡುತ್ತಿದ್ದಾರೆ.

ಎಂದೂ ಮಾತನಾಡದ ವ್ಯಕ್ತಿಯೊಬ್ಬ ತಮ್ಮನ್ನು ಪದೇಪದೆ ಮಾತನಾಡಿಸುವುದು, ಎಂದೂ ಕರೆ ಮಾಡದ ವ್ಯಕ್ತಿಯೊಬ್ಬ ಕರೆ ಮಾಡುತ್ತಿದ್ದಂತೆ ಇದು ಗ್ರಾಮ ಪಂಚಾಯತಿ ಎಫೆಕ್ಟ್‌ ಎಂಬುದು ಗೊತ್ತಾಗುತ್ತದೆ ಎಂಬ ಟ್ರೋಲ್‌ಗಳು ಜಾಲತಾಣಗಳಲ್ಲಿ ಹರಿ ದಾಡುತ್ತಿವೆ.

*ಡಿ.22 ಮತ್ತು 27ರಂದು ಎರಡು ಹಂತದಲ್ಲಿ ಮತದಾನ
*ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಬರುವಂತೆ ದುಂಬಾಲು
*ಹಳ್ಳಿಗಳಿಂದ ತಂಡೋಪತಂಡವಾಗಿ ಬಂದು, ನಗರದಲ್ಲಿರುವವರ ಮನೆಗಳಿಗೆ ತೆರಳಿ, ಮತದಾನದ ದಿನ ಮರೆಯದೆ ಬರುವಂತೆ
ಮನವೊಲಿಕೆ
*ಬೆಂಗ್ಳೂರಲ್ಲಿ ಎಲ್ಲಿದ್ದೀಯಾ ಹೇಳಪ್ಪ, ನಿಮ್ಮನೆ ಹತ್ರನೇ ಬತ್ತಿನಿ’ ಎಂದು ಪ್ರತಿದಿನ ಕರೆ, ಸ್ನೇಹಿತರಿಂದ ಪ್ರತಿದಿನ ಕರೆ ಮಾಡಿಸುವುದು
*ಕರೋನಾ ಇದ್ರೂ ಪರವಾಗಿಲ್ಲ ಬಂದು ವೋಟ್ ಹಾಕೋದು ಮಿಸ್ ಮಾಡಬೇಡ ಗೆಳೆಯ ಅನ್ನೋ ಟ್ರೆಂಡ್

Leave a Reply

Your email address will not be published. Required fields are marked *

error: Content is protected !!