Tuesday, 28th May 2024

ಮಕ್ಕಳ ಬಗ್ಗೆ ಎಲ್ಲವೂ ನೆನಪಿರುತ್ತಿತ್ತು

ಡಾ.ಪರಮೇಶ್, ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ

ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಮಾಹಾಸ್ವಾಮೀಜಿಯವರ ಆಪ್ತ ವೈದ್ಯನಾಗಿ ಅವರ ಸೇವೆ ಸಲ್ಲಿಸುವ ಸಮಯದಲ್ಲಿ ಡಾ. ಪರಮೇಶ್ ಅವರಿಗೆ, ಗುರುಗಳ ಆಶೀರ್ವಾದ, ಅವರ ದೃಷ್ಟಿ ಕೋನ ಅವರ ದಾಸೋಹ ತತ್ವಗಳ ನಿತ್ಯಾನುಷ್ಠಾನವನ್ನು ನೋಡುವ ಭಾಗ್ಯ ಸಿಕ್ಕಿತ್ತು. ಅವರ ದಿವ್ಯಾನುಭವದ ಒಂದಷ್ಟು ನೆನಪುಗಳನ್ನ ತುಂಬಿ ಬರೆದಿರುವ ‘ಮಹಾಬಯಲು’ ಪುಸ್ತಕ, ಈಗ ಸಂಚಿಕೆ ರೂಪದಲ್ಲಿ ‘ವಿಶ್ವವಾಣಿ’ ದಿನ ಪತ್ರಿಕೆಯಲ್ಲಿ ಇನ್ನು ಮುಂದೆ ಪ್ರತಿ ಗುರುವಾರ ಪ್ರಕಟವಾಗುತ್ತಿದೆ.

ಶ್ರೀಗಳನ್ನು ನೋಡಲು ಮಠದ ಜಾತ್ರೆಗೆ ಹೋಗಬೇಕೆಂದರೆ ಅದು ನಮಗೊಂದು ಹಬ್ಬ. ನಾವು ಚಿಕ್ಕ ವಯಸ್ಸಿನಿಂದ ಮಠದ ಜಾತ್ರೆಗೆ ಯಾವತ್ತಿಗೂ ಹೋಗದೇ ಉಳಿಯುತ್ತಿರಲಿಲ್ಲ. ಪ್ರತಿ ಬಾರಿಯೂ ಅಜ್ಜಿಯ ಜೊತೆಗೆ ನಾನು ನನ್ನ ತಮ್ಮ, ನನ್ನ ಅಕ್ಕ ಹಾಗೂ ತಂಗಿ ಜಾತ್ರೆಗೆ ಹೋಗುತ್ತಿದ್ದೆವು. ನಮ್ಮ ತಂದೆಯವರೂ ಅಷ್ಟೆ, ಜಾತ್ರೆ ಆರಂಭವಾಗುವ ವಾರಕ್ಕೂ ಮುನ್ನವೇ ಮಠಕ್ಕೆ ತೆರಳಿ ಜಾತ್ರೆಯ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು.

ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆ ಅಂದರೆ ಸಾಕು ಇವತ್ತಿಗೂ ಮಠದ ಆವರಣದಲ್ಲಿನ ಭಾರೀ ದನಗಳು ನೆನಪಾಗುತ್ತೆ. ಪುರಿ ಖಾರ, ಚಕ್ಕುಲಿ, ಜಿಲೇಬಿ, ರಾಟೆ ಎಲ್ಲವೂ ಕಣ್ಮುಂದೆ ಬರುತ್ತದೆ. ದನಗಳಿಗೆ ಮಾಡುತ್ತಿದ್ದ ಸಿಂಗಾರ, ಅವುಗಳು ಜಾತ್ರೆಗೆ ಆಗಮಿಸುತ್ತಿದ್ದಾಗ ಕಾಣಿಸುತ್ತಿದ್ದ ಎತ್ತುಗಳ ಗಂಭೀರ ನಡಿಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಇಡೀ ಮಠದ ಅಷ್ಟೂ ಜಾಗ ಗೋವುಗಳಿಂದ ತುಂಬಿ ತುಳುಕುತ್ತಿತ್ತು. ರೈತರ ಜೊತೆಗೆ ವರ್ಷಪೂರ್ತಿ ಗಾಣದಲ್ಲಿ ತಿರುಗಿ, ಗದ್ದೆಯನ್ನ ತುಳಿದು, ಹೊಲವನ್ನ ಹಸನು ಮಾಡಿದ್ದ ಗೋವುಗಳಿಗೆ ಜಾತ್ರೆ ನಡೆಯುವ ಅಷ್ಟೂ ದಿನಗಳ ಕಾಲ ಒಂದು ಚಿಕ್ಕ ಬಿಡುವು ಸಿಗುತ್ತಿತ್ತು. ಒಂದೂರಿನಿಂದ ಬಂದು ಇನ್ನೊಂದೂರಿನ ರೈತನ ಮನೆಗೆ ಮಾರಾಟವಾಗಿ ಹೋಗುವಾಗ ರೈತರು ಗೋವಿನ ಪಾದಕ್ಕೆ ನಮಿಸಿ ಹೋದ ಮನೆಯಲ್ಲಿ ‘ನಮ್ಮ ಮನೆಯಂತೆಯೇ ಬಿತ್ತಿ ಬೆಳೆಯವ್ವಾ ಅವ್ವಾ’ ಎಂದು ಸಣ್ಣ ಸಂಕಟದಿಂದಲೇ ಕಳುಹಿಸು ತ್ತಿದ್ದರು.

ಭಾರೀ ದನಗಳನ್ನ ಸಾಕುವುದು ಅವುಗಳನ್ನ ಜಾತ್ರೆಯಲ್ಲಿ ಪ್ರದರ್ಶಿಸೋದು ಅದನ್ನ ಮಾರಾಟ ಮಾಡೋದು ರೈತರು ತಮ್ಮ ಪ್ರತಿಷ್ಠೆಯಂದೇ ಭಾವಿಸುತ್ತಿದ್ದರು. ಈಗಲೂ ಅದು ಚಾಲ್ತಿಯಲ್ಲಿದೆ. ಪ್ರತಿ ಬಾರಿ ಜಾತ್ರೆಗೆ ಹೋಗಿ ಶ್ರೀಗಳನ್ನು ಕಂಡ ತಕ್ಷಣ ಅವರು ನಮ್ಮ ಬಗ್ಗೆ ಬಹಳಷ್ಟು ಕಾಳಜಿಯಿಂದ ವಿಚಾರಿಸುತ್ತಿದ್ದರು. ಶ್ರೀಗಳಿಗೆ ನಮ್ಮ ವಿದ್ಯಾಭ್ಯಾಸದ ಬಗ್ಗೆ ಪ್ರತಿಯೊಂದು ವಿಚಾರವೂ ಗೊತ್ತಿತ್ತು. ನಾನೂ ಹಾಗೂ ನನ್ನ ತಮ್ಮ, ಅಕ್ಕ, ತಂಗಿಯ ಬಗ್ಗೆ ಸದಾ ನಾವು ಓದುತ್ತಿದ್ದ ಶಾಲೆಯಲ್ಲಿ ವಿಚಾರಿಸುತ್ತಿದ್ದರೇನೋ
ಎನ್ನುವ ಮಟ್ಟಿಗೆ ಶಾಲೆಯ ನಮ್ಮೆಲ್ಲಾ ತುಂಟಾಟಗಳ ಬಗ್ಗೆ ಹೇಳುತ್ತಿದ್ದರು.

ಒಂದು ಬಾರಿ ನನ್ನ ತಮ್ಮನನ್ನು ನೋಡಿದ ತಕ್ಷಣ ಶ್ರೀಗಳು ‘ಏನೋ ಶಾಲೆಯಲ್ಲಿ ಜಾಸ್ತಿ ಕೀಟಲೆ ಮಾಡ್ತಿಯಂತೆ, ಈಗಲೇ ಎಲ್ಲರನ್ನ ಗುಂಪು ಕಟ್ಟಿಕೊಂಡು ಗಲಾಟೆ ಮಾಡ್ತಿಯಂತೆ’ ಎಂದು ಗದರಿದ್ದರು. ಶ್ರೀಗಳಿಗೆ ನಮ್ಮ ಬಗ್ಗೆ ಅಷ್ಟು ಸಾವಿರಾರು ಮಕ್ಕಳಲ್ಲಿ ಹೇಗೆ ಗೊತ್ತಾಗುತ್ತೆ ಹೇಗೆ ನೆನಪಿಟ್ಟುಕೊಳ್ಳುತ್ತಾರೆ ಎಂದು ಯೋಚಿಸುತ್ತಿದ್ದೆವು. ಆನಂತರ ಶ್ರೀಗಳಿಗೆ ಹೆದರಿದ ನನ್ನ ತಮ್ಮ ಕನಸಿನ ಲ್ಲಿಯೂ ಕೀಟಲೆ ಮಾಡುವುದನ್ನ ಬಿಟ್ಟಿದ್ದ.

ಯಾವಾಗಲಾದರು ಶ್ರೀಗಳು ಹೀಗೆ ಹೇಳಿದ್ದನ್ನ ನೆನಪಿಸಿಕೊಂಡು ‘ಶ್ರೀಗಳಿಗೆ ಯಾರೋ ಚಾಡಿ ಹೇಳ್ತಾರೆ ಅದ್ಕೆ ಅವರು ನನ್ ನೋಡಿ ಹಾಗೆ ಅಂದ್ರು’ ಎಂದು ಬೆಪ್ಪು ಮೋರೆ ಹಾಕಿಕೊಳ್ಳುತ್ತಿದ್ದ. ನಾವು ಜೋರಾಗಿ ನಗುತ್ತಿದ್ದೆವು. ಶ್ರೀಗಳು ನಾವು ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿದ್ದರೆ ಅದರ ಬಗ್ಗೆ ಸ್ಪಷ್ಟವಾಗಿ ಮುಖ ನೋಡಿದ ತಕ್ಷಣವೇ ಹೇಳುತ್ತಿದ್ದರು. ‘ಯಾಕೋ ಈ ಬಾರಿ ನೀನು ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದೆ’ ಎಂದು ನನ್ನನ್ನ ನೋಡಿ ಒಮ್ಮೆ ಹೇಳಿದ್ದರು. ಶ್ರೀಗಳು ನಮಗಷ್ಟೇ ಅಲ್ಲ ಅವರ ಸುತ್ತಲೂ ಇರುವ ಮಕ್ಕಳನ್ನು ಮಾತನಾಡಿಸುವಾಗಲೂ ಅಷ್ಟೇ ಅವರ ಮುಖವನ್ನ ನೋಡಿ ‘ಯಾಕೆ ಶಾಲೆಗೆ ಚಕ್ಕರ್ ಹಾಕಿದ್ದೆ, ಜ್ವರ ಬಂದಿತ್ತಲ್ಲ ವಾಸಿಯಾಯ್ತಾ, ಮೇಷ್ಟ್ರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರಾ?’ ಎಂದೆಲ್ಲಾ ಕೇಳುತ್ತಿದ್ದರು.

ಶ್ರೀಗಳು ನಮ್ಮ ಭುಜ ಮುಟ್ಟಿ ಈ ಎಲ್ಲಾ ವಿಚಾರ ಕೇಳುವಾಗ ಅಮ್ಮ ಮಕ್ಕಳನ್ನು ಮುಂದೆ ನಿಲ್ಲಿಸಿಕೊಂಡು ಕೇಳಿದ ಹಾಗೆ ಭಾಸವಾಗುತ್ತಿತ್ತು. ಶ್ರೀಗಳು ಎಲ್ಲಾ ಹತ್ತು ಸಾವಿರ ಮಕ್ಕಳಿಗೆ ತಾಯಿಯಂತೇ ಆಗಿದ್ದರು ಜೊತೆಗೆ ಹಾಗೇ ಸಲಹುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!